ಭಾರತದಲ್ಲಿ ಜನಿಸುವ ಎಲ್ಲರೂ ಅನಂತ ಶಕ್ತಿಯುಳ್ಳವರು: ಸ್ವಾಮಿ ನಿರ್ಭಯಾನಂದ ಸರಸ್ವತಿ

KannadaprabhaNewsNetwork |  
Published : Nov 08, 2025, 02:15 AM IST
ಬಳ್ಳಾರಿಯ ಪಾರ್ವತಿ ನಗರದ ಎಸ್‌ಜಿ ಟವರ್ಸ್‌ ನಲ್ಲಿ ಜರುಗಿದ ಕಾರ್ತೀಕ ಸ್ನೇಹ ದೀಪ ಕಾರ್ಯಕ್ರಮದಲ್ಲಿ ವಿಜಯಪುರ ರಾಮಕೃಷ್ಣಾಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಾತನಾಡಿದರು.  | Kannada Prabha

ಸಾರಾಂಶ

ಬೇರೆಯವರ ಒಳಿತಿಗಾಗಿ ಜೊತೆಗೂಡುವುದೇ ಹಿಂದೂ ಧರ್ಮದ ಮೂಲ ಆಶಯವಾಗಿದೆ.

ಬಳ್ಳಾರಿ: "ನೀನು ಉದ್ಧಾರವಾಗು. ಬೇರೆಯವರು ಉದ್ಧಾರವಾಗಲು ನೆರವಾಗು " ಎಂದು ಹೇಳುವುದೇ ಭಾರತೀಯ ಆಚಾರ ಸಂಹಿತೆ.

ಇದುವೇ ಸನಾತನ ಧರ್ಮದ ಸಾರ ಎಂದು ವಿಜಯಪುರ ರಾಮಕೃಷ್ಣಾಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ತಿಳಿಸಿದರು.

ಇಲ್ಲಿನ ಪಾರ್ವತಿ ನಗರದ ಎಸ್‌.ಜಿ. ಟವರ್ಸ್‌ನಲ್ಲಿ ವಿವೇಕ ಮಂಟಪ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ತಿಕ ಸ್ನೇಹ ದೀಪ ಕಾರ್ಯಕ್ರಮದಲ್ಲಿ ಹಿಂದೂ ಧರ್ಮದ ಸಾರ ಹಾಗೂ ಮಹತ್ವ ಕುರಿತು ಅವರು ಮಾತನಾಡಿದರು.ಪೂಜೆ, ಪುನಸ್ಕಾರಗಳು, ಹೋಮ, ಹವನಗಳನ್ನು ಕೈಗೊಳ್ಳುವುದೇ ಹಿಂದೂ ಧರ್ಮ ಅಥವಾ ಸನಾತನ ಧರ್ಮ ಎಂದು ತಪ್ಪಾಗಿ ಅರ್ಥೈಸಲಾಗಿದೆ. ಸಮಾಜದ ಪ್ರಗತಿಗೆ ಕೈ ಜೋಡಿಸುವುದು. ಬೇರೆಯವರ ಒಳಿತಿಗಾಗಿ ಜೊತೆಗೂಡುವುದೇ ಹಿಂದೂ ಧರ್ಮದ ಮೂಲ ಆಶಯವಾಗಿದೆ. ಇದನ್ನು ಯಾರೂ ಹೇಳುವುದಿಲ್ಲ. ಸತ್ಯವನ್ನು ಮರೆಮಾಚಿ ಅಸತ್ಯವನ್ನು ಬಿತ್ತುವ ಷಡ್ಯಂತ್ರ್ಯಗಳು ಈ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಈಗಲೂ ಮುಂದುವರಿದಿದೆ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.

ಹಿಂದೂ ಸಮಾಜದಲ್ಲಿನ ಜಾತೀಯತೆ, ಅಸ್ಪೃಶ್ಯತೆ ಹಾಗೂ ಮಹಿಳಾ ಅಸಮಾನತೆಯ ದೋಷಗಳನ್ನು ಹಿಂದೂ ಧರ್ಮದ ತಲೆಗೆ ಕಟ್ಟಿದರು. ಹಿಂದೂ ಸಮಾಜದಲ್ಲಿನ ದೋಷಗಳಿಗೂ ಹಿಂದೂ ಧರ್ಮದ ದೋಷ ಎಂಬಂತೆ ಅಪ ಪ್ರಚಾರಗೊಳಿಸಿದರು. ಸಮಾಜದಲ್ಲಿನ ದೋಷಗಳನ್ನು ತಿದ್ದುವ ಕೆಲಸ ರಾಜ ಮಾಡಬೇಕು ಅಂದರೆ ಆಡಳಿತಾರೂಢ ಸರ್ಕಾರಗಳು ಮಾಡಬೇಕೇ ಹೊರತು ಹಿಂದೂ ಧರ್ಮದ ಕೆಲಸ ಅದಲ್ಲ. ಸನಾತನ ಧರ್ಮವನ್ನು ತಪ್ಪಾಗಿ ಅರ್ಥೈಸಿಕೊಂಡು ಧರ್ಮ ಮೂಲೋತ್ಪಾಟನೆ ಮಾಡುವ ಹುನ್ನಾರಗಳು ನಡೆಯುತ್ತಿದ್ದು, ಈ ಬಗ್ಗೆ ಜಾಗೃತರಾಗಬೇಕು ಎಂದರು.

ಭಾರತೀಯರಲ್ಲಿ ತ್ಯಾಗದ ಗುಣ ಹುಟ್ಟಿನಿಂದಲೇ ಬಂದಿದೆ. ಇಲ್ಲಿ ಜನಿಸುವ ಪ್ರತಿಯೊಬ್ಬರೂ ತ್ಯಾಗಿಗಳು ಹಾಗೂ ಅನಂತ ಶಕ್ತಿಯುಳ್ಳವರು. ಭಾರತೀಯರ ರಕ್ತ ಕಣಕಣದಲ್ಲೂ ತ್ಯಾಗ ಮನೋಭಾವ ಮೈಗೂಡಿದೆ. ಆದರೆ, ಭಾರತೀಯರಲ್ಲಿನ ಅನಂತ ಶಕ್ತಿ ಜಾಗೃತವಾಗುತ್ತಿಲ್ಲ. ಸಾಮಾನ್ಯ ಸ್ಥಿತಿಯಿಂದ ಅಸಮಾನ್ಯ ಸ್ಥಿತಿಯತ್ತ ಮುನ್ನುಗ್ಗುವ ದೃಢತೆ ಯುವ ಸಮುದಾಯಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದ ಪ್ರಗತಿಗೆ ಕೊಡುಗೆ ನೀಡುವವರೇ ಟಾರ್ಗೆಟ್‌:

ಅಮೆರಿಕದಲ್ಲಿ ಶೇ.15 ಜನರ ಶ್ರಮದ ಮೇಲೆ ಶೇ.85 ಜನ ಅವಲಂಬಿಸಿದ್ದಾರೆ. ಇದು ಅಲ್ಲಿನ ಸರ್ಕಾರಕ್ಕೆ ಗೊತ್ತಿದೆ. ಹೀಗಾಗಿ ಶೇ.15 ಜನರಿಗೆ ಬೇಕಾದ ಅನುಕೂಲಗಳನ್ನು ಮಾಡಿಕೊಡಲಾಗುತ್ತಿದೆ. ದುಡಿವ ಜನರಿಗೆ ಪ್ರೋತ್ಸಾಹ ಹಾಗೂ ಪೂರಕ ವಾತಾವರಣ ಕಲ್ಪಿಸಿಕೊಡಲಾಗುತ್ತಿದೆ. ಆದರೆ, ಭಾರತದಲ್ಲಿ ಅಂತಹ ವಾತಾವರಣವಿಲ್ಲ. ಇಡೀ ಭಾರತ ಬರೀ ನಾಲ್ಕು ಕೋಟಿ ಜನರಿಂದ ಮುನ್ನಡೆಯುತ್ತಿದೆ. ಅವರಿಂದಾಗಿಯೇ ತೆರಿಗೆ ಹಣ ಬರುತ್ತಿದೆ. ವಿಪರ್ಯಾಸ ಎಂದರೆ ದೇಶದ ಪ್ರಗತಿಗೆ ಕೊಡುಗೆ ನೀಡುತ್ತಿರುವವರನ್ನೇ ಸರ್ಕಾರಗಳು ಟಾರ್ಗೆಟ್ ಮಾಡಿ, ತೊಂದರೆ ಕೊಡುತ್ತಿವೆ. ನಾನಾ ಷಡ್ಯಂತ್ರ್ಯಗಳನ್ನು ರೂಪಿಸಲಾಗುತ್ತಿದೆ. ಅರ್ನಹರು, ಅಯೋಗ್ಯರು ಅಧಿಕಾರದಲ್ಲಿರುವುದೇ ಈ ಎಲ್ಲ ಸಮಸ್ಯೆಗಳಿಗೆ ಪ್ರಮುಖ ಕಾರಣ. ಅಧ್ಯಯನಹೀನತೆ ಹಲವು ಶತಮಾನಗಳಿಂದ ಈ ದೇಶವನ್ನು ಕಾಡುತ್ತಿದೆ. ಸನಾತನ ಧರ್ಮವನ್ನು ಉಳಿಸಲು ಬೆಳೆಸಲು ಪ್ರಯತ್ನಿಸುವವರನ್ನೇ ಟಾರ್ಗೆಟ್ ಮಾಡುವ ವಿಕೃತ ಮನಸ್ಸುಗಳು ಸದ್ದಿಲ್ಲದೆ ಕೆಲಸ ಮಾಡುತ್ತಿವೆ. ಕುಪ್ರಸಿದ್ಧ ಜನರು ಮಾಡುವ ಆರೋಪಗಳಿಗೆ ಎಂದೂ ಬೆಲೆ ಕೊಡಬಾರದು ಎಂದು ಸ್ವಾಮಿ ನಿರ್ಭಯಾನಂದ ಸರಸ್ವತಿ ತಿಳಿಸಿದರು.

ವಿವೇಕ ಮಂಟಪದ ಪ್ರಭುದೇವ ಕಪ್ಪಗಲ್ಲು, ಅಡವಿಸ್ವಾಮಿ, ಲೆಕ್ಕಪರಿಶೋಧಕರಾದ ಸಿದ್ಧರಾಮೇಶ್ವರಗೌಡ ಕರೂರು, ಜಿ.ಶಂಕರಗೌಡ, ಎರಿಸ್ವಾಮಿ ಚಿಲ್ಕರಾಗಿ, ಹಿರಿಯ ವಕೀಲ ಅಂಕಲಯ್ಯ, ಪಂಚಾಕ್ಷರಪ್ಪ ಮತ್ತಿತರರಿದ್ದರು.

PREV

Recommended Stories

83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್‌!