ಪ್ರತಿಯೊಬ್ಬರೂ ಶ್ರಮದಿಂದ ಬದುಕು ಕಟ್ಟಿಕೊಳ್ಳಬೇಕು: ಸಂಸದ ರಾಘವೇಂದ್ರ

KannadaprabhaNewsNetwork | Published : Mar 8, 2024 1:55 AM

ಸಾರಾಂಶ

ಶ್ರಮದ ದುಡಿಮೆ ಜನರಲ್ಲಿ ಇತ್ತೀಚಿನ ದಿನದಲ್ಲಿ ಕಡಿಮೆ ಆಗುತ್ತಿದೆ. ಶ್ರಮವಿಲ್ಲದೇ ಗಳಿಸುವ ಭಾಗ್ಯ ತಾತ್ಕಾಲಿಕ ಆಗುವುದು. ಆದ್ದರಿಂದ ಪ್ರತಿಯೊಬ್ಬರು ಶ್ರಮ ವಹಿಸಿ ದುಡಿದು, ಗಳಿಸಿ ತಿನ್ನುವ ಕಾಯಕ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂಸದ ಬಿ.ವೈ ರಾಘವೇಂದ್ರ ಶಿಕಾರಿಪುರದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ಶ್ರಮದ ದುಡಿಮೆ ಜನರಲ್ಲಿ ಇತ್ತೀಚಿನ ದಿನದಲ್ಲಿ ಕಡಿಮೆ ಆಗುತ್ತಿದೆ. ಶ್ರಮವಿಲ್ಲದೇ ಗಳಿಸುವ ಭಾಗ್ಯ ತಾತ್ಕಾಲಿಕ ಆಗುವುದು. ಆದ್ದರಿಂದ ಪ್ರತಿಯೊಬ್ಬರು ಶ್ರಮ ವಹಿಸಿ ದುಡಿದು, ಗಳಿಸಿ ತಿನ್ನುವ ಕಾಯಕ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.

ತಾಲೂಕಿನ ಕಾಳೇನಹಳ್ಳಿ ಶಿವಯೋಗಾಶ್ರಮದಲ್ಲಿ ಕಾರಣಿಕ ಲಿಂ.ಹಾನಗಲ್ ಕುಮಾರ ಮಹಾಶಿವಯೋಗಿಗಳ 94ನೇ ಹಾಗೂ ಲಿಂ. ರೇವಣಸಿದ್ದ ಮಹಾಸ್ವಾಮೀಜಿ 3ನೇ ವರ್ಷದ ಪುಣ್ಯ ಸ್ಮರಣೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಕೃತಿ ಪ್ರತಿಬಿಂಬ ಭವ್ಯತೆಯ ಸಂಕೇತ ಆಗಿರುವ ಮಠ- ಮಂದಿರಗಳು ಕಾಯಕ ದಾಸೋಹಕ್ಕೆ ಹೆಚ್ಚಿನ ಮಹತ್ವ ನೀಡಿವೆ. ಈ ದಿಸೆಯಲ್ಲಿ ಶಿವಯೋಗಾಶ್ರಮದ ಲಿಂ.ರುದ್ರಮುನಿ ಶಿವಯೋಗಿಗಳು ಹಾಗೂ ಲಿಂ.ರೇವಣಸಿದ್ದ ಮಹಾಸ್ವಾಮಿಗಳು ಖುದ್ದು ಕಾಯಕ ದಾಸೋಹದ ಮೂಲಕ ಶರಣ ಸಂಸ್ಕೃತಿ ಪರಂಪರೆ ಎತ್ತಿಹಿಡಿದು ಪರಿಚಯಿಸಿದ ಹಿರಿಮೆ ಹೊಂದಿದ್ದಾರೆ ಎಂದು ತಿಳಿಸಿದರು.

ಹಾನಗಲ್ ಕುಮಾರ ಮಹಾಸ್ವಾಮೀಜಿ ಮಲೆನಾಡಿನಲ್ಲಿ ಶಿವಯೋಗ ಮಂದಿರದ ಅಗತ್ಯತೆ ಅರಿತು ವಿವಿಧ ಮಠದ ಶ್ರೀಗಳ ಒತ್ತಾಸೆ ಮೇರೆಗೆ ಕಾಳೇನಹಳ್ಳಿಯಲ್ಲಿ ಶಿವಯೋಗ ಮಂದಿರವನ್ನು ಸ್ಥಾಪಿಸಿದ್ದಾರೆ. ವಿಭೂತಿ ತಯಾರಿಕೆ ಜತೆಗೆ ವಿವಿಧ ಮಠಗಳಿಗೆ ಪೀಠಾಧಿಪತಿಯಾಗಿ ನಿಯೋಜನೆಗೊಳ್ಳುವ ವಟುಗಳಿಗೆ ಶ್ರೀ ಮಠದಲ್ಲಿ ತರಬೇತಿ ನೀಡಲಾಗುತ್ತಿತ್ತು. ರೇಣುಕಾಚಾರ್ಯರು, ಪಂಚ ಪೀಠಾಧಿಪತಿಗಳು, ಶಿವಶರಣರ ಸಹಿತ ಸ್ವಾಮೀಜಿಗಳು ತೋರಿಸಿದ ಧಾರ್ಮಿಕ ಮಾರ್ಗದಲ್ಲಿ ನಾವು ನಡೆಯಬೇಕಾಗಿದೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಶಿವಯೋಗಾಶ್ರಮದ ಪೀಠಾಧಿಪತಿ ಡಾ.ಸಿದ್ದಲಿಂಗ ಶ್ರೀ ಮಾತನಾಡಿ, ಹಾನಗಲ್ ಕುಮಾರ ಮಹಾಶಿವಯೋಗಿಗಳು, ಲಿಂ.ರುದ್ರಮುನಿ ಶ್ರೀಗಳು, ಲಿಂ.ರೇವಣಸಿದ್ದ ಮಹಾಸ್ವಾಮಿಗಳು ಧಾರ್ಮಿಕ ಕಾರ್ಯದ ಮೂಲಕ ಜನಮಾನಸದಲ್ಲಿ ಸದಾ ಶಾಶ್ವತವಾಗಿದ್ದಾರೆ ಎಂದರು.

ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ವೀರಶೈವ ಸಮಾಜ ಅಧ್ಯಕ್ಷ ಈರೇಶ್, ತಾಲೂಕು ಕುಂಚಟಿಗ ಸಮಾಜದ ಅಧ್ಯಕ್ಷ ಕೆ.ವಿ. ಲೋಹಿತ್, ಸುನಂದಮ್ಮ ಲೋಣಿ, ನ್ಯಾಯವಾದಿ ರುದ್ರಪ್ಪಯ್ಯ, ರಾಮಣ್ಣ, ಶ್ರೀ ಮಠದ ಆಡಳಿತಾಧಿಕಾರಿ ಜಿ.ಎ. ಹಿರೇಮಠ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ಕುಮದ್ವತಿ, ವೃಷಭಾವತಿ ನದಿಗಳ ಸಂಗಮದಲ್ಲಿ ಶಾಸ್ತ್ರೋಕ್ತವಾಗಿ ಗಂಗಾರತಿ, ನಂತರ ಅಲಂಕೃತ ಮಂಟಪದಲ್ಲಿ ತೆಪ್ಪೋತ್ಸವ ನಡೆಯಿತು. ಪಟಾಕಿ ಸಿಡಿಮದ್ದಿನ ಆರ್ಭಟ ಮನಸೂರೆಗೊಂಡಿತು.

- - -

-5ಕೆಎಸ್.ಕೆಪಿ1:

ಧಾರ್ಮಿಕ ಸಭೆಯನ್ನು ಸಂಸದ ರಾಘವೇಂದ್ರ ಉದ್ಘಾಟಿಸಿದರು.

Share this article