ಶಾಸಕಿ ನಯನಾ ಮೋಟಮ್ಮ ಅವರನ್ನು ಭೇಟಿ ಮಾಡಿ ಮನವಿ
ಆಲ್ದೂರು ಪಟ್ಟಣದ ರಸ್ತೆ ಅಗಲೀಕರಣ ಕಾಮಗಾರಿಯನ್ನು ಇಲಾಖೆಯ ನಿಯಮಾವಳಿಗಳಂತೆ ಕೈಗೊಳ್ಳ ಬೇಕು ಹಾಗೂ ಜನಾಭಿಪ್ರಾಯ ಪಡೆದು ಕಾಮಗಾರಿ ನಡೆಸಬೇಕು ಎಂದು ಆಲ್ದೂರು ರಸ್ತೆ ಸುರಕ್ಷತಾ ಹಿತ ರಕ್ಷಣಾ ಸಮಿತಿ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಗುರುವಾರ ಶಾಸಕಿ ನಯನಾ ಮೋಟಮ್ಮ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.ಪಟ್ಟಣದಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ, ಪಾರ್ಕಿಂಗ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿಗೆ ರಸ್ತೆ ಅಗಲೀಕರಣ ಪರಿಹಾರವಾಗಲಿದೆ. ಶಾಸಕರ ಪ್ರಯತ್ನದಿಂದ ರಸ್ತೆ ಅಗಲೀಕರಣಕ್ಕೆ ಅನುದಾನ ದೊರೆ ತಿದ್ದು, ಪಿಡಬ್ಲ್ಯುಡಿ ಹಾಗೂ ರಸ್ತೆ ಪ್ರಾಧಿಕಾರದ ನಿಯಮದಂತೆ ರಸ್ತೆ ಮಧ್ಯಭಾಗದಿಂದ ಎರಡೂ ಬದಿಗೆ ತಲಾ 45 ಅಡಿ ಅಗಲೀಕರಣಕ್ಕೆ ಪ್ರಸ್ತಾವಿಸಲಾಗಿದೆ.ಈ ಕುರಿತು ನಡೆದ ಸಾರ್ವಜನಿಕ ಸಭೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲ ಅಂಗಡಿ ಹಾಗೂ ಮನೆ ಮಾಲೀಕರು ಅಗಲೀಕರಣದ ವಿಸ್ತಾರವನ್ನು ಕಡಿಮೆ ಮಾಡುವಂತೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪಟ್ಟಣದ ಸರ್ವ ಸಂಘಟನೆಗಳು ಹಾಗೂ ಸಾರ್ವಜನಿಕರು ಒಗ್ಗೂಡಿ, ಭವಿಷ್ಯದ ಹಿತದೃಷ್ಟಿಯಿಂದ ಇಲಾಖೆ ನಿಯಮಾನುಸಾರ ರಸ್ತೆ ಅಗಲೀಕರಣ ನಡೆಸಲು ಬೆಂಬಲ ವ್ಯಕ್ತಪಡಿಸಿದ್ದಾರೆ.ಶಾಸಕರ ಅಧ್ಯಕ್ಷತೆಯಲ್ಲಿ ಬಹಿರಂಗ ಸಭೆ ನಡೆಸಿ ಜನಾಭಿಪ್ರಾಯ ಪಡೆಯಬೇಕು ಎಂದು ಸಮಿತಿ ಒತ್ತಾಯಿ ಸಿತು. ಮನವಿ ಸ್ವೀಕರಿಸಿದ ಶಾಸಕಿ ನಯನಾ ಮೋಟಮ್ಮ ಅವರು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಜನಾಭಿಪ್ರಾಯದಂತೆ ಸರ್ವೆ ನಡೆಸುವುದಾಗಿ ತಿಳಿಸಿದ್ದಾರೆ ಎಂದು ಸಮಿತಿ ಪದಾಧಿಕಾರಿಗಳು ಹೇಳಿದರು.ಸಮಿತಿಯ ಪದಾಧಿಕಾರಿಗಳಾದ ಹೆಡದಾಳು ಕುಮಾರ್, ನವರಾಜು ಎಚ್., ಲತೇಶ್ ಗೌಡ, ಅಶೋಕ್ ಡಿ.ಬಿ., ನೂರ್ ಮಹಮ್ಮದ್, ಮಾಜಿ ಪಂಚಾಯಿತಿ ಸದಸ್ಯರಾದ ಸುಂದರ್ ಗಾಳಿಗಂಡಿ, ಗೋಪಾಲ್ ಚಿಕ್ಕಮಾಗರವಳ್ಳಿ, ಮಂಜುನಾಥ್ ಹೆಡದಾಳು, ಪುಟ್ಟರಾಜು, ನಾಗೇಶ್ ಡಿ.ಜೆ., ಯೋಗೇಶ್, ಗಣೇಶ್ ಕಠಾರದಹಳ್ಳಿ ಉಪಸ್ಥಿತರಿದ್ದರು.