ಆಸೆಗೆ ಅಥವಾ ಕಾಮಕ್ಕೆ ತಡೆ ಬಿದ್ದಾಗ ಅದು ತೀವ್ರ ಕೋಪ ಹಾಗೂ ದ್ವೇಷವಾಗಿ ಪರಿವರ್ತನೆಗೊಳ್ಳುತ್ತದೆ. ಈ ಕಾಮ- ಕ್ರೋಧಗಳಿಂದ ಪ್ರಚೋದಿತಗೊಳ್ಳುವ ಮನಸ್ಸು ಮತ್ತು ಇಂದ್ರಿಯಗಳು ಶರೀರದಲ್ಲಿ ನಿರಂತರವಾಗಿ ಅಶಾಂತಿಯನ್ನು ಸೃಷ್ಟಿಸುತ್ತಿರುತ್ತವೆ.
ಶಿರಸಿ: ದಿನವೂ ಬೆಳಗ್ಗೆ ಪ್ರತಿಯೊಬ್ಬರ ಮನೆಯಲ್ಲಿಯೂ ಸಂಧ್ಯಾವಂದನೆ, ದೇವಪೂಜೆ, ಸ್ತೋತ್ರ- ಸಹಸ್ರನಾಮ ಪಠಣ, ಯೋಗಾಸನ ಮತ್ತು ಪ್ರಾಣಾಯಾಮಗಳು ನೆರವೇರಬೇಕು ಎಂದು ಸೋಂದಾ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ಸಂಕಲ್ಪಿತ ಚಾತುರ್ಮಾಸ ವ್ರತದಲ್ಲಿ ನಿರತಾರದ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಹಾಗೂ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳವರ ಸೇವೆಯನ್ನು ಶ್ರದ್ಧಾಭಕ್ತಿಯಿಂದ ಮಾಡಿದ ಶಾಂತಪುರ ಸೀಮೆ ಹಾಗೂ ಮತ್ತಿಘಟ್ಟ ಭಾಗದ ಶಿಷ್ಯವೃಂದಕ್ಕೆ ಆಶೀರ್ವಚನ ನೀಡಿದರು.
ಹನ್ನೊಂದು ದ್ವಾರಗಳನ್ನು ಹೊಂದಿರುವ ಈ ಶರೀರವೇ ಒಂದು ''''''''ಪುರ''''''''. ಶರೀರವೆಂಬ ಈ ಪುರದಲ್ಲಿ ಸದಾ ಗಲಾಟೆ ಅಥವಾ ಅಶಾಂತಿಯನ್ನು ಉಂಟುಮಾಡುವ ಆಂತರಿಕ ಶಕ್ತಿಗಳೆಂದರೆ ಮನಸ್ಸು, ಬುದ್ಧಿ ಮತ್ತು ಇಂದ್ರಿಯಗಳು. ರಜೋಗುಣದಿಂದ ಜನ್ಮ ತಳೆಯುವ ಕಾಮ ಮತ್ತು ಕ್ರೋಧಗಳು ಅಣ್ಣ- ತಮ್ಮಂದಿರಂತೆ ಪರಸ್ಪರ ಸಂಬಂಧ ಹೊಂದಿದ್ದು, ಇವು ಮನಸ್ಸು, ಬುದ್ಧಿ ಮತ್ತು ಇಂದ್ರಿಯಗಳಲ್ಲಿ ಅಡಗಿ ಕುಳಿತಿರುತ್ತವೆ ಎಂದರು.ಆಸೆಗೆ ಅಥವಾ ಕಾಮಕ್ಕೆ ತಡೆ ಬಿದ್ದಾಗ ಅದು ತೀವ್ರ ಕೋಪ ಹಾಗೂ ದ್ವೇಷವಾಗಿ ಪರಿವರ್ತನೆಗೊಳ್ಳುತ್ತದೆ. ಈ ಕಾಮ- ಕ್ರೋಧಗಳಿಂದ ಪ್ರಚೋದಿತಗೊಳ್ಳುವ ಮನಸ್ಸು ಮತ್ತು ಇಂದ್ರಿಯಗಳು ಶರೀರದಲ್ಲಿ ನಿರಂತರವಾಗಿ ಅಶಾಂತಿಯನ್ನು ಸೃಷ್ಟಿಸುತ್ತಿರುತ್ತವೆ. ಈ ಗಲಾಟೆಯನ್ನು ಹದ್ದುಬಸ್ತಿಗೆ ತಂದು, ಎಲ್ಲ ಪುರಗಳನ್ನು ಶಾಂತಪುರವನ್ನಾಗಿ ಪರಿವರ್ತಿಸಲು ಶರೀರಕ್ಕೆ ಒಬ್ಬ ಸಮರ್ಥ ಪೊಲೀಸ್ ಅಥವಾ ನಿಯಂತ್ರಕನ ಅಗತ್ಯವಿದೆ. ನಮ್ಮ ಶರೀರದಲ್ಲಿ ಆ ನಿಯಂತ್ರಕನ ಪಾತ್ರವನ್ನು ವಹಿಸುವುದೇ ಪ್ರಾಣ. ಉಸಿರಾಟವು ಕೇವಲ ಮೂಗು- ಬಾಯಿಯ ಮೂಲಕ ನಡೆಯುವ ಕ್ರಿಯೆಯಷ್ಟೇ ಅಲ್ಲದೆ, ಶರೀರದ ಒಳಗಿನ ಆಹಾರ ಜೀರ್ಣಕ್ರಿಯೆ ಸೇರಿದಂತೆ ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತದೆ ಎಂದರು. ಈ ಪ್ರಾಣವು ತನ್ನ ಕಾರ್ಯವೈಖರಿಯಿಂದ ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನ ಎಂಬ ಐದು ವೃತ್ತಿಗಳಾಗಿ ವಿಭಾಗಿಸಲ್ಪಟ್ಟಿದೆ. ಪ್ರಾಣಗಳಿಗೆ ಕಾಮ- ಕ್ರೋಧಗಳ ಲೇಪನವಿಲ್ಲದಿರುವುದರಿಂದ, ಅವು ಯಾವುದೇ ಗಲಾಟೆಯನ್ನು ಮಾಡದೆ ಅಹೋರಾತ್ರಿ ನಿರಂತರವಾಗಿ ಹಾಗೂ ನಿಸ್ವಾರ್ಥವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುತ್ತವೆ ಎಂದರು.ಇದೇ ವೇಳೆಯಲ್ಲಿ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳು ಈ ಪುರಸ್ಕಾರಕ್ಕೆ ಭಾಜನರಾದರು. ಸಾಧಕ ವಿದ್ಯಾರ್ಥಿಗಳಿಗೆ ಶ್ರೀಗಳು ಮಂತ್ರಾಕ್ಷತೆ ನೀಡಿ, ಆಶೀರ್ವದಿಸಿದರು. ಈ ಸಂದರ್ಭದಲ್ಲಿ ವಿಶ್ವನಾಥ ಹೆಗಡೆ, ಶ್ರೀನಿವಾಸ ಭಾಗ್ವತ್ ಮತ್ತಿಘಟ್ಟ, ಮಂಜುನಾಥ ಭಟ್ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.