ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಅಲ್ಪಸಂಖ್ಯಾತರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಜೊತೆಗೆ ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿ, ರಾಜ್ಯ ಸರ್ಕಾರ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಮುಂದಾಗಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಅಫ್ಜಲ್ ಷರೀಪ್ ತಿಳಿಸಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಬಂದ ಬಳಿಕ ಸಾಕಷ್ಟು ಮುಸ್ಲಿಂ ಕಾಲೋನಿಗಳು ಅಭಿವೃದ್ಧಿಯಾಗಿವೆ. ವಿಶೇಷ ಯೋಜನೆಗಳು ಸಹ ಸಮುದಾಯಕ್ಕೆ ಬಂದಿದೆ. ವೈಯಕ್ತಿಕ ಹಾಗೂ ಗುಂಪು ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಘಟಿತರಾಗಬೇಕು. ಈ ನಿಟ್ಟಿನಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕಾಂಗ್ರೆಸ್ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಕಾಂಗ್ರೆಸ್ ಪಕ್ಷದಿಂದ ಸದಸ್ಯತ್ವ ನೊಂದಣಿ ಅಭಿಯಾನ ಆರಂಭವಾಗಿದ್ದು, ಪ್ರತಿಯೊಬ್ಬರು ಕಾಂಗ್ರೆಸ್ ಸದಸ್ಯತ್ವವನ್ನು ಪಡೆದುಕೊಳ್ಳುವ ಮೂಲಕ ಪಕ್ಷದ ವೇದಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಬೂತ್ ಮಟ್ಟದಲ್ಲಿ ಸದಸ್ಯತ್ವ ಅಭಿಯಾನ ನಡೆಯಲಿದ್ದು, ಇದನ್ನು ಯಶಸ್ವಿಗೊಳಿಸಲು ಎಲ್ಲರು ಶ್ರಮಿಸಬೇಕು ಎಂದು ತಿಳಿಸಿದರು.ಜಾತಿ ಗಣತಿಯಲ್ಲಿ ಮುಸ್ಲಿಂ ಎಂದು ಬರೆಸಿ: ರಾಜ್ಯ ಸರ್ಕಾರ ರಾಜ್ಯಾದ್ಯಂತ ಜಾತಿ ಗಣತಿಯನ್ನು ಆರಂಭಿಸಿದೆ. ಈ ಸಂದರ್ಭದಲ್ಲಿ ನಮ್ಮ ಕಾಲೋನಿ ಹಾಗೂ ಮನೆಗಳಿಗೆ ಬರುವ ಸಮೀಕ್ಷಾ ತಂಡಗಳಿಗೆ ನಿಖರವಾದ ಮಾಹಿತಿ ನೀಡಿ, ಧರ್ಮ ಕಲಂನಲ್ಲಿ ಇಸ್ಲಾಂ ಎಂದು, ಜಾತಿ ಕಾಲಂನಲ್ಲಿ ಮುಸ್ಲಿಂ ಎಂದು ಬರೆಸುವ ಮೂಲಕ ನಮ್ಮ ಜನಸಂಖ್ಯೆಯ ಸ್ಪಷ್ಟತೆಯನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಮನೆ ಬಾಗಿಲಿಗೆ ಸಮೀಕ್ಷಾ ತಂಡದವರು ಬಂದಾಗ ೬೦ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳುತ್ತಾರೆ. ಇದನ್ನು ಸ್ಪಷ್ಟವಾಗಿ ಹೇಳುವ ಮೂಲಕ ನಮ್ಮ ಆರ್ಥಿಕ ಸ್ಥಿತಿಗತಿಗಳ ಬಗೆಯು ತಿಳಿಸಿ, ಇದರಿಂದ ನೀವು ನೀಡುವ ದತ್ತಾಂಶಗಳಿಂದ ಮುಂದಿನ ದಿನಗಳಲ್ಲಿ ಯೋಜನೆಗಳನ್ನು ರೂಪಿಸಲು ಹಾಗೂ ಸರ್ಕಾರಿ ಸವಲತ್ತುಗಳು, ಮೀಸಲಾತಿ, ಶೈಕ್ಷಣಿಕ, ರಾಜಕೀಯ ಪ್ರಾತಿನಿಧ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ ಪ್ರತಿಯೊಂದು ಕುಟುಂಬವು ಸಮೀಕ್ಷೆಯಲ್ಲಿ ಪಾಲ್ಗೋಳ್ಳಬೇಕು ಎಂದು ಮುನ್ನಾ ಮನವಿ ಮಾಡಿದರು.
ಸಭೆಯಲ್ಲಿ ಕೆಪಿಸಿಸಿ ಸದಸ್ಯ ಸೈಯದ್ ರಫಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಸಿಫ್‌ವುಲ್ಲಾ, ಉಪಾಧ್ಯಕ್ಷ ಮಹಮದ್ ಅಫ್ಜರ್, ಉಪಾಧ್ಯಕ್ಷ ಅಪ್ಜರ್ ಅಹಮದ್, ಅಯುಬ್‌ಖಾನ್, ಎಎಚ್‌ಎನ್ ಖಾನ್, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಸಾಧಿಕ್, ಸೋಯಿಲ್ ಅಹಮದ್ ಸಮಿವುಲ್ಲಾ, ಇರ್ಷಾದ್, ಸೈಯದ್ ಇಷಾದ್, ಚಂದಕವಾಡಿ ಅಬ್ದುಲ್ ಗಾಫರ್ ಮೊದಲಾದವರು ಇದ್ದರು.