- ಕೇರಳ ಹಿಂದೂ ಸಮಾಜದಿಂದ 3 ನೇ ವರ್ಷದ ವಾರ್ಷಿಕೋತ್ಸವ ಹಾಗೂ 4 ನೇ ವರ್ಷದ ಓಣಂ ಹಬ್ಬ ಆಚರಣೆ
ಮಲೆಯಾಳಿ ಭಾಷೆ ಆಡುವ ರಾಜ್ಯಗಳಲ್ಲಿ ಹೆಚ್ಚಾಗಿ ಓಣಂ ಹಬ್ಬ ಆಚರಿಸುತ್ತಾರೆ. ಆದರೆ, ಓಣಂ ಹಬ್ಬ ಮಲೆಯಾಳಿಗಳ ಹಬ್ಬವಾಗಿರದೆ ಎಲ್ಲಾ ಹಿಂದೂಗಳ ಹಬ್ಬವಾಗಿದೆ ಎಂದು ಕೇರಳ ರಾಜ್ಯದ ಮಣ್ಣಾರ್ ಕಾಡ್ ನ ಯುವ ಆಧ್ಯಾತ್ಮಿಕ ಪ್ರವಚನಕಾರ ಹಾಗೂ ಅಮೃತ ಟಿವಿ ಸಂದ್ಯಾದೀಪಂ ನಿರೂಪಕ ಪಿ.ಎಂ.ವ್ಯಾಸನ್ ತಿಳಿಸಿದರು.
ಭಾನುವಾರ ಬಿ.ಎಚ್.ಕೈಮರದ ನಾರಾಯಣ ಗುರು ಸಮುದಾಯ ಭವನದಲ್ಲಿ ಕೇರಳ ಹಿಂದೂ ಸಮಾಜದ 3ನೇ ವರ್ಷದ ವಾರ್ಷಿಕೋತ್ಸವ ಹಾಗೂ 4 ನೇ ವರ್ಷದ ಓಣಂ ಹಬ್ಬ ಆಚರಣೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ನಾನು ಹಿಂದೂ ಎಂದು ಅಭಿಮಾನದಿಂದ ಹೇಳಲು ಹಿಂಜರಿಕೆ ಬೇಕಾಗಿಲ್ಲ. ಹಿಂದೂ ಎಂಬ ಧರ್ಮ ಸಂಘಟನೆಗೆ ನಮ್ಮನ್ನು ಸೇರಿಸಿದ ಆದಿ ಶಂಕರಾರ್ಚಾರರ ಪಾದಗಳಿಗೆ ನಮಿಸಬೇಕಾಗಿದೆ. ಅದ್ವೈತ ಸಿದ್ದಾಂತವನ್ನು ಲೋಕಕ್ಕೆ ಪರಿಚಯಿಸಿದ ಶಂಕರಾಚಾರ್ಯರ ಮಣ್ಣಲ್ಲಿ ನಿಂತು ಪ್ರವಚನ ಮಾಡಲು ನನಗೆ ಹೆಮ್ಮೆ ಎನಿಸಿದೆ. ಈಶ್ವರ, ಬ್ರಹ್ಮ,ವಿಷ್ಣು, ಮಹಾದೇವ, ದೇವಿ ಸೇರಿದಂತೆ ಎಲ್ಲಾ ದೇವರು ಒಂದೇ ಆಗಿದ್ದು ವಿವಿಧ ರೂಪಗಳಲ್ಲಿದೆ. ಎಲ್ಲಾ ದೇವರ ಚೈತನ್ಯಒಂದೇ ಆಗಿದೆ. ಎಲ್ಲರಲ್ಲೂ ಇರುವುದು ಸನಾತನ ಧರ್ಮ. ಹಿಂದೂಗಳ ಸಂಘಟನೆಯಾಗಬೇಕಾದ ಅಗತ್ಯವಿದೆ. ಸಂಘಟನೆಯಿಂದ ಶಕ್ತಿಯುತರಾಗಬಹುದು. ವಿದ್ಯೆಯಿಂದ ಪ್ರಬುದ್ಧರಾಗಬಹುದು ಎಂದರು.ಮುಖ್ಯ ಅತಿಥಿಯಾಗಿದ್ದ ಶ್ರೀ ನಾರಾಯಣಗುರು ಸಮಾಜದ ತಾಲೂಕು ಅಧ್ಯಕ್ಷ ಪಿ.ಆರ್.ಸದಾಶಿವ ಮಾತನಾಡಿ, ಕೇರಳ ಹಿಂದೂ ಸಮಾಜ ಜಿಲ್ಲೆಯಲ್ಲಿ ಸಂಘಟನೆಯಾಗುತ್ತಿದೆ. ನಮ್ಮ ತಾಲೂಕು ಸಂಘ ಜಿಲ್ಲೆಗೆ ಮಾದರಿ ಸಂಘ ವಾಗಬೇಕಾಗಿದೆ. ಕೇರಳ ಹಿಂದೂ ಸಮಾಜದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಕಲಿಸಬೇಕು. ಗ್ರಾಮ ಪಂಚಾಯಿತಿ ಮಟ್ಟ ದಲ್ಲೂ ನಾಯಕತ್ವ ಬೆಳೆಯಬೇಕು ಹಾಗೂ ಸಂಘಟನೆಯಾಗಬೇಕಾಗಿದೆ. ಮುಂದಿನ ಪೀಳಿಗೆಗೆ ನಾವು ಉತ್ತಮ ಸಮಾಜ ಹಸ್ತಾಂತರಿಸಬೇಕು. ಸಮಾಜದ ಪ್ರತಿಯೊಬ್ಬರೂ ಇನ್ನೊಬ್ಬರನ್ನು ಪ್ರೀತಿ, ಗೌರವದಿಂದ ಕಾಣಬೇಕು. ಸಮಾಜಕ್ಕೆ ನಾವು ಏನು ಕೊಡುಗೆಯಾಗಿ ನೀಡಿದ್ದೇವೆ ಎಂದು ನಾವು ಆತ್ಮವಲೋಕನ ಮಾಡಿಕೊಳ್ಳಬೇಕಾಗಿದೆ. ನಾವು ಸ್ವಾರ್ಥಕ್ಕಾಗಿ ಬದುಕದೆ ನಮ್ಮ ಬದುಕಿನ ಹೆಜ್ಜೆ ಗುರುತನ್ನು ಬಿಟ್ಟು ಹೋಗಬೇಕು ಎಂದು ಕರೆ ನೀಡಿದರು.
ಸರ್ಕಾರದ ಪ್ರತಿನಿಧಿಗಳು ಜನಗಣತಿಗಾಗಿ ಮನೆ, ಮನೆಗೆ ಬರಲಿದ್ದಾರೆ. ಕೇರಳ ಹಿಂದೂ ಸಮಾಜದವರು ಎಚ್ಚರಿಕೆಯಿಂದ ಬರೆಯಬೇಕು. ಇಲ್ಲದಿದ್ದರೆ ಮುಂದೆ ನಮ್ಮ ಸಮಾಜಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯ ಸಿಗುವುದಿಲ್ಲ ಎಂದರು.
ಓಣಂ ಪ್ರಯುಕ್ತ ಆಕರ್ಷಕ ಹೂವಿನ ರಂಗೋಲಿ ಹಾಕಲಾಗಿತ್ತು. ಅತಿಥಿಗಳಾಗಿ ಕೇರಳ ಹಿಂದೂ ಸಮಾಜದ ಮುಖಂಡ ಶೀಗುವಾನಿ ಕೆ.ಎನ್.ಶಿವದಾಸ್, ಗಾಂದಿಗ್ರಾಮ ನಾಗರಾಜ, ಬಿ.ಎಚ್.ಕೈಮರ ಬಿನು, ಕೆರೆಮನೆ ಜನಾರ್ದನ್, ಚಿಟ್ಟಿಕೊಡುಗೆ ಮನೋಹರ್,ಕಿಚ್ಚಬ್ಬಿ ತಂಗಪ್ಪನ್, ಸಂಚಾಲಕ ಪಿ.ಆರ್. ಅರವಿಂದ್, ಕೇರಳದ ಮುಖಂಡ ಸ್ವಾಮಿನಾಥನ್ಕು.ವಿಶ್ರೇಯ, ಸುಧಾಕರ ಆಚಾರ್, ಸೌಖ್ಯ ಇದ್ದರು.