ಶಿವಮೊಗ್ಗ: ಮಲೆನಾಡಿನ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಅರಣ್ಯ ಕ್ಷೇತ್ರಗಳಲ್ಲಿ ಜೀವ ವೈವಿಧ್ಯತೆ ಕಾಪಾಡಲು ಮಲೆನಾಡು ಸುಸ್ಥಿರ ಅಭಿವೃದ್ಧಿ ಅಜೆಂಡಾ ಜಾರಿ ಮಾಡಬೇಕು. ಈ ಸುಸ್ಥಿರ ಅಭಿವೃದ್ಧಿ ಅಜೆಂಡಾ ಜಾರಿಗೆ ರಾಜ್ಯ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಬೇಕು ಎಂದು ವೃಕ್ಷಲಕ್ಷ ಆಂದೋಲನದ ನಿಯೋಗ ಒತ್ತಾಯಿಸಿದೆ.
ರಾಜ್ಯದ ಜೀವವೈವಿಧ್ಯ ಜ್ವಲಂತ ವಿಷಯ ಕುರಿತು ಜೀವವೈವಿಧ್ಯ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯ ಕಾರ್ಯದರ್ಶಿಗಳ ಗಮನ ಸೆಳೆದ ರಾಜ್ಯದ ವಿವಿಧ ಪರಿಸರ ಸಂಸ್ಥೆಗಳ ಪ್ರತಿನಿಧಿಗಳ ನಿಯೋಗ ಬೆಂಗಳೂರಿನಲ್ಲಿ ರಾಜ್ಯ ಜೀವವೈಧ್ಯ ಮಂಡಳಿ ಕಚೇರಿಗೆ ಭೇಟಿ ನೀಡಿ ರಾಜ್ಯದ ಹಲವು ಜೀವವೈವಿಧ್ಯ ಪ್ರಕರಣ, ಪರಿಸ್ಥಿತಿ ಬಗ್ಗೆ ಚರ್ಚಿಸಿ, ಶಿಫಾರಸು ಸಲ್ಲಿಸಿತು. ಅರಣ್ಯ-ಪರಿಸರ ಸಚಿವರ ಗಮನ ಸೆಳೆಯಿತು.ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರಿನಿವಾಸಲು, ಅರಣ್ಯ ಕಾರ್ಯದರ್ಶಿ ಮನೋಜಕುಮಾರ, ಪಿ.ಸಿ.ಸಿ.ಎಫ್ ಮೀನಾಕ್ಷಿ ನೇಗಿ ಅವರನ್ನು ಭೇಟಿ ಮಾಡಿ ಶಿವಮೊಗ್ಗ ಜಿಲ್ಲೆಯ 90 ಹಳ್ಳಿಗಳಲ್ಲಿ ದೇವರ ಕಾನು ಸಂರಕ್ಷಣಾ ಯೋಜನೆ ಜಾರಿ ಮಾಡಲು ಜೀವ ವೈವಿಧ್ಯ ಮಂಡಳಿ ಶಿಫಾರಸು ಮಾಡಬೇಕು. ಸಾಗರ ಅರಣ್ಯ ಇಲಾಖೆ ಮೂಲಕ ಈ ಕಾನು ಅಭಿವೃದ್ಧಿಗೆ ಇಲಾಖೆ ಮುಂದಾಗಬೇಕು. ಅರಣ್ಯ ಇಲಾಖೆ 5 ಕೋಟಿ ರು. ಅನುದಾನ ನೀಡಬೇಕು ಎಂದು ಒತ್ತಾಯಿಸಿದೆ.
ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ 14ನೇ ಹಣಕಾಸು ನಿಧಿ ಬಳಕೆಯಲ್ಲಿ ಶೇ.5ರಷ್ಟು ಜೀವ ವೈವಿಧ್ಯ ಕಾರ್ಯಗಳಿಗೆ ನೀಡಲು ಪಂಚಾಯಿತಿ ರಾಜ್ ಇಲಾಖೆಗೆ ಸೂಚನೆ ನೀಡಬೇಕು. 2025ರ ರಾಜ್ಯ ಜೀವ ವೈವಿಧ್ಯ ಪ್ರಶಸ್ತಿ ಪ್ರಕಟಿಸಬೇಕು. ಯಾವುದೇ ಕಾರಣಕ್ಕೆ ಅರಣ್ಯ ಇಲಾಖೆ ಡೀಮ್ಡ್ ಅರಣ್ಯ ವ್ಯಾಪ್ತಿಯಲ್ಲಿ ಕಡಿತ ಮಾಡಬಾರದು. ಜೌಗು ಭೂಮಿ ಸಂರಕ್ಷಣಾ ಪ್ರಾಧಿಕಾರವನ್ನು ಕ್ರಿಯಾಶೀಲಗೊಳಿಸಬೇಕು. ಜೌಗು ಭೂಮಿ, ಅಳಿವೆಗಳು, ಚಿಕ್ಕ ಚಿಕ್ಕ ಲಕ್ಷಾಂತರ ಕೆರೆಗಳ ರಕ್ಷಣೆಗೆ ಪರಿಸರ ಇಲಾಖೆ ಮುಂದಾಗಬೇಕು ಎಂದು ಆಗ್ರಹಿಸಿತು.ಜೀವ ವೈವಿಧ್ಯ ಮಂಡಳಿ ಈ ಬಗ್ಗೆ ತಜ್ಞ ವರದಿ ನೀಡಬೇಕು. ಮಿರಿಸ್ಟಿಕಾ ಸ್ವಾಂಪ್ಸ ಸ್ಥಳಗಳನ್ನು ಪಾರಂಪರಿಕ ಜೀವ ವೈವಿಧ್ಯ ತಾಣ ಎಂದು ಘೋಷಣೆ ಮಾಡಬೇಕು. ಕೋಲಾರದ ಅಂತರಗಂಗೆ ಬೆಟ್ಟಕ್ಕೆ ಪಾರಂಪರಿಕ ಜೀವ ಜಲತಾಣ ಎಂದು ಜೀವ ವೈವಿಧ್ಯ ಮಂಡಳಿ ಮಾನ್ಯತೆ ನೀಡಬೇಕು. ಸ್ಥಳೀಯ ಅರಣ್ಯ ಅಧಿಕಾರಿಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜೀವ ವೈವಿಧ್ಯ ಕಾಯಿದೆ ಜಾರಿಗೆ ಮುಂದಾಗಬೇಕು. ಅರಣ್ಯ- ಪರಿಸರ ಸಚಿವರು ಈ ಬಗ್ಗೆ ಆದೇಶ ನೀಡಬೇಕು ಎಂದು ಕೋರಲಾಯಿತು.
ನಿಯೋಗದಲ್ಲಿ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತಹೆಗಡೆ ಅಶೀಸರ, ಪರಿಸರ ತಜ್ಞ ಡಾ.ಕೇಶವ ಕೊರ್ಸೆ, ಕೆ.ವೆಂಕಟೇಶ್, ಶ್ರೀಪಾದ ಬಿಚ್ಚುಗತ್ತಿ, ಗಣಪತಿ ಕೆ ಬಿಸಲಕೊಪ್ಪ, ನರಸಿಂಹ ಸಾತೊಡ್ಡಿ, ಕೆ.ಎಸ್ ಭಟ್ಟ, ತಿಮ್ಮಣ್ಣ ತೊಂಡೆಕೆರೆ ಯಲ್ಲಾಪುರ ಇದ್ದರು.