ಮಹಿಳೆಯರನ್ನು ಪ್ರತಿಯೊಬ್ಬರೂ ಗೌರವಿಸಿ

KannadaprabhaNewsNetwork | Published : Mar 11, 2025 12:52 AM

ಸಾರಾಂಶ

ತಾಲೂಕಿನ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಘುರಾಮ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ಪ್ರತಿಯೊಬ್ಬರೂ ಮಹಿಳೆಯರನ್ನು ಗೌರವಿಸಬೇಕು ಎಂದು ಹೊಳಲ್ಕೆರೆಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಘುರಾಮ್ ಎನ್.ಎಸ್ ಸಲಹೆ ನೀಡಿದರು.ತಾಲೂಕಿನ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದಲ್ಲಿ, ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವದ ಒಟ್ಟು ಜನಸಂಖ್ಯೆಯ ಅರ್ಧ ಭಾಗ ಸ್ತೀಯರಿಂದ ಕೂಡಿದೆ. ಆದರೂ ಕೂಡ ಎಲ್ಲಾ ರೀತಿಯಿಂದಲೂ ಮಹಿಳೆ ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾಳೆ. ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ಕೇವಲ ಭಾರತಕ್ಕಾಗಲಿ, ಇನ್ನಾವುದೇ ಸಮಾಜಕ್ಕಾಗಲಿ, ಸೀಮಿತವಾಗಿರದೇ ವಿಶ್ವದಾದ್ಯಂತ ಕಂಡುಬರುವ ಸಂಗತಿಯಾಗಿದೆ.

ಎಲ್ಲಾ ಮಹಿಳೆಯರು ಮತ್ತು ಹುಡುಗಿಯರಿಗಾಗಿ: ಹಕ್ಕುಗಳು, ಸಮಾನತೆ, ಸಬಲೀಕರಣ ಎನ್ನುವುದು 2025ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಧ್ಯೇಯವಾಕ್ಯವಾಗಿದೆ ಎಂದರು.

ಪ್ಯಾನಲ್ ವಕೀಲರಾದ ಆರ್.ಹನುಮಂತಪ್ಪ ಮಾತನಾಡಿ, ಜಗತ್ತಿನ ಎಲ್ಲಾ ದೇಶಗಳಲ್ಲಿ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಮತ್ತು ದಬ್ಬಾಳಿಕೆ ತಡೆಯುವುದು ಇದರ ಉದ್ದೇಶವಾಗಿದೆ, 1975 ರಲ್ಲಿ ವಿಶ್ವಸಂಸ್ಥೆ ಮೊದಲ ಬಾರಿಗೆ ಮಹಿಳಾ ದಿನ ಆಚರಿಸಲು ಪ್ರಾರಂಭಿಸಿತು. ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರಿಗೆ ಈ ದಿನ ಗೌರವ​ಪ್ರಶಂಸೆಯನ್ನು ಸಲ್ಲಿಸಲಾಗುವುದು. ಮಾನಸಿಕ ದೌರ್ಜನ್ಯ, ದೈಹಿಕ ದೌರ್ಜನ್ಯ, ಘೋಷಾಪದ್ಧತಿ, ಅತ್ಯಾಚಾರ, ಸತಿ ಸಹಗಮನ ಪದ್ಧತಿ, ವರದಕ್ಷಿಣೆ ಕಿರುಕುಳ ಬಾಲ್ಯಾವಸ್ಥೆಯಲ್ಲಿ ಮಗ, ​ಮಗಳಲ್ಲಿ ಭೇದ​ಭಾವ ಸ್ತ್ರೀ ಹಿಂಸೆಗೆ ಒಳಗಾಗುತ್ತಾಳೆ. ಇಂತಹ ಕ್ರೂರವಾದ, ಅಮಾನವೀಯವಾದ ಮಹಿಳೆಯ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು ಹಾಗೂ ಸ್ತ್ರೀ ಕಲ್ಯಾಣಕ್ಕಾಗಿ ಕೆಲವು ಮಹತ್ವದ ಕಾನೂನುಗಳನ್ನು ಜಾರಿಗೆ ತರಲಾಗಿದೆ ಎಂದು ಪ್ಯಾನಲ್ ವಕೀಲರಾದ ಆರ್. ಹನುಮಂತಪ್ಪ ಹೇಳಿದರು.

ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ನಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮಲ್ಲಾಡಿಹಳ್ಳಿಯ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕರು ಹಾಗೂ ಐಕ್ಯೂಎಸಿ ಸಂಘಟನಾ ಕಾರ್ಯದರ್ಶಿಗಳಾದ ಧನಂಜಯ.ಎನ್, ಉಪನ್ಯಾಸಕರು ಹಾಗೂ ಮಹಿಳಾ ದೌರ್ಜನ್ಯ ತಡೆ ಸಮಿತಿ ಕಾರ್ಯದರ್ಶಿಗಳಾದ ಮಮತಾ, ಯೋಗ ತರಬೇತುದಾರರಾದ ಸಂತೋಷ್ ಕುಮಾರ್ ಹಾಗೂ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share this article