ಹೊಳೆನರಸೀಪುರ: ನಮ್ಮ ದೇಶದಲ್ಲಿ ನೊಂದ ಜೀವಗಳನ್ನು ಉಳಿಸಿಕೊಳ್ಳಲು ರಕ್ತದ ಅವಶ್ಯಕತೆ ಹೆಚ್ಚಾಗಿದೆ. ಯುವಕರು ರಕ್ತದಾನ ಮಾಡುವ ಮೂಲಕ ಒಂದು ಜೀವಕ್ಕೆ ಜೀವದಾನ ಮಾಡಿದಂತಾಗುತ್ತದೆ. ರಕ್ತದಾನ ಮಾಡಲು ಸಾಧ್ಯವಿರುವ ಎಲ್ಲರೂ ರಕ್ತದಾನ ಮಾಡಿ ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಹಾಸನದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿಗಳಾದ ಶಬ್ಬೀರ್ ಅಹ್ಮದ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ತಾಲೂಕಿನ ಪಡುವಲಹಿಪ್ಪೆ ಎಚ್. ಡಿ. ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ತಾಲೂಕು ರೆಡ್ ಕ್ರಾಸ್ ಘಟಕ ಸಹಯೋಗದಲ್ಲಿ ರಕ್ತದಾನ ಮತ್ತು ಆರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು. ನಮ್ಮ ಸಮಾಜದಲ್ಲಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ರಕ್ತದ ಅವಶ್ಯಕತೆ ಬಂದಾಗ ನೀವು ನೀಡುವ ರಕ್ತವು ಅವರಿಗೆ ಜೀವದಾನವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು. ನಿಮ್ಮ ಈ ಸೇವೆ ಒಂದು ಕುಟುಂಬದ ಉಳಿವಿಗೆ ಕಾರಣವಾಗುತ್ತದೆ ಎಂದರು.ಚನ್ನರಾಯಪಟ್ಟಣ ಶಾಖೆಯ ಸಭಾಪತಿಗಳಾದ ಭರತ್ ಕುಮಾರ್ ಹೆಚ್.ಜಿ., ಹಾಸನ ತಾ. ರೆಡ್ ಕ್ರಾಸ್ ಘಟಕದ ನಿರ್ದೇಶಕ ಉದಯ ಶಂಕರ್ ಮಾತನಾಡಿದರು. ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಸೇರಿ ಒಟ್ಟು ೬೯ ಯೂನಿಟ್‌ಗಳ ರಕ್ತದಾನ ಮಾಡಿದರು. ಹಾಸನದ ಆರ್ಗವಾಲ್ ಕಣ್ಣಿನ ಆಸ್ಪತ್ರೆಯ ವತಿಯಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಕಣ್ಣಿನ ತಪಾಸಣೆ ನಡೆಸಲಾಯಿತು.ಪ್ರಾಂಶುಪಾಲರಾದ ಡಾ. ವಿಶ್ವನಾಥ ಕೆ.ಸಿ., ಸಂಚಾಲಕರಾದ ಡಾ. ಸಂಜೀವ್ ಕುಮಾರ್ ಯಲಿಬಳ್ಳಿ, ನಿರ್ದೇಶಕರಾದ ಭೀಮರಾಜ್, ಸಂಯೋಜಕರಾದ ಅವಿನಾಶ್, ಐ.ಕ್ಯೂ.ಎ.ಸಿ. ಸಂಚಾಲಕರಾದ ದೀಪು, ಡಾ. ಲಕ್ಷ್ಮೀಶ್ ಬಿ.ಎನ್, ಸಿ.ಎಂ. ವೆಂಕಟೇಶ್, ದಿವಾಕರ್, ಉಮೇಶ್, ಡಾ. ಭುವನೇಂದ್ರ, ಡಾ. ಚಂದ್ರಶೇಖರ್, ಡಾ. ವೇಣು ಪ್ರಸಾದ್, ಡಾ. ಶಿವಕುಮಾರ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.