ಎಲ್ಲರ ಚಿತ್ತ ಲೋಕಸಭಾ ಚುನಾವಣೆ ಫಲಿತಾಂಶದತ್ತ

KannadaprabhaNewsNetwork | Updated : Jun 03 2024, 11:13 AM IST

ಸಾರಾಂಶ

ಲೋಕಸಭಾ ಚುನಾವಣೆ ಮತ ಎಣಿಕೆಗೆ ದಿನಗಣನೆ ಉಳಿದಿದ್ದು, ಎಕ್ಸಿಟ್‌ ಪೋಲ್‌ ಸಮೀಕ್ಷೆ ಕೂಡ ಹೊರಬಂದಿದೆ. ಇದೀಗ ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ.

ಶಿವಾನಂದ ಗೊಂಬಿ

 ಹುಬ್ಬಳ್ಳಿ :  ಲೋಕಸಭಾ ಚುನಾವಣೆ ಮತ ಎಣಿಕೆಗೆ ದಿನಗಣನೆ ಉಳಿದಿದ್ದು, ಎಕ್ಸಿಟ್‌ ಪೋಲ್‌ ಸಮೀಕ್ಷೆ ಕೂಡ ಹೊರಬಂದಿದೆ. ಇದೀಗ ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ.

ಎಕ್ಸಿಟ್‌ ಪೋಲ್‌ ಸಮೀಕ್ಷೆ ಹೊರಬಂದಾಗಿನಿಂದ ಅಭ್ಯರ್ಥಿಗಳು, ರಾಷ್ಟ್ರೀಯ ಪಕ್ಷಗಳು ಸೋಲು ಮತ್ತು ಗೆಲುವಿನ ಲೆಕ್ಕಾಚಾರದಲ್ಲಿ ನಿರತವಾಗಿವೆ. ಅಭ್ಯರ್ಥಿಗಳು ತಮ್ಮದೇ ಗೆಲುವು ಎಂದು ತಮ್ಮ ತಮ್ಮದೇ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಎಕ್ಸಿಟ್‌ ಪೋಲ್‌ನಲ್ಲಿ ಬಿಜೆಪಿಕಳೆದ ಏಳು ಬಾರಿಗೆ ಗೆದ್ದು ಗಟ್ಟಿ ಬೇರನ್ನು ಬಿಟ್ಟಿರುವ ಬಿಜೆಪಿಯೇ ಈ ಸಲವೂ ಗೆಲ್ಲುತ್ತದೆ. ಪ್ರಹ್ಲಾದ ಜೋಶಿ 5ನೆಯ ಬಾರಿಗೆ ಗೆಲ್ಲಲಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆ ಹೇಳುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸಂಭ್ರಮಿಸಲು ಕಾಯುತ್ತಿದ್ದರೆ, ಎಕ್ಸಿಟ್‌ ಪೋಲ್‌ಗಳೆಲ್ಲ ಸುಳ್ಳು, ನೋಡ್ತಾ ಇರಿ... ಈ ಸಲ ಧಾರವಾಡ ಕ್ಷೇತ್ರದಲ್ಲಿ ತಮ್ಮ ಪಕ್ಷವೇ ಗೆಲ್ಲುತ್ತದೆ ಎಂದು ಕಾಂಗ್ರೆಸ್‌ ಹೇಳಿಕೊಳ್ಳಲಾರಂಭಿಸಿದೆ. ಹೀಗೆ ಎರಡು ಪಕ್ಷಗಳು ತಮ್ಮ ತಮ್ಮದೇ ಆದ ಲೆಕ್ಕಾಚಾರದಲ್ಲಿ ತೊಡಗಿವೆ.

ಬೆಟ್ಟಿಂಗ್‌

ಈ ನಡುವೆ ಚುನಾವಣೆ ಒಂದು ತಿಂಗಳು ಆಗಿದೆ. ಈ ಒಂದು ತಿಂಗಳಿಂದ ಈ ಸಲ ಈ ಪಕ್ಷ ಗೆಲ್ಲುತ್ತದೆ. ಈ ಸಲ ಆ ಪಕ್ಷ ಗೆಲ್ಲುತ್ತದೆ ಎಂದು ಬೆಟ್ಟಿಂಗ್‌ ನಡೆಯುತ್ತಲೇ ಇದೆ. ಅದರಲ್ಲೂ ಎಕ್ಸಿಟ್‌ ಪೋಲ್‌ ಪ್ರಕಟವಾದ ಬಳಿಕ ಬೆಟ್ಟಿಂಗ್‌ ಮತ್ತಷ್ಟು ಜೋರಾಗಿದೆ. ಬರೀ ಧಾರವಾಡ ಕ್ಷೇತ್ರಕ್ಕೆ ಸೀಮಿತವಾಗಿ ಬೆಟ್ಟಿಂಗ್‌ ನಡೆಯುತ್ತಿಲ್ಲ. ಬದಲಿಗೆ ಕರ್ನಾಟಕದಲ್ಲಿ ಯಾವ ಪಕ್ಷ ಹೆಚ್ಚು ಸ್ಥಾನ ಗೆಲ್ಲುತ್ತದೆ. ದೇಶದಲ್ಲಿ ಎನ್‌ಡಿಎ ಒಕ್ಕೂಟಕ್ಕೆ ಎಷ್ಟು? ಇಂಡಿಯಾ ಕೂಟಕ್ಕೆ ಎಷ್ಟು ಸ್ಥಾನ ಬರುತ್ತವೆ ಎಂಬ ಬಗ್ಗೆಯೂ ಬೆಟ್ಟಿಂಗ್‌ ನಡೆಯುತ್ತದೆ. ಕೆಲವರಂತೂ ಕುರಿ, ಕೋಣಗಳಂತಹ ಸಾಕು ಪ್ರಾಣಿಗಳನ್ನೂ ಬೆಟ್ಟಿಂಗ್‌ಗೆ ವಸ್ತುಗಳನ್ನಾಗಿ ಮಾಡಿಕೊಂಡಿರುವುದು ವಿಶೇಷ.

ದೇವರ ಭವಿಷ್ಯ

ಇನ್ನು ಕೆಲವು ಹಳ್ಳಿಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳೇ ಗೆಲ್ಲಲಿ ಎಂದು ದೇವರಿಗೆ ಪ್ರಾರ್ಥನೆ, ವಿಶೇಷ ಪೂಜೆ ಸಲ್ಲಿಸುವುದು ಮಾಮೂಲಿಯಾಗಿದೆ. ಇನ್ನು ಕೆಲವು ದೇವಸ್ಥಾನಗಳಲ್ಲಿ ಭವಿಷ್ಯ ನುಡಿಯುವ ಕಲ್ಲುಗಳನ್ನು ಎತ್ತುವ ಮೂಲಕ ಈ ಸಲ ತಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂಬ ಲೆಕ್ಕಾಚಾರದಲ್ಲಿ ಆಯಾ ಪಕ್ಷದ ಕಾರ್ಯಕರ್ತರು ತೊಡಗಿದ್ದಾರೆ. ಇದು ಚುನಾವಣೆ ಮುಂಚಿನಿಂದಲೂ ನಡೆಯುತ್ತಿದ್ದು, ಈ ವರೆಗೂ ನಡೆಯುತ್ತಲೇ ಇದೆ.

28 ವರ್ಷಗಳಿಂದ ಗೆದ್ದಿಲ್ಲ

ಈ ಕ್ಷೇತ್ರದ ಇತಿಹಾಸ ನೋಡಿದರೆ ಈ ವರೆಗೆ ಬರೋಬ್ಬರಿ 16 ಚುನಾವಣೆಗಳು ನಡೆದು ಇದು 17ನೆಯ ಚುನಾವಣೆ. 1996ರಿಂದ (28 ವರ್ಷದಿಂದ) ಈ ವರೆಗೆ ನಡೆದ ಏಳು ಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆದ್ದೇ ಇಲ್ಲ. ಇದು ಎಂಟನೆಯ ಚುನಾವಣೆ. ಹೀಗಾಗಿ ಹೇಗಾದರೂ ಈ ಸಲ ಕೈ ವಶ ಮಾಡಿಕೊಳ್ಳಬೇಕೆಂಬ ಇರಾದೆ ಕಾಂಗ್ರೆಸ್‌ನದ್ದು. ಅದಕ್ಕಾಗಿ ಕಾಂಗ್ರೆಸ್‌ ಸಾಕಷ್ಟು ಕಸರತ್ತು ನಡೆಸಿತ್ತು. ಏಳು ಸಲ ಗೆದ್ದಿರುವ ಬಿಜೆಪಿ ಅಕ್ಷರಶಃ ತನ್ನ ಭದ್ರಕೋಟೆಯನ್ನಾಗಿಸಿಕೊಂಡಿದೆ. ಈ ಸಲವೂ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲಬೇಕು. ಕ್ಷೇತ್ರವನ್ನು ಉಳಿಸಿಕೊಳ್ಳಬೇಕೆಂದು ಹಂಬಲದಿಂದ ಪ್ರಚಾರವನ್ನು ನಡೆಸಿದ್ದುಂಟು.

ಹಾಗೆ ನೋಡಿದರೆ ಪ್ರಚಾರದಲ್ಲಿ ಬಿಜೆಪಿ ಕೊಂಚ ಮುಂದೆ ಇತ್ತು ಎಂಬುದನ್ನು ಮರೆಯುವಂತಿಲ್ಲ. ಪ್ರಾರಂಭದಲ್ಲಿ ಅಷ್ಟೊಂದು ಗಂಭೀರತೆ ಪಡೆದುಕೊಳ್ಳದ ಕಾಂಗ್ರೆಸ್‌ ಕೊನೆ ಕೊನೆಗೆ ಗ್ಯಾರಂಟಿ ಯೋಜನೆಗಳ ಭರವಸೆಯಿಂದಾಗಿ ನಂತರ ಕೊಂಚ ಪ್ರಚಾರಕ್ಕೆ ಬಿರುಸು ನೀಡಿತ್ತು. ಆದರೂ ಈ ಸಲ ಚುನಾವಣೆ ಎರಡು ಪಕ್ಷಗಳು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿ ಪ್ರಚಾರ ನಡೆಸಿದ್ದು ವಿಶೇಷ. ಎರಡು ಪಕ್ಷಗಳ ಗಣ್ಯಾತಿಗಣ್ಯರು ಆಗಮಿಸಿ ಪ್ರಚಾರದಲ್ಲಿ ತೊಡಗಿದ್ದರು.

ಮತಗಳ ಲೆಕ್ಕಾಚಾರ

ಕಾಂಗ್ರೆಸ್, ಬಿಜೆಪಿ ಲೋಕಸಭಾ ಚುನಾವಣಾ ವ್ಯಾಪ್ತಿಯ ವಿಧಾನಸಭೆ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಬಂದ ಮತಗಳನ್ನು ಹೋಲಿಕೆ ಮಾಡಿಯೂ ಲೆಕ್ಕ ಹಾಕುತ್ತಿವೆ. ಜಿಲ್ಲೆಯ ನವಲಗುಂದ, ಶಿಗ್ಗಾಂವಿ- ಸವಣೂರು, ಧಾರವಾಡ ಗ್ರಾಮೀಣ, ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಮತಗಳು ಬರಲಿವೆ ಎಂಬ ನಿರೀಕ್ಷೆ ಕಾಂಗ್ರೆಸ್ ಹೊಂದಿದ್ದರೆ, ಹುಬ್ಬಳ್ಳಿ-ಧಾರವಾಡ ಪಶ್ಚಿಮ, ಸೆಂಟ್ರಲ್‌, ಕುಂದಗೋಳ, ಕಲಘಟಗಿಯಲ್ಲಿ ತಮಗೆ ಹೆಚ್ಚಿನ ಮತಗಳು ಬರಲಿವೆ. 2019ರಲ್ಲಿ ಬಿಜೆಪಿ 2.05 ಲಕ್ಷ ಮತಗಳ ಅಂತರದಿಂದ ಗೆಲವು ಸಾಧಿಸಿತ್ತು. ಈ ಸಲ ಅಷ್ಟು ಮತಗಳ ಅಂತರ ಸಿಗದಿದ್ದರೂ ಗೆಲುವಿಗೆ ಸಮಸ್ಯೆಯಿಲ್ಲ ಎಂಬ ವಿಶ್ಲೇಷಣೆ ಬಿಜೆಪಿ ಮಾಡುತ್ತಿದೆ.ಗೆಲವು ಖಚಿತ

ಕಳೆದ ಸಲಕ್ಕಿಂತ ಹೆಚ್ಚಿನ ಮತಗಳ ಅಂತರದಿಂದ ಈ ಸಲವೂ ನಾನೇ ಗೆಲ್ಲುತ್ತೇನೆ. ನನ್ನ ಗೆಲವು ಖಚಿತ.

ಪ್ರಹ್ಲಾದ ಜೋಶಿ, ಕೇಂದ್ರ ಸಚಿವ ಗ್ಯಾರೆಂಟಿ

ಈ ಸಲ ನನ್ನ ಗೆಲವು ಖಚಿತ. ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ನನ್ನ ಕೈಹಿಡಿಯಲಿವೆ.

ವಿನೋದ ಅಸೂಟಿ, ಕಾಂಗ್ರೆಸ್‌ ಅಭ್ಯರ್ಥಿ

Share this article