ಕನ್ನಡಪ್ರಭವಾರ್ತೆ, ತುರುವೇಕೆರೆ ತಾಲೂಕಿನ ವಿವಿಧೆಡೆ ಚಿರತೆಯ ಕಾಟ ಹೆಚ್ಚಾಗಿದ್ದು,ಕುರಿಗಳು ಮತ್ತು ನಾಯಿಯನ್ನು ಬಲಿ ತೆಗೆದುಕೊಳ್ಳುತ್ತಿದೆ. ಇದರಿಂದ ಜನರು ಆಘಾತಕ್ಕೊಳಗಾಗಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಕಾರ್ಯಾನ್ಮುಖವಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಘಟನೆ 1: ಭಾನುವಾರ ರಾತ್ರಿ ತಾಲೂಕಿನ ಹರಿದಾಸನ ಬಳಿಯ ಚೇತನ್ ಕುಮಾರ್ ರವರ ತೋಟದಲ್ಲಿ ಸಾಕಲಾಗಿದ್ದ ಕುರಿ ಹಿಂಡಿನ ಮೇಲೆ ಚಿರತೆ ದಾಳಿ ಮಾಡಿ ಎರಡು ಕುರಿಗಳನ್ನು ಬಲಿ ತೆಗೆದುಕೊಂಡಿದೆ. ತೋಟದಲ್ಲಿ ಸ್ವಾಮಿ ಎಂಬುವವರು ಸಾಯಂಕಾಲದ ವೇಳೆ ಕುರಿಗಳನ್ನು ಕಾಯುತ್ತಿದ್ದರು. ಏಕಾಏಕಿ ಎರಡು ಚಿರತೆಗಳು ದಾಳಿ ಮಾಡಿ ಎರಡು ಕುರಿಗಳನ್ನು ಬಲಿ ತೆಗೆದುಕೊಂಡಿದೆ. ಚಿರತೆ ಒಂದು ಕುರಿಯ ಮೇಲೆ ದಾಳಿ ಮಾಡಿದೆ. ಕೂಡಲೇ ಓಡಿ ಹೋದ ಕುರಿಯ ಕಿವಿಯನ್ನು ಪಂಜದಿಂದ ಪರಚಿ ಗಾಯ ಮಾಡಿದೆ. ಒಂದು ಚಿರತೆ ಕುರಿಯ ರಕ್ತವನ್ನು ಹೀರಿ ಬಿಸಾಕಿ ಹೋಗಿದ್ದರೆ, ಇನ್ನೊಂದು ಚಿರತೆ ಕುರಿಯನ್ನು ಸ್ವಲ್ಪ ದೂರ ಕಚ್ಚಿಕೊಂಡು ಹೋಗಿ ಇಡೀ ದೇಹವನ್ನು ತಿಂದು ಪರಾರಿಯಾಗಿದೆ. ಕುರಿಗಳನ್ನು ಕಾಯುತ್ತಿದ್ದ ಸ್ವಾಮಿ ಜೀವಭಯದಿಂದ ಓಡಿ ಹೋಗಿ ಪ್ರಾಣ ರಕ್ಷಿಸಿಕೊಂಡಿದ್ದಾರೆ. ಘಟನೆ 2: ತುರುವೇಕೆರೆ ತಾಲೂಕಿನ ಕೆಬಿ ಕ್ರಾಸ್ ನ ಎನ್ ಎಚ್. 150 ರ ಹೆದ್ದಾರಿ ಪಕ್ಕದಲ್ಲೇ ಚೇತನ್ ಕುಮಾರ್ ರವರ ತೋಟ ಇದೆ. ಇವರ ತೋಟದ ಸಮೀಪವೇ ಹಳ್ಳಿಕಾರ್ ತಳಿ ಸಂವರ್ಧನಾ ಕೇಂದ್ರವೂ ಇದೆ. ಇಲ್ಲಿ ನೂರಾರು ರಾಸುಗಳು ಇವೆ. ಈ ಸಂವರ್ಧನಾ ಕೇಂದ್ರದಲ್ಲಿಯೂ ಚಿರತೆ ದಾಳಿ ಕೆಲವು ದನಕರುಗಳನ್ನು ಬಲಿ ತೆಗೆದುಕೊಂಡಿತ್ತು. ಬೋನು ಇಟ್ಟು ಚಿರತೆಯನ್ನು ಸೆರೆಹಿಡಿಯಲಾಗಿತ್ತು. ಈಗ ಪುನಃ ಚಿರತೆಯ ಹಾವಳಿ ಅತಿಯಾಗಿದೆ. ಈ ಪ್ರದೇಶದಲ್ಲಿ ರೈತಾಪಿಗಳು ತಮ್ಮ ಮನೆಯಲ್ಲಿ ಸತ್ತ ಎಮ್ಮೆ, ಕೋಣ ಸೇರಿದಂತೆ ಇನ್ನಿತರೆ ಸತ್ತ ಸಾಕು ಪ್ರಾಣಿಗಳನ್ನು ಬಿಸಾಡಿ ಹೋಗುತ್ತಾರೆ. ಇದರಿಂದಾಗಿ ಚಿರತೆಯ ಹಾವಳಿ ಹೆಚ್ಚಾಗಲು ಕಾರಣವಾಗಿದೆ ಎಂದು ಹೇಳಲಾಗಿದೆ. ಪ್ರಕರಣ 3: ಸಂಪಿಗೆ ಗ್ರಾಮದಲ್ಲಿರುವ ಹರಿಜನರ ಕಾಲೋನಿಯಲ್ಲಿರುವ ಕೆ.ಕೆ.ಕುಮಾರ್ ಎಂಬುವವರು ತಮ್ಮ ಮನೆಯ ಹಿಂಭಾಗದಲ್ಲಿದ್ದ ಕೊಬ್ಬರಿ ದಾಸ್ತಾನು ಕೇಂದ್ರದ ಬಳಿ ಕಟ್ಟಿದ್ದ ನಾಯಿಯನ್ನು ಚಿರತೆ ರಾತ್ರಿ ವೇಳೆ ಬಂದು ತಿಂದು ಹಾಕಿದೆ. ಸಂಪಿಗೆ ಗ್ರಾಮದ ಒಳಗೇ ಬಂದು ಚಿರತೆ ದಾಳಿ ಮಾಡಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಕೂಡಲೇ ಅರಣ್ಯ ಇಲಾಖೆಯವರು ಬೋನನ್ನು ಇಡುವ ಮೂಲಕ ಚಿರತೆ ಸೆರೆಹಿಡಿಯಲು ಮುಂದಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖಾ ಅಧಿಕಾರಿಗಳು, ಪಶುಸಂಗೋಪನಾ ಇಲಾಖಾ ಅಧಿಕಾರಿಗಳು ಭೇಟಿ ನೀಡಿದ್ದರು.