ರೋಮಾಂಚನಗೊಳಿಸಿದ ಹೋರಿ ಓಡಿಸುವ ಸ್ಪರ್ಧೆ

KannadaprabhaNewsNetwork | Published : Nov 18, 2024 12:21 AM

ಸಾರಾಂಶ

ನಗರದ ನಾಗೇಂದ್ರನಮಟ್ಟಿಯಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಭಾರಿ ಹೋರಿ ಓಡಿಸುವ ಸ್ಪರ್ಧೆಯ ಅಖಾಡದಲ್ಲಿ ಝಗಮಗಿಸುವ ವಸ್ತ್ರಾಲಂಕಾರದಲ್ಲಿ ಕಂಗೊಳಿಸುತ್ತಿದ್ದ ಹೋರಿಗಳ ಓಟ ನೋಡುಗರನ್ನು ರೋಮಾಂಚನಗೊಳಿಸಿತು.

ಹಾವೇರಿ: ನಗರದ ನಾಗೇಂದ್ರನಮಟ್ಟಿಯಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಭಾರಿ ಹೋರಿ ಓಡಿಸುವ ಸ್ಪರ್ಧೆಯ ಅಖಾಡದಲ್ಲಿ ಝಗಮಗಿಸುವ ವಸ್ತ್ರಾಲಂಕಾರದಲ್ಲಿ ಕಂಗೊಳಿಸುತ್ತಿದ್ದ ಹೋರಿಗಳ ಓಟ ನೋಡುಗರನ್ನು ರೋಮಾಂಚನಗೊಳಿಸಿತು.

ಬೆಳಗ್ಗೆಯಿಂದಲೇ ಆರಂಭಗೊಂಡ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ೩೦೦ಕ್ಕೂ ಹೆಚ್ಚು ಹೋರಿಗಳು ಪಾಲ್ಗೊಂಡಿದ್ದವು. ಹೂವಿನ ಹಾರ, ಮಿಂಚುವ ಝರಿ ಹಾರ, ಕೊಡುಗಳಿಗೆ ರಿಬ್ಬನ್, ಬಲೂನ್‌ಗಳಿಂದ ಸಿಂಗಾರಗೊಂಡಿದ್ದ ಹೋರಿಗಳು ಅಖಾಡದಲ್ಲಿ ಓಡುತ್ತಿದ್ದಂತೆ ನೆರೆದಿದ್ದ ಜನರ ಸಿಳ್ಳೆ ಕೇಕೆ ಹರ್ಷೋದ್ಗಾರ ಮುಗಿಲು ಮುಟ್ಟುತ್ತಿತ್ತು. ಇನ್ನೊಂದೆಡೆ ಕೊಬ್ಬರಿ ಹರಿಯಲು ಯುವಕರು ಹರಸಾಹಸ ಪಡುತ್ತಿದ್ದ ದೃಶ್ಯ ನೋಡಲು ರೋಮಾಂಚನಕಾರಿಯಾಗಿತ್ತು.ವಿಶಿಷ್ಟವಾಗಿ ಅದ್ಧೂರಿಯಾಗಿ ಅಲಂಕೃತ, ಕೆಜಿಗಟ್ಟಲೇ ಒಣಕೊಬ್ಬರಿ ಹಾರ ಹಾಕಿಕೊಂಡಿರುವ ಹೋರಿ, ಯಾರ ಕೈಗೂ ಸಿಗದೇ ಛಂಗನೇ ಜಿಗಿದು... ಸರ‍್ರನೇ ಓಡಿದಾಗ ಅದರ ಮಾಲೀಕ ರೈತನಿಗಾಗುವ ಸಂತಸ ಅಷ್ಟಿಷ್ಟಲ್ಲ. ಶೌರ‍್ಯದ ಪ್ರತೀಕವಾಗಿ ಬೆದರಿಸುವ ಕೊಬ್ಬರಿ ಹೋರಿ ಸ್ಪರ್ಧೆ ಅಷ್ಟೆ ಅಪಾಯಕಾರಿ ಆಟವೂ ಆಗಿದೆ. ಹೋರಿಯೊಂದಿಗೆ ಕಾದಾಡಿ ಕೊರಳಲ್ಲಿ ಕಟ್ಟಿದ ಕೊಬ್ಬರಿ ಹರಿಯಲು, ಯುವಕರು ಹಿಡಕೋರಿ ಹೋರಿ ಹಿಡಕೋರಿ ಎಂದು ಪ್ರಾಣದ ಹಂಗನ್ನು ತೊರೆದು ಮುಗಿ ಬೀಳುತ್ತಿದ್ದ ದೃಶ್ಯಗಳು ರೋಚಕವಾಗಿದ್ದವು. ಕೆಲವೊಮ್ಮೆ ಜಾರಿಬೀಳುತ್ತಿದ್ದ ಯುವಕರಿಗೆ ಸಣ್ಣಪುಟ್ಟ ಗಾಯಗಳು ಸಾಮಾನ್ಯವಾಗಿದ್ದವು. ಅವುಗಳನ್ನು ಲೆಕ್ಕಿಸದೇ ಹೋರಿ ಹಿಡಿಯಲು ಮತ್ತೆ ಸಜ್ಜಾಗುತ್ತಿದ್ದರು. ಹೋರಿ ಬೆದರಿಸುವ ಕಾರ‍್ಯಕ್ರಮ ನೋಡಲು ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.೩೦ಕ್ಕೂ ಹೆಚ್ಚು ಜನರಿಗೆ ಗಾಯ: ನಗರದ ನಾಗೇಂದ್ರನಮಟ್ಟಿಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಹೋರಿ ಓಡಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದು ೩೦ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.ಸ್ಪರ್ಧೆಯನ್ನು ವೀಕ್ಷಿಸಲು ಸಾವಿರಾರು ಜನರು ಆಗಮಿಸಿದ್ದರು. ಈ ವೇಳೆ ಅಖಾಡದಲ್ಲಿ ಓಡುತ್ತಿದ್ದ ಹೋರಿ ಅಕ್ಕಪಕ್ಕದಲ್ಲಿ ನಿಂತಿದ್ದ ಜನರತ್ತ ನುಗ್ಗಿ ತಿವಿದಿದ್ದು, ೩೦ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದರಲ್ಲಿ ೫-೬ ಜನರ ಕಣ್ಣು, ಕಿವಿ, ಎದೆಯ ಭಾಗ, ಕೈ ಕಾಲುಗಳಿಗೆ ಗಂಭೀರವಾಗಿ ಗಾಯವಾಗಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ. ಉಳಿದ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Share this article