- ಗುಣಮಟ್ಟವಿಲ್ಲವೆಂಬ ಸಬೂಬು ಹೇಳಿ ರೈತರ ಸಾಗಹಾಕುವ ಪ್ರಯತ್ನ: ಸತೀಶ ಕೊಳೇನಹಳ್ಳಿ ಆರೋಪ - ಪಶು-ಕೋಳಿ ಆಹಾರ ಉತ್ಪಾದಕರ ವಿರುದ್ಧ ಕ್ರಮಕ್ಕೆ ರೈತರ ಒತ್ತಾಯ । ಜಿಲ್ಲಾಡಳಿತದಿಂದ ಕ್ರಮ; ಭರವಸೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ಮೆಕ್ಕೆಜೋಳ ಖರೀದಿ ಗೊಂದಲ ಬಗೆಹರಿಯದ ಹಿನ್ನೆಲೆ ಆಕ್ರೋಶಗೊಂಡ ರೈತರು ಬಿಜೆಪಿ ನೇತೃತ್ವದಲ್ಲಿ ಮೆಕ್ಕೆಜೋಳ ತುಂಬಿದ್ದ ಟ್ರ್ಯಾಕ್ಟರ್ ಸಮೇತ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಜಿಲ್ಲಾಧಿಕಾರಿ ಕಚೇರಿ ಬಳಿ ಬೆಳಗ್ಗೆಯೇ ಟ್ರ್ಯಾಕ್ಟರ್‌ನಲ್ಲಿ ಧಾವಿಸಿದ ಮೆಕ್ಕೆಜೋಳ ರೈತರು ಬಿಜೆಪಿ ರೈತ ಮೋರ್ಚಾ ಮುಖಂಡ ಬಿ.ಎ.ಸತೀಶ ಕೊಳೇನಹಳ್ಳಿ ಇತರರ ನೇತೃತ್ವದಲ್ಲಿ ಮುತ್ತಿಗೆ ಹಾಕಿ, ಮೆಕ್ಕೆಜೋಳ ಖರೀದಿಯಲ್ಲಿನ ಗೊಂದಲಗಳ ಪರಿಹರಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು.
ಮೆಕ್ಕೆಜೋಳ ಬೆಳೆಗಾರರ ಗೋಳು ಹೇಳ ತೀರದಂತಾಗಿದೆ. ಸರ್ಕಾರದ ಆದೇಶದಂತೆ ಮೆಕ್ಕೆಜೋಳ ಖರೀದಿಸಬೇಕಾಗಿದ್ದ ಪಶು-ಕೋಳಿ ಆಹಾರ ಉತ್ಪಾದಕರು ಮೆಕ್ಕೆಜೋಳದ ಗುಣಮಟ್ಟ ಸರಿ ಇಲ್ಲ ಎಂದು ಸಬೂಬು ಹೇಳಿ, ಖರೀದಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಇದರಿಂದ ರೋಸಿ ಹೋದ ರೈತರು ಅನಿವಾರ್ಯವಾಗಿ ಮೆಕ್ಕೆಜೋಳ ಲೋಡ್ ಸಮೇತ ಡಿಸಿ ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟಿಸುವಂತಾಗಿದೆ ಎಂದು ಕಿಡಿಕಾರಿದರು.
ಹಳ್ಳಿಗಳಿಂದ ಮೆಕ್ಕೆಜೋಳ ಲೋಡ್ ಮಾಡಿಕೊಂಡು, ಮಾರಾಟಕ್ಕೆಂದು ಬಂದ ರೈತರು ಹೀಗೆ ಖರೀದಿಸಲು ಕುಂಟುನೆಪ ಹೇಳಿದರೆ ಏನು ಮಾಡಬೇಕು? ಇಂತಹವರಿಂದಾಗಿ ರೈತರಿಗೆ ದಿಕ್ಕೇ ತೋಚದಂತಾಗಿದೆ. ರೈತರ ನೆರವಿಗೆ ಧಾವಿಸಬೇಕಾದ ಜಿಲ್ಲಾಡಳಿತ ಸಹ ಇದಕ್ಕೂ, ತನಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಜಾಣಕುರುಡು ಪ್ರದರ್ಶಿಸುತ್ತಿದೆ. ಮೆಕ್ಕೆಜೋಳ ರೈತರ ಸಂಕಷ್ಟ, ಸಮಸ್ಯೆ ಆಲಿಸುವವರು ಯಾರು ಎಂದು ಪ್ರಶ್ನಿಸಿದರು.
ರೈತರಾದ ತುಂಬಿಗೆರೆ ದಿನೇಶಗೌಡ, ಐಗೂರು ಸಿ.ನಾಗರಾಜಪ್ಪ, ಆಲೂರು ದೇವರಾಜ, ಸಿದ್ದೇಶ, ಮರಿಕುಂಟೆ ಚಂದ್ರಪ್ಪ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
(ಕೋಟ್) ಕುಕ್ಕವಾಡ ಗ್ರಾಮದ ದಿ ದಾವಣಗೆರೆ ಸಕ್ಕರೆ ಕಂಪನಿ ಮತ್ತು ಡಿಸ್ಟಿಲರಿಯವರು 729.5 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಬೇಕೆಂದು ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ, ಸರ್ಕಾರದ ಇಂತಹ ಆದೇಶಕ್ಕೆ ಯಾರೂ ಕ್ಯಾರೆ ಅನ್ನುತ್ತಿಲ್ಲ. ಮೆಕ್ಕೆಜೋಳ ಖರೀದಿಸಲು ನೆಪ ಹೇಳುತ್ತಿರುವವರು, ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತೂ ನೀಡದ ಕಾರ್ಖಾನೆಗಳಿಗೆ ನೋಟೀಸ್ ನೀಡುವ ಕೆಲಸವನ್ನೂ ಜಿಲ್ಲಾಧಿಕಾರಿ ಮಾಡುತ್ತಿಲ್ಲ.
- - -
ಮೆಕ್ಕೆಜೋಳ ಖರೀದಿ ಗೊಂದಲದ ಹಿನ್ನೆಲೆ ಬಿಜೆಪಿ ಮುಖಂಡ ಬಿ.ಎಂ. ಸತೀಶ ನೇತೃತ್ವದಲ್ಲಿ ಮೆಕ್ಕೆಜೋಳ ತುಂಬಿದ್ದ ಟ್ರ್ಯಾಕ್ಟರ್ ಸಮೇತ ಮಂಗಳವಾರ ಡಿಸಿ ಕಚೇರಿ ಬಳಿ ರೈತರು ಪ್ರತಿಭಟಿಸುತ್ತಿದ್ದ ವೇಳೆ ಅಪರ ಡಿಸಿ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕರು ಸ್ಥಳಕ್ಕೆ ಆಗಮಿಸಿ ಅಹವಾಲು ಆಲಿಸಿದರು.