- ಕಡೂರಿನಲ್ಲಿ ಮಾದಿಗ ಮುನ್ನಡೆ ಸಮಾವೇಶ ।
ಜನವರಿ 17ರಂ ಮೀಸಲಾತಿ ಕುರಿತ ತೀರ್ಪು ನಮ್ಮ ಮಾದಿಗ ಸಮಾಜದ ಪರವಾಗಿ ಬರುವ ನಿರೀಕ್ಷೆ ಇದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.
ಕಡೂರಿನ ಮಚ್ಚೇರಿಯ ಶ್ರೀ ಬೆಂಕಿ ಲಕ್ಷ್ಮಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಮಾದಿಗ ಮುನ್ನಡೆ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಮಾದಿಗ ಸಮುದಾಯದ ಜೊತೆ ನಾವಿದ್ದೇವೆ ಎಂದು ಮೋದಿಯವರು ಮತ್ತು ಅಮಿತ್ ಶಾ ಹೇಳಿರುವ ಕಾರಣ ಇಡೀ ದೇಶದ ಮಾದಿಗ ಸಮಾಜ ಜಾಗೃತವಾಗಬೇಕು ಎಂದರು.ಈ ಸಮಾವೇಶಕ್ಕೆ ಹೆಚ್ಚಿನ ಸಹಕಾರ ನೀಡಿರುವ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅವರಿಗೆ ಮಾದಿಗ ಸಮಾಜದ ಪರವಾಗಿ ಕೃತಜ್ಞತೆ ಅರ್ಪಿಸುತ್ತೇನೆ. ಈಗಾಗಲೇ ರಾಜ್ಯದ 26 ಕಡೆ ಮಾದಿಗ ಮುನ್ನಡೆ ಸಮಾವೇಶ ಯಶಸ್ವಿಯಾಗಿ ನಡೆದಿದ್ದು, ಇಲ್ಲೂ ಯಶಸ್ವಿಯಾಗಿ ನಡೆಯುತ್ತಿದೆ. ತುಳಿತಕ್ಕೆ ಒಳಗಾದ ಸಮಾಜಗಳಿಗೆ ಧ್ವನಿ ಕೊಟ್ಟ ಅಂಬೇಡ್ಕರ್ ದೇಶಕ್ಕೆ ನೀಡಿದ ಮೀಸಲಾತಿ ಮತ್ತು ಅಭಿವೃದ್ಧಿ ಕುರಿತು ಚರ್ಚೆ ನಡೆಯುತ್ತಿದೆ. ದಕ್ಷಿಣ ಭಾರತದ ಆಂಧ್ರ , ತಮಿಳುನಾಡು, ಮಹಾರಾಷ್ಟ್ರ, ಕೇರಳ, ಕರ್ನಾಟಕದಲ್ಲಿರುವ ಮೀಸಲಾತಿ ವಂಚಿತ ಮಾದಿಗ ಸಮಾಜದ ಮೀಸಲಾತಿ ಯಾರಿಗೆ ಬಂತು ಎಲ್ಲಿಗೆ ಬಂತು ಎಂಬಂತಾಗಿ ರುವುದು ವಿಪರ್ಯಾಸ ಎಂದರು.
ದಕ್ಷಿಣ ಭಾರತದ ಮಾದಿಗರ ಪರವಾಗಿರುವ ಎಲ್ಲ ರಾಜ್ಯಗಳ ಜಡ್ಜ್ ಗಳು ನೀಡಿದ ತೀರ್ಪುಗಳು ಸದನದಲ್ಲಿ, ಸಂಸತ್ತಲ್ಲಿ ಕೂಡ ಚರ್ಚೆಯಾಗಲಿಲ್ಲ. ಜನವರಿ 17ರಂದು ಮೀಸಲಾತಿ ಕುರಿತ ತೀರ್ಪು ನಮ್ಮ ಮಾದಿಗ ಸಮಾಜದ ಪರವಾಗಿ ಬರುವ ನಿರೀಕ್ಷೆಯಿದ್ದು, ದೇಶದ ಮಾದಿಗ ಸಮಾಜ ಜಾಗೃತವಾಗಬೇಕು ಎಂದರು.
ಮಾಜಿ ಸಚಿವ ಸಿ ಟಿ ರವಿ ಮಾತನಾಡಿ, ಸರ್ವೋದಯ ಮತ್ತು ಅಂತ್ಯೋದಯ ಕಡೆಗೆ ಎಂದರೆ ಸರ್ವರ ಅಭಿವೃದ್ಧಿ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ತಲುಪುವ ಆಶಯ ಬಿಜೆಪಿಯದ್ದಾಗಿದೆ. ಒಟ್ಟಾಗಿ ಬಾಳುವ ತತ್ವದ ಮೋದಿ ಯೋಜನೆಗಳು ಯಾವುದೇ ಜಾತಿ ಮೇಲೆ ಆಧಾರಿತವಾಗಿ ರೂಪಿತವಾಗಿಲ್ಲ. ಒಳ ಮೀಸಲಾತಿ ಜಾರಿಗೆ ತರುವ ಉದ್ದೇಶದಿಂದ ಸತ್ಯ ತಿಳಿಸಲಾಗುತ್ತಿದೆ. ಆದರೆ ಸತ್ಯ ಹೊಸಲು ದಾಟುವ ಮುನ್ನ ಸುಳ್ಳು ಊರನ್ನೆಲ್ಲ ಸುತ್ತಾಡಿ ಬರುತ್ತದೆ ಎಂಬಂತೆ ಕಾಂಗ್ರೆಸ್ಸಿಗರ ಮನಸ್ಥಿತಿ ಆಗಿದೆ ಎಂದು ಟೀಕಿಸಿದರು.
ಮಾದಿಗ ಸಮಾಜದ ಮುಖಂಡ ಶೂದ್ರ ಶ್ರೀನಿವಾಸ್ ಮಾತನಾಡಿ, ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಾದಿಗ ಸಮಾಜಕ್ಕೆ ಆಗುತ್ತಿರುವ ಅನ್ಯಾಯ ತಿಳಿಸುವ ಮೂಲಕ ನಮಗೆ ಸಿಗಬೇಕಿರುವ ಹಕ್ಕುಗಳಿಗೆ, ಹೋರಾಟಕ್ಕ್ಕಕೈಜೋಡಿಸಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನಾಟಕ ಮಂಡಳಿಯಿಂದ ಜಾತಿ ಸಮಾವೇಶ ನಡೆಯುತ್ತಿದೆ. ಮುಖ್ಯಮಂತ್ರಿ ಯಾದವರು ಜಾತಿ ಸಮಾವೇಶ ಮಾಡಿಸಬಹುದೇ ಈ ಬಗ್ಗೆ ಚರ್ಚೆ ನಡೆಯಬೇಕು ಇದರಿಂದ ಒಳ ಮೀಸಲಾತಿಗೆ ಅನ್ಯಾಯವಾಗುತ್ತದೆ ಎಂದು ಹೇಳಿದರೂ ಕೂಡ ಸಮಾವೇಶಕ್ಕೆ ನಡೆಸಲು ಮುಂದಾಗಿದ್ದಾರೆ ಎಂದು ದೂರಿದರು.