ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ಮರಣ ಶಾಸನ

KannadaprabhaNewsNetwork | Published : May 17, 2024 12:33 AM

ಸಾರಾಂಶ

ಮಾಗಡಿಗೆ ನೀರು ಕೊಂಡೊಯ್ಯಲು ಕೈಗೊಂಡಿರುವ ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ಕೈಬಿಡುವಂತೆ ಆಗ್ರಹಿಸಿ ಗುಬ್ಬಿ ತಾಲೂಕಿನ ಡಿ.ರಾಂಪುರದ ಹೇಮಾವತಿ ಶಾಖಾ ನಾಲೆ ಬಳಿ ಮಾಜಿ ಸಚಿವ ಸೊಗಡು ಶಿವಣ್ಣ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ತುಮಕೂರುಮಾಗಡಿಗೆ ನೀರು ಕೊಂಡೊಯ್ಯಲು ಕೈಗೊಂಡಿರುವ ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ಕೈಬಿಡುವಂತೆ ಆಗ್ರಹಿಸಿ ಗುಬ್ಬಿ ತಾಲೂಕಿನ ಡಿ.ರಾಂಪುರದ ಹೇಮಾವತಿ ಶಾಖಾ ನಾಲೆ ಬಳಿ ಮಾಜಿ ಸಚಿವ ಸೊಗಡು ಶಿವಣ್ಣ ನೇತೃತ್ವದಲ್ಲಿ ನೂರಾರು ರೈತರು, ವಿವಿಧ ಮಠಾಧೀಶರು, ರಾಜಕೀಯ ಪಕ್ಷಗಳ ನಾಯಕರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಪಕ್ಷಾತೀತವಾಗಿ ನಾಲೆಗೆ ಮೂರು ಹಿಡಿ ಮಣ್ಣು ಹಾಕುವ ಮೂಲಕ ಪ್ರತಿಭಟನೆ ನಡೆಸಿದರು.ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕರಾದ ಎಂ.ಟಿ.ಕೃಷ್ಣಪ್ಪ, ಸುರೇಶ್‌ಗೌಡ, ಜ್ಯೋತಿಗಣೇಶ್, ಮಾಜಿ ಶಾಸಕರಾದ ಮಸಾಲೆ ಜಯರಾಂ, ಎಚ್. ನಿಂಗಪ್ಪ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜಿನಪ್ಪ ಸೇರಿದಂತೆ ಇನ್ನಿತರೆ ಮುಖಂಡರ ನೇತೃತ್ವದಲ್ಲಿ ಹೇಮಾವತಿ ಶಾಖಾ ನಾಲೆಯ 70 ಕಿಮೀ ಸ್ಥಳವಾದ ಡಿ. ರಾಂಪುರದ ಬಳಿ ತುರುವೇಕೆರೆ, ತಿಪಟೂರು, ಗುಬ್ಬಿ, ತುಮಕೂರು ಗ್ರಾಮಾಂತರ, ತುಮಕೂರು ನಗರದ ನೂರಾರು ಸಂಖ್ಯೆಯಲ್ಲಿ ರೈತರು, ಹೋರಾಟಗಾರರು ಜಮಾಯಿಸಿ ಪ್ರತಿಭಟಿಸಿ ಕಾಮಗಾರಿ ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ಪೈಪ್‌ಲೈನ್ ಮೂಲಕ ಮಾಗಡಿ, ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗುವುದರಿಂದ ಜಿಲ್ಲೆಯ ಜನರಿಗೆ ತೀವ್ರ ಅನ್ಯಾಯವಾಗುತ್ತದೆ. ಇಲ್ಲಿನ ಜನರಿಗೆ ಕುಡಿಯುವ ನೀರು ಸಿಗದಂತಾಗುತ್ತದೆ. ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಹೇಮಾವತಿ ನೀರನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದರು.

ಹೇಮಾವತಿಯಿಂದ ಜಿಲ್ಲೆಗೆ 24.5 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಹಂಚಿಕೆ ಮಾಡಿರುವಷ್ಟು ನೀರು ಜಿಲ್ಲೆಗೆ ಯಾವ ವರ್ಷವೂ ಹರಿದು ಬಂದಿಲ್ಲ. ಜಿಲ್ಲೆಗೆ ಹಂಚಿಕೆ ಮಾಡಿರುವ ನೀರಿನಲ್ಲೇ ಮಾಗಡಿ ತಾಲೂಕಿಗೆ ನೀರು ತೆಗೆದುಕೊಂಡು ಹೋಗಲಾಗುತ್ತಿದೆ. ಜಿಲ್ಲೆಯಲ್ಲಿ 32 ಕುಡಿಯುವ ನೀರಿನ ಯೋಜನೆಗಳು ಜಾರಿಯಲ್ಲಿದ್ದು, ಮಾಗಡಿ ಭಾಗಕ್ಕೆ ನೀರು ಹರಿಸಿದರೆ ಜನರಿಗೆ ಕುಡಿಯುವ ನೀರು ಸಿಗದಾಗುತ್ತದೆ. ಈ ಯೋಜನೆ ಜಾರಿಯಾದರೆ ತುಮಕೂರು ಜಿಲ್ಲೆಗೆ ಮರಣ ಶಾಸನವಾಗಲಿದೆ ಎಂದು ಹೇಳಿದರು.ತುಮಕೂರು ಗ್ರಾಮಾಂತರ ಶಾಸಕ ಸುರೇಶ್‌ಗೌಡ ಮಾತನಾಡಿ, ಇಂದು ಸಾಂಕೇತಿಕವಾಗಿ ಹೋರಾಟ ಆರಂಭಿಸಿದ್ದೇವೆ. ಎಲ್ಲಾ ಪಕ್ಷದ ರಾಜಕೀಯ ಮುಖಂಡರು ,ಸಂಘ ಸಂಸ್ಥೆಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈ ಯೋಜನೆ ಪ್ರಾರಂಭವಾಯಿತು. ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯೋಜನೆ ಸ್ಥಗಿತಗೊಳಿಸಿತ್ತು. ಮತ್ತೆ ಈಗ ಕಾಂಗ್ರೆಸ್ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಗೆ ಗುದ್ದಲಿ ಪೂಜೆ ಮಾಡದೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಜಿಪಂ ಕೆಡಿಪಿ ಸಭೆಯಲ್ಲಿ ನಾವೆಲ್ಲಾ ಇದನ್ನು ವಿರೋಧಿಸಿದ್ದೆವು. ಆದರೆ ಜಿಲ್ಲೆಯಲ್ಲಿರುವ ಇಬ್ಬರು ಸಚಿವರು ಡಿ.ಕೆ. ಶಿವಕುಮಾರ್‌ಗೆ ಹೆದರಿ ಸಚಿವ ಸಂಪುಟದಲ್ಲಿ ಈ ಯೋಜನೆ ವಿರೋಧಿಸಿಲ್ಲ. ಗೃಹ ಸಚಿವ ಪರಮೇಶ್ವರ್‌ಗೆ ಜಿಲ್ಲೆಯ ಜನರ ಬಗ್ಗೆ ಕಳಕಳಿ ಇದ್ದರೆ ಕೂಡಲೇ ರಾಜೀನಾಮೆ ನೀಡಲಿ. ಜಿಲ್ಲೆಯ ಜನರ ಹಿತ ಕಾಪಾಡದೆ ಅಧಿಕಾರದಲ್ಲಿದ್ದರೆ ಏನೂ ಪ್ರಯೋಜನವಿಲ್ಲ ಎಂದರು.ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ತುಮಕೂರಿನಲ್ಲಿರುವ ಸಚಿವರಾದ ಕೆ.ಎನ್.ರಾಜಣ್ಣ ಹಾಗೂ ಡಾ.ಜಿ.ಪರಮೇಶ್ವರ್ ಈ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಪರಮೇಶ್ವರ್ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವುದು. ಜನ ತೀರ್ಮಾನಿಸಿದರೆ ಸರ್ಕಾರ ಬರುತ್ತದೆ, ಹೋಗುತ್ತದೆ. ಆದ್ದರಿಂದ ಸರ್ಕಾರ ಜನರಿಗೆ ಅನ್ಯಾಯ ಮಾಡಿದರೆ ಉಳಿವು ಸಾಧ್ಯವಿಲ್ಲ. ಈ ಯೋಜನೆಯ ಕಾಮಗಾರಿ ಕೈಗೊಳ್ಳಲು ಸರ್ಕಾರದ ಆದೇಶ ಇಲ್ಲ. ಯಾವುದೇ ರೀತಿಯ ಭೂಸ್ವಾಧೀನ ಪ್ರಕ್ರಿಯೆ ನಡೆದಿಲ್ಲ. ಆದರೂ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ತುಮಕೂರು ಜಿಲ್ಲೆಯ ರೈತರು, ಜನರ ಹಿತ ಕಾಪಾಡುವುದು ನಮ್ಮ ಉದ್ದೇಶ. ಇದರಲ್ಲಿ ಯಾವುದೇ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದರು.ಶಾಸಕ ಜ್ಯೋತಿ ಗಣೇಶ್ ಮಾತನಾಡಿ, 2018ರಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ನಿರ್ಣಯ ತೆಗೆದುಕೊಂಡಿದ್ದರು. ಅಂದು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಹೋರಾಟ ಮಾಡಿದ್ದರು. ಬಳಿಕ ಅಧಿಕಾರಕ್ಕೆ ಬಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಈ ಯೋಜನೆಯನ್ನು ಸ್ಥಗಿತಗೊಳಿಸಿತ್ತು. ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ಮಾಡಿದರೆ ತುಮಕೂರು ಜಿಲ್ಲೆಗೆ ಮರಣ ಶಾಸನ ಕಟ್ಟಿಟ್ಟ ಬುತ್ತಿ. ಹಾಗಾಗಿ ಇಂದೇ ಈ ಯೋಜನೆಯನ್ನು ಸ್ಥಗಿತಗೊಳಿಸಬೇಕಾಗಿದೆ ಎಂದರು.

ಮಾಜಿ ಶಾಸಕ ಮಸಾಲೆ ಜಯರಾಂ ಮಾತನಾಡಿದರು. ಪ್ರತಿಭಟನೆಯಲ್ಲಿ ವಿವಿಧ ಮಠಾಧೀಶರಾದ ಬೆಟ್ಟದಹಳ್ಳಿಯ ಶ್ರೀಚಂದ್ರಶೇಖರ ಸ್ವಾಮೀಜಿ, ಗೋಡೆಕೆರೆ ಮಠದ ಶ್ರೀಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ, ತಮ್ಮಡಿಹಳ್ಳಿ ಮಠದ ಸ್ವಾಮೀಜಿ, ಸರಪಳಿ ಮಠದ ಶ್ರೀಜ್ಞಾನಾನಂದಪುರಿ ಸ್ವಾಮೀಜಿ, ಶ್ರೀನೀಲಕಂಠಾ ಚಾರ್ಯ ಸ್ವಾಮೀಜಿ, ಶ್ರೀರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀವಿದ್ಯಾಶಂಕರ ದೇಶೀಕೇಂದ್ರ ಸ್ವಾಮೀಜಿ, ವಿವಿಧ ಪಕ್ಷಗಳ ಮುಖಂಡರಾದ ಬಿ.ಎಸ್.ನಾಗರಾಜು, ದಿಲೀಪ್‌ಕುಮಾರ್, ಲೋಕೇಶ್ವರ್, ಡಾ.ಪರಮೇಶ್, ಕುಮಾರಸ್ವಾಮಿ, ಬ್ಯಾಟರಂಗೇ ಗೌಡ, ಗೂಳೂರು ನವೀನ್‌ಗೌಡ, ಟಿ.ಆರ್.ಸದಾಶಿವಯ್ಯ ಸೇರಿದಂತೆ ನೂರಾರು ಮಂದಿ ರೈತರು, ವಿವಿಧ ಸಂಘಟನೆಗಳ ಕಾರ್ಯಕರ್ತರು, ಹೋರಾಟಗಾರರು ಭಾಗಿಯಾಗಿದ್ದರು.ತುಮಕೂರಿನ ಟೌನ್‌ಹಾಲ್ ವೃತ್ತದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ನಡೆಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಣಕು ಶವಯಾತ್ರೆಯನ್ನು ಆಂಬ್ಯುಲೆನ್ಸ್ ಮುಖಾಂತರ ಡಿ. ರಾಂಪುರಕ್ಕೆ ಕೊಂಡೊಯ್ದು ಹೇಮಾವತಿ ನಾಲೆಗೆ ಎಸೆದು ಮಣ್ಣು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ರೀತಿಯ ಅಬ್ಬರದ ಪ್ರತಿಭಟನೆಗೆ ಅವಕಾಶವಾಗದಂತೆ ಹೇಮಾವತಿ ನಾಲೆ ಬಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಅಡಿಷನಲ್ ಎಸ್ಪಿಗಳಾದ ಮರಿಯಪ್ಪ, ಅಬ್ದುಲ್ ಖಾದರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Share this article