ಪಂಚಮಸಾಲಿ ಸಂಘದಿಂದ ಸೋಮನಗೌಡ ಉಚ್ಚಾಟನೆ; ಶಂಕರ ಬಿಸರಹಳ್ಳಿ ಹಂಗಾಮಿ ಅಧ್ಯಕ್ಷ

KannadaprabhaNewsNetwork |  
Published : Aug 26, 2026, 02:15 AM IST
ಶಂಕರ ಬಿಸರಹಳ್ಳಿ | Kannada Prabha

ಸಾರಾಂಶ

ಕರ್ನಾಟಕ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷರಾಗಿದ್ದ ಸೋಮನಗೌಡ ಪಾಟೀಲ ಅವರು ಸಂಘದ ಚಟುವಟಿಕೆಗಳಿಂದ ದೂರ ಉಳಿದ ಹಿನ್ನೆಲೆಯಲ್ಲಿ ಹಾಗೂ ಸಂಘದ ಹಿತಾಶಕ್ತಿಗೆ ಮತ್ತು ಸಮಾಜದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದರಿಂದ ಅವರನ್ನು ಉಚ್ಚಾಟಿಸಲಾಗಿದ್ದು, ಸಂಘದ ಹಿರಿಯ ಉಪಾಧ್ಯಕ್ಷ ಹಾವೇರಿಯ ಶಂಕರ ಬಿಸರಹಳ್ಳಿ ಅವರನ್ನು ಹಂಗಾಮಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಸಂಘದ ಕಾನೂನು ಸಲಹೆಗಾರ ಸೋಮಶೇಖರ ಕೋತಂಬ್ರಿ ಹೇಳಿದರು.

ಹಾವೇರಿ: ಕರ್ನಾಟಕ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷರಾಗಿದ್ದ ಸೋಮನಗೌಡ ಪಾಟೀಲ ಅವರು ಸಂಘದ ಚಟುವಟಿಕೆಗಳಿಂದ ದೂರ ಉಳಿದ ಹಿನ್ನೆಲೆಯಲ್ಲಿ ಹಾಗೂ ಸಂಘದ ಹಿತಾಶಕ್ತಿಗೆ ಮತ್ತು ಸಮಾಜದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದರಿಂದ ಅವರನ್ನು ಉಚ್ಚಾಟಿಸಲಾಗಿದ್ದು, ಸಂಘದ ಹಿರಿಯ ಉಪಾಧ್ಯಕ್ಷ ಹಾವೇರಿಯ ಶಂಕರ ಬಿಸರಹಳ್ಳಿ ಅವರನ್ನು ಹಂಗಾಮಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಸಂಘದ ಕಾನೂನು ಸಲಹೆಗಾರ ಸೋಮಶೇಖರ ಕೋತಂಬ್ರಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸೋಮನಗೌಡ ಪಾಟೀಲ ಅವರಿಗೆ ಲಿಖಿತ ಹಾಗೂ ಮೌಖಿಕವಾಗಿ ಹಲವು ಬಾರಿ ಮನವಿ ಮಾಡಲಾಗಿತ್ತು. ಆದರೆ, ಯಾವುದೇ ಸ್ಪಂದನೆ ನೀಡದೆ ಸಂಘದ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು 2026ರ ಆ. 9ರಂದು ಹಗರಿಬೊಮ್ಮನಹಳ್ಳಿಯಲ್ಲಿ ನಡೆದ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬಹುಮತದ ನಿರ್ಣಯದ ಮೂಲಕ ಸೋಮನಗೌಡ ಪಾಟೀಲ ಅವರನ್ನು ಅಧ್ಯಕ್ಷ ಸ್ಥಾನದಿಂದ ಉಚ್ಚಾಟನೆ ಮಾಡಲಾಗಿದೆ ಎಂದರು.

ನೂತನವಾಗಿ ಆಯ್ಕೆಯಾಗಿರುವ ಹಂಗಾಮಿ ಅಧ್ಯಕ್ಷ ಶಂಕರ ಬಿಸರಹಳ್ಳಿ ಅವರ ಅಧ್ಯಕ್ಷತೆಯಲ್ಲಿ 2025-26ನೇ ಸಾಲಿನ ಸಂಘದ ಸಾಮಾನ್ಯ ಸಭೆಯನ್ನು ಸೆಪ್ಟೆಂಬರ್ 19ರಂದು ಮಧ್ಯಾಹ್ನ 12 ಗಂಟೆಗೆ ಹಾವೇರಿ ನಗರದ ಶಿವಬಸವ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ. ಸಾಮಾನ್ಯ ಸಭೆಯಲ್ಲಿ ಸಂಘದ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿ, ಅಗತ್ಯ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಠದ ಆಸ್ತಿಗಳನ್ನು ಕಾನೂನು ಉಲ್ಲಂಘಿಸಿ ಪರಭಾರೆ ಮಾಡಿರುವ ಪ್ರಕರಣಗಳಿದ್ದರೆ, ಅಂತಹವರ ವಿರುದ್ಧ ಕಾನೂನುಬದ್ಧ ಹೋರಾಟ ನಡೆಸಿ ಆಸ್ತಿಗಳನ್ನು ಪೀಠಕ್ಕೆ ಮರಳಿಸುವ ಪ್ರಯತ್ನ ಮಾಡಲಾಗುವುದು. ಸಂಘದ ಲೆಕ್ಕಪತ್ರಗಳ ಕುರಿತು ಕಾನೂನುಬದ್ಧವಾಗಿ ಮಾಹಿತಿ ಕೇಳಲು ಅವಕಾಶವಿದ್ದು, ಸಮಾಜ ಹಾಗೂ ಸಂಘವನ್ನು ಗೊಂದಲಕ್ಕೆ ಸಿಲುಕಿಸುವ ಯಾವುದೇ ಪ್ರಯತ್ನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ನೂತನ ಅಧ್ಯಕ್ಷ ಶಂಕರ ಬಿಸರಹಳ್ಳಿ ಮಾತನಾಡಿ, ಅನಿವಾರ್ಯ ಪರಿಸ್ಥಿತಿಯೊಳಗೆ ನನ್ನನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ನನಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ಸಮಾಜದ ಪರವಾಗಿ ನಿರಂತರ ಹೋರಾಟ ಮಾಡುತ್ತೇನೆ. ಸಮಾಜದಲ್ಲಿ ಉಂಟಾಗಿರುವ ಎಲ್ಲ ಗೊಂದಲಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ. ಸಮಾಜದ ಎಲ್ಲ ಬಾಂಧವರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಪರಮೇಶ ಪಟ್ಟಣಶೆಟ್ಟಿ, ಮಹಿಳಾ ಅಧ್ಯಕ್ಷೆ ವಸಂತಾ ಹುಲ್ಲತ್ತಿ, ಶಿವಕುಮಾರ ಬಳಿಗಾರ, ಜಿ. ಷಣ್ಮುಖಪ್ಪ, ಚಂದ್ರಪ್ಪ ಮೇಡ್ಲೇರಿ, ಗೀತಾ ಜಂಬಗಿ, ಕೋಟ್ರೇಶ ಬಿಜಾಪುರ, ಸಿದ್ದೇಶ ಬೇಗೂರ, ಸೋಮಶೇಖರ ಎಣ್ಣಿಯವರ ಇತರರು ಇದ್ದರು.

ಪ್ರತಿಭಾ ಪುರಸ್ಕಾರ: ಹಾವೇರಿ ನಗರ ಶಿವಬಸವ ಕಲ್ಯಾಣ ಮಂಟಪದಲ್ಲಿ ಸೆ. 19ರಂದು ಆಯೋಜಿಸಿರುವ ಸಾಮಾನ್ಯ ಸಭೆಯ ಅಂಗವಾಗಿ ಹಾವೇರಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅರ್ಹ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರತಿಭಾ ಪುರಸ್ಕಾರ ಸ್ವೀಕರಿಸಬೇಕು ಎಂದು ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾದರಿಯಾದ ಪದವಿ ರೈತನ ಕೃಷಿ ಕಾಯಕ
ವೈಯಕ್ತಿಕ ಕಾಮಗಾರಿ ಸದುಪಯೋಗ ಪಡೆಯಿರಿ:ಯಂಕಂಚಿ