ಬರಪೀಡಿತ ಜಿಲ್ಲೆ ಘೋಷಿಸದಿದ್ದರೆ ಶಾಸಕರ ಮನೆಯೆದುರು ಧರಣಿ

KannadaprabhaNewsNetwork |  
Published : Aug 26, 2026, 02:15 AM IST
ಮಲ್ಲಿಕಾರ್ಜುನ ಬಳ್ಳಾರಿ | Kannada Prabha

ಸಾರಾಂಶ

ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಸರ್ಕಾರ ಬರ ಘೋಷಣೆ ಮಾಡುತ್ತಿಲ್ಲ. ಎರಡು ವಾರದೊಳಗೆ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸದಿದ್ದರೆ ಜಿಲ್ಲೆಯ ಶಾಸಕರು ಹಾಗೂ ಸಂಸದರ ಮನೆ ಎದುರು ಧರಣಿ ನಡೆಸಲಾಗುವುದು ಎಂದು ರೈತಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಸಿದರು.

ಹಾವೇರಿ: ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಸರ್ಕಾರ ಬರ ಘೋಷಣೆ ಮಾಡುತ್ತಿಲ್ಲ. ಎರಡು ವಾರದೊಳಗೆ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸದಿದ್ದರೆ ಜಿಲ್ಲೆಯ ಶಾಸಕರು ಹಾಗೂ ಸಂಸದರ ಮನೆ ಎದುರು ಧರಣಿ ನಡೆಸಲಾಗುವುದು ಎಂದು ರೈತಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಎಚ್ಚರಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಳೆ ಕೊರತೆಯಿದ್ದರೂ ಸರ್ಕಾರ ಬರ ಘೋಷಣೆ ಮಾಡಲು ಹಿಂದೇಟು ಹಾಕುತ್ತಿದೆ. ಮೊದಲ ಹಂತದ ಬರ ಪಟ್ಟಿಯಲ್ಲಿ ಹಾವೇರಿ ಜಿಲ್ಲೆಯನ್ನು ನಿರ್ಲಕ್ಷಿಸಲಾಗಿದೆ. ಮುಂದಿನ ಎರಡು ವಾರದಲ್ಲಿ ಬರ ಘೋಷಣೆ ಮಾಡದಿದ್ದರೆ, ರೈತರು ದನಕರುಗಳ ಸಮೇತ ಶಾಸಕರು ಹಾಗೂ ಸಂಸದರ ಮನೆಗಳ ಎದುರು ಧರಣಿ ನಡೆಸಬೇಕಾಗುತ್ತದೆ. ರೈತರ ಸಂಕಷ್ಟಕ್ಕೆ ಜನಪ್ರತಿನಿಧಿಗಳು ಸ್ಪಂದಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಕೃಷಿಯ ಹೊರತಾಗಿ ಹೇಳಿಕೊಳ್ಳುವಂತಹ ಕೈಗಾರಿಕೆಗಳಿಲ್ಲ. ಹೀಗಾಗಿ ಕೃಷಿಯನ್ನೇ ಅವಲಂಬಿಸಿರುವ ರೈತರಿಗೆ ಮಳೆ ಕೊರತೆಯಿಂದ ತೀವ್ರ ಸಂಕಷ್ಟ ಎದುರಾಗಿದೆ. ವಾಡಿಕೆಗಿಂತ ಸುಮಾರು ಶೇ.50ರಷ್ಟು ಕಡಿಮೆ ಮಳೆಯಾಗಿದ್ದು, ಹಲವು ಬೆಳೆಗಳು ಕಾಳು ಕಟ್ಟುವ ಹಂತದಲ್ಲಿಯೇ ಇಲ್ಲ. ಜಿಲ್ಲೆಯ ಬಹುತೇಕ ಕೆರೆಗಳಲ್ಲೂ ನೀರಿನ ಕೊರತೆ ಎದುರಾಗಿದೆ. ಆದರೂ ಬರ ಘೋಷಣೆ ಮಾಡಲು ಸರ್ಕಾರ ಮುಂದಾಗದಿರುವುದು ದುರ್ದೈವ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬರ ಘೋಷಣೆ ಮಾನದಂಡ ಬದಲಿಸಿ..

ಬರ ಘೋಷಣೆಗೆ ಸದ್ಯ ಅನುಸರಿಸುತ್ತಿರುವ ಮಾನದಂಡಗಳಲ್ಲಿ ಬದಲಾವಣೆ ತರಬೇಕು. ಕೇವಲ ಸಿಂಥೆಟಿಕ್ ಆಧಾರಿತವಾಗಿ ಬರ ಘೋಷಣೆ ಮಾಡುವ ಬದಲು, ಸ್ಥಳೀಯ ವಾಸ್ತವ ಪರಿಸ್ಥಿತಿ, ಮಳೆ ಕೊರತೆ, ಬೆಳೆಗಳ ಸ್ಥಿತಿ, ಕೆರೆ-ಕಟ್ಟೆಗಳಲ್ಲಿನ ನೀರಿನ ಲಭ್ಯತೆ ಹಾಗೂ ರೈತರ ಸಂಕಷ್ಟವನ್ನು ಪರಿಗಣಿಸಬೇಕೆಂದು ಆಗ್ರಹಿಸಿದರು.

ಅಧಿವೇಶನದಲ್ಲಿ ಕಾಲಹರಣ..

ಸಚಿವ ನಾಗೇಂದ್ರ ಅವರ ರಾಜೀನಾಮೆ ವಿಚಾರವನ್ನೇ ಮುಂದಿಟ್ಟುಕೊಂಡು ವಿಧಾನಮಂಡಲದ ಕಲಾಪವನ್ನು ಹಾಳು ಮಾಡಲಾಗಿದೆ. ಇದರಿಂದ ಸಮಯ ಹಾಗೂ ಸಾರ್ವಜನಿಕ ಹಣ ವ್ಯರ್ಥವಾಗುತ್ತಿದೆ. ರೈತರ ಸಮಸ್ಯೆಗಳನ್ನು ಆಲಿಸುವುದನ್ನು ಜನಪ್ರತಿನಿಗಳು ಮರೆತಿದ್ದಾರೆ. ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಅಧಿವೇಶನದಲ್ಲಿ ಈ ರೀತಿಯಾಗಿ ಕಾಲಹರಣ ಮಾಡಿರುವುದನ್ನು ರೈತ ಸಂಘ ಖಂಡಿಸುತ್ತದೆ ಎಂದರು.

ಪಶು ವೈದ್ಯರ ನೇಮಕವಾಗಲಿ..

ಜಿಲ್ಲೆಯ ಪಶು ಆಸ್ಪತ್ರೆಗಳಲ್ಲಿ ಪಶುವೈದ್ಯರ ಕೊರತೆ ತೀವ್ರವಾಗಿದೆ. ಕೆಲವೆಡೆ ಅಟೆಂಡರ್‌ಗಳೇ ವೈದ್ಯರ ಕೆಲಸ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಹತ್ತು ವರ್ಷಗಳಿಂದ ಸೂಕ್ತ ನೇಮಕಾತಿ ನಡೆದಿಲ್ಲ. ಕೆಪಿಎಸ್ಸಿ ಹಗರಣದ ನೆಪದಲ್ಲಿ ಉದ್ಯೋಗ ನೇಮಕಾತಿಗಳನ್ನು ಸ್ಥಗಿತಗೊಳಿಸುವ ಬದಲು, ಹಗರಣದಲ್ಲಿ ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಶಿಕ್ಷೆ ನೀಡಬೇಕು. ಶಿಕ್ಷಕರು ಹಾಗೂ ಸರ್ಕಾರಿ ನೌಕರರ ನೇಮಕಾತಿಯನ್ನೂ ತ್ವರಿತವಾಗಿ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎಚ್.ಎಚ್. ಮುಲ್ಲಾ ಮಾತನಾಡಿದರು. ಜಿಲ್ಲಾ ಕಾರ್ಯಾಧ್ಯಕ್ಷ ಶಿವಬಸಪ್ಪ ಗೋವಿ, ಗಂಗಣ್ಣ ಎಲಿ, ಮರಿಗೌಡ ಪಾಟೀಲ, ಸುರೇಶ ಛಲವಾದಿ, ದಿಳ್ಳೆಪ್ಪ ಮಣ್ಣೂರ, ರುದ್ರಗೌಡ ಕಾಡನಗೌಡ್ರ, ರಾಜು ತರ್ಲಘಟ್ಟ, ಚೆನ್ನಪ್ಪ ಮರಡೂರ, ಶಿವಯೋಗಿ ಹೊಸಗೌಡ್ರ, ಗುಡ್ಡನಗೌಡ ಪ್ಯಾಟಿಗೌಡ್ರ, ಜಾನ ಪುನೀತ, ಅಬ್ದುಲ್‌ಖಾದರ ಬುಡಂದಿ, ರಮೇಶ ದಡ್ಡೂರ ಇತರರಿದ್ದರು.

ಅಧಿವೇಶನ ಆರಂಭವಾದಾಗಿನಿಂದಲೂ ಕಾಲಹರಣ ಮಾಡಿರುವುದು ನಾಚಿಕೆಗೇಡಿನ ಸಂಗತಿ. ರೈತರ ಪರ ಧ್ವನಿ ಎತ್ತದೆ, ಸಚಿವರ ವಿಚಾರ ಮುಂದಿಟ್ಟುಕೊಂಡು ಧರಣಿ ನಡೆಸುತ್ತಿರುವುದು ಖಂಡನೀಯ. ನೀರಾವರಿ ಯೋಜನೆ ಹಾಗೂ ಕೆರೆ ತುಂಬಿಸುವ ವಿಚಾರದಲ್ಲೂ ಹಣ ದುರ್ಬಳಕೆಯ ಹುನ್ನಾರ ನಡೆಯುತ್ತಿದೆ. ದನಕರುಗಳಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ಮತ್ತಷ್ಟು ಉಲ್ಬಣಿಸುವ ಸಾಧ್ಯತೆಯಿದೆ. ಜಿಲ್ಲೆಯ ಶಾಸಕರು ರೈತರ ಹಾಗೂ ಜಾನುವಾರುಗಳ ರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ರೈತಸಂಘ ರಾಜ್ಯ ಸಮಿತಿ ಸದಸ್ಯ ಮಾಲತೇಶ ಪೂಜಾರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾದರಿಯಾದ ಪದವಿ ರೈತನ ಕೃಷಿ ಕಾಯಕ
ವೈಯಕ್ತಿಕ ಕಾಮಗಾರಿ ಸದುಪಯೋಗ ಪಡೆಯಿರಿ:ಯಂಕಂಚಿ