ಶಿಗ್ಗಾಂವಿ: ತಾಲೂಕಿನ ಕೆಲವು ಬ್ಯಾಂಕ್‌ಗಳ ವ್ಯವಸ್ಥಾಪಕರು ಇಲ್ಲದ್ದರಿಂದ ನಿಗದಿತ ಅವಧಿಯಲ್ಲಿ ವಿಮಾ ಕಂತು ತುಂಬಲು ಸಾಧ್ಯವಾಗುತ್ತಿಲ್ಲ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಸಾಲಿನಲ್ಲಿ ವಾಣಿಜ್ಯ ಅಥವಾ ಇತರ ಬೆಳೆಗೆ ಹೆಚ್ಚುವರಿಯಾಗಿ ಸಾಲ ಪಡೆದ ರೈತರನ್ನು ಗಮನದಲ್ಲಿಟ್ಟಿಕೊಂಡು ಪ್ರಸಕ್ತ ಸಾಲಿಗೆ ಬೆಳೆ ವಿಮೆ ಪಾವತಿಸಲು ಫಾರ್ಮ್-೬ ನೀಡಿ ಅದರಲ್ಲಿ ಕ್ರಾಪ್ ಹೆಸರನ್ನು ಬದಲಾವಣೆ ಮಾಡಿಸುವಾಗ ಹೆಚ್ಚುವರಿಯಾಗಿ ಈ ಹಿಂದೆ ಪಡೆದಿದ್ದ ಸಾಲ ಮರು ಪಾವತಿಸಿದರೆ ಮಾತ್ರ ಪ್ರಸಕ್ತ ವರ್ಷದಿಂದ ವಿಮೆ ಸೌಲಭ್ಯ ಕಲ್ಪಿಸುವುದಾಗಿ ಬ್ಯಾಂಕ್ ಅಧಿಕಾರಿಗಳು ಹೇಳುತ್ತಾರೆ. ವಾಣಿಜ್ಯ ಬೆಳೆಗೆ ಸಾಲ ಪಡೆದುಕೊಂಡ ರೈತರು ಈ ವರ್ಷ ಇತರ ಬೆಳೆಗೆ ವಿಮೆ ಮಾಡಿಸಬೇಕಾದರೆ ವಾಣಿಜ್ಯ ಮತ್ತು ಇತರ ಬೆಳೆಗೆ ಇರುವ ವ್ಯತ್ಯಾಸದಲ್ಲಿ ಹೆಚ್ಚುವರಿಯಾಗುವ ಮೊತ್ತ ಮಾತ್ರ ವಿಮೆ ಸೌಲಭ್ಯಕ್ಕೊಳಪಡಿಸುತ್ತಿರುವುದು ಅವೈಜ್ಞಾನಿಕ ಕ್ರಮವಾಗಿದೆ. ಬ್ಯಾಂಕ್ ಮತ್ತು ವಿಮೆ ಕಂಪನಿ ವ್ಯವಸ್ಥೆ ಬದಲಿದ್ದರೂ ಸರ್ಕಾರ ಹೊಸ ನಿಯಮ ರೂಪಿಸಿ ರೈತರನ್ನು ವಿಮೆ ಸೌಲಭ್ಯದಿಂದ ವಂಚಿತಗೊಳಿಸುತ್ತಿದೆ ಎಂದು ರೈತರು ದೂರಿದರು.
ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣನವರ ಮಾತನಾಡಿ, ಹೊಸ ಸಾಲ ಪಡೆದುಕೊಳ್ಳುವವರು ಬೆಳೆ ವಿಮೆ ಪಾವತಿಸಬೇಕಿಲ್ಲ. ಕಟಬಾಕಿ ಇರುವ ಅಥವಾ ಹೆಚ್ಚುವರಿ ಸಾಲ ಪಡೆದಿದ್ದು, ಬೇರೆ ಬೆಳೆಯನ್ನು ಬೆಳೆದವರು ಫಾರ್ಮ್ ನಂ-೬ ಸ್ವಯಂ ಘೋಷಣಾ ಪತ್ರವಾಗಿ ಸಲ್ಲಿಸಬೇಕು. ಕೆಲವು ರೈತರು ನಿಯಮ ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಹೊಸ ನಿಯಮ ಜಾರಿಗೆ ತರಲಾಗಿದೆ. ಬ್ಯಾಂಕ್‌ಗಳು ಪರಿಹಾರ ಹಣವನ್ನು ಸಾಲಕ್ಕೆ ಕಟ್ಟಿಸಿಕೊಳ್ಳಬಾರದು ಎಂದರು.ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಗೆಜಲಿ ಮಾತನಾಡಿ, ಬೆಳೆಹಾನಿ, ಬೆಳೆ ವಿಮಾ ಪರಿಹಾರ ಬೇರೆ, ಬೇರೆ ಮಾನದಂಡಗಳಲ್ಲಿ ಕೆಲಸ ಮಾಡುವುದರಿಂದ ಬೆಳೆಹಾನಿ ಘೋಷಣೆಯಾದ ಬೆಳೆಗಳಿಗೆ ವಿಮಾ ಪರಿಹಾರ ನೀಡಲು ಬರಲ್ಲ. ಬ್ಯಾಂಕ್‌ನಲ್ಲಿ ಸಿಬ್ಬಂದಿ ಕೊರತೆ ನೆಪವೊಡ್ಡಿ ಬೆಳೆ ವಿಮೆ ಹಣ ಪಾವತಿಸಿಕೊಳ್ಳಲು ವಂಚಿಸಬಾರದು. ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.