ಕೇಣಿ ವಾಣಿಜ್ಯ ಬಂದರು ವಿರೋಧಿಸಿ 22ರಂದು ಅಂಕೋಲಾದಿಂದ ಕಾರವಾರಕ್ಕೆ ಬೃಹತ್ ಪಾದಯಾತ್ರೆ

KannadaprabhaNewsNetwork |  
Published : Jul 09, 2026, 01:00 AM IST
ಹೋರಾಟಗಾರರ ನಿಯೋಗವು ಮನವಿ ಸಲ್ಲಿಸಿತು. | Kannada Prabha

ಸಾರಾಂಶ

ಕೇಣಿ ಸರ್ವಋತು ಆಳಸಮುದ್ರದ ವಾಣಿಜ್ಯ ಬಂದರು ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿ ಹಾಗೂ ಪರಿಸರ ವಿನಾಶದ ವಿರುದ್ಧ ದನಿ ಎತ್ತಲು ಕೇಣಿ ವಾಣಿಜ್ಯ ಬಂದರು ವಿರೋಧಿಸಿ ಅಂಕೋಲಾ ಉತ್ತರ ಕನ್ನಡ ಉಳಿಸಿ ಹೋರಾಟಗಾರರ ವೇದಿಕೆಯಿಂದ ಜು. 22ರಂದು ಬೃಹತ್ ಪ್ರತಿಭಟನಾ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಕಾರವಾರ

ಕೇಣಿ ಸರ್ವಋತು ಆಳಸಮುದ್ರದ ವಾಣಿಜ್ಯ ಬಂದರು ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿ ಹಾಗೂ ಪರಿಸರ ವಿನಾಶದ ವಿರುದ್ಧ ದನಿ ಎತ್ತಲು ಕೇಣಿ ವಾಣಿಜ್ಯ ಬಂದರು ವಿರೋಧಿಸಿ ಅಂಕೋಲಾ ಉತ್ತರ ಕನ್ನಡ ಉಳಿಸಿ ಹೋರಾಟಗಾರರ ವೇದಿಕೆಯಿಂದ ಜು. 22ರಂದು ಬೃಹತ್ ಪ್ರತಿಭಟನಾ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಹೋರಾಟಗಾರರ ನಿಯೋಗವು ಬುಧವಾರ ಕಾರವಾರದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ ಅಧಿಕೃತ ಅನುಮತಿ ಹಾಗೂ ಸೂಕ್ತ ಬಂದೋಬಸ್ತ್ ಒದಗಿಸುವಂತೆ ಕೋರಿ ಮನವಿ ಸಲ್ಲಿಸಿದೆ.

ಜು. 22ರ ಬೆಳಗ್ಗೆ 8ಗಂಟೆಗೆ ಅಂಕೋಲಾ ಪಟ್ಟಣದ ಐತಿಹಾಸಿಕ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದ ಆವರಣದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಈ ಬೃಹತ್ ಪಾದಯಾತ್ರೆಗೆ ಚಾಲನೆ ನೀಡಲಾಗುವುದು. ತದನಂತರ ಅಂಕೋಲಾ ಪಟ್ಟಣದ ಮುಖ್ಯ ರಸ್ತೆಗಳ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಸಾವಿರಾರು ಸಾರ್ವಜನಿಕರು, ಪರಿಸರವಾದಿಗಳು ಹಾಗೂ ರೈತರು ಕಾರವಾರ ನಗರವನ್ನು ಪ್ರವೇಶಿಸಲಿದ್ದಾರೆ. ಕಾರವಾರ ನಗರವನ್ನು ಸುತ್ತುವರೆದು ಅಂತಿಮವಾಗಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ತಲುಪಲಿದ್ದು, ಅಲ್ಲಿ ಸಾಂಕೇತಿಕ ಧರಣಿ ನಡೆಸುವ ಮೂಲಕ ಸರ್ಕಾರದ ಮೇಲೆ ಮತ್ತೊಮ್ಮೆ ಒತ್ತಡ ಹೇರಲು ಹೋರಾಟಗಾರರು ನಿರ್ಧರಿಸಿದ್ದಾರೆ.

ಸಾರ್ವಜನಿಕ ಅಹವಾಲು ಸಭೆಯಲ್ಲಿ ಭಾರಿ ಸಾರ್ವಜನಿಕ ವಿರೋಧ ವ್ಯಕ್ತವಾಗಿದ್ದರೂ ಮತ್ತು ಸ್ಥಳೀಯ ಗ್ರಾಪಂ ಬಂದರು ಯೋಜನೆ ಬೇಡವೆಂದು ಅಧಿಕೃತ ಠರಾವನ್ನು ಪಾಸ್ ಮಾಡಿದ್ದರೂ, ಪ್ರಜಾಪ್ರಭುತ್ವದ ಆಶಯಗಳಿಗೆ ಬೆಲೆ ನೀಡದೆ ದೊಡ್ಡ ಮಟ್ಟದ ಕಾರ್ಪೊರೇಟ್ ಲಾಬಿ ನಡೆಯುತ್ತಿದೆ ಎಂದು ವೇದಿಕೆ ದೂರಿದೆ.

ಅಲ್ಲದೆ, ಖಾಸಗಿ ಕಂಪನಿಯ ಏಜೆಂಟರು ಹಿಂಬಾಗಿಲ ಮೂಲಕ ಪ್ರವೇಶಿಸಿ, ಖೊಟ್ಟಿ ಕಾಗದ ಪತ್ರಗಳನ್ನು ಸೃಷ್ಟಿಸಿ ಅಕ್ರಮ ಭೂ ಮಾಫಿಯಾ ದಂಧೆಗೆ ಇಳಿದಿರುವುದು ಪರಿಸರ ಮತ್ತು ಸ್ಥಳೀಯರ ಬದುಕಿಗೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ತಮ್ಮ ಭವಿಷ್ಯ ಹಾಗೂ ಜೀವನಾಧಾರವನ್ನು ರಕ್ಷಿಸಿಕೊಳ್ಳಲು ಅಂಕೋಲಾ ಮತ್ತು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಪ್ರಜ್ಞಾವಂತ ನಾಗರಿಕರು, ಕೃಷಿಕರು, ಕೂಲಿ ಕಾರ್ಮಿಕರು, ಪರಿಸರವಾದಿಗಳು ಹಾಗೂ ರೈತಪರ ಸಂಘಟನೆಗಳು ಜಾತಿ, ಧರ್ಮ, ಪಕ್ಷ ಹಾಗೂ ಲಿಂಗ ಭೇದ ಮರೆತು ಒಂದಾಗಿ ಹೋರಾಟಕ್ಕೆ ಸಜ್ಜಾಗಿದ್ದಾರೆ. ಈ ನ್ಯಾಯಯುತ ಪಾದಯಾತ್ರೆಯು ರಾಷ್ಟ್ರೀಯ ಹೆದ್ದಾರಿಯಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಶಾಂತಿಯುತವಾಗಿ ಸಾಗಲಿದೆ ಎಂದು ತಿಳಿಸಲಾಗಿದೆ.

ಸಂಜೀವ ಎಸ್.ಬಲೆಗಾರ, ಕೇಶವ ವಿ.ನಾಯ್ಕ, ರವಿ ಎಂ.ಗೌಡ, ಜಟ್ಟಪ್ಪ ವಿ.ನಾಯ್ಕ, ದೇವಿದಾಸ್ ಎಸ್.ಗೌಡ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಐಆರ್: ಶೇ.90 ಅರ್ಜಿ ವಿತರಣೆ
ಸಿಗದ ಸಮರ್ಪಕ ಪರಿಹಾರ: ಕಾಮಗಾರಿ ಸ್ಥಗಿತಗೊಳಿಸಿ ರೈತರ ಪ್ರತಿಭಟನೆ