ಕೊಪ್ಪಳ: ವಚನ ಪಿತಾಮಹ ಎಂದು ಖ್ಯಾತರಾದ ಫ.ಗು.ಹಳಕಟ್ಟಿ 12ನೇ ಶತಮಾನದ ಬಸವಾದಿ ಶರಣರ ವಚನಗಳನ್ನು ಸಂರಕ್ಷಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ವಚನಗಳಿಗೆ ಶಾಶ್ವತ ಅಸ್ತಿತ್ವ ದೊರಕಿಸಿಕೊಟ್ಟರು ಎಂದು ನಗರದ ಶ್ರೀಗವಿಸಿದ್ದೇಶ್ವರ ಕಲಾ,ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಶರಣಬಸಪ್ಪ ಬಿಳಿಎಲಿ ಹೇಳಿದರು.
ಹಳಕಟ್ಟಿ ಒಟ್ಟು 2,209 ತಾಳೆಗರಿಯ ವಚನ ಸಂಗ್ರಹಿಸಿದ್ದರು. ಅವುಗಳನ್ನು 250 ವಿವಿಧ ವಿಭಾಗಗಳಾಗಿ ವರ್ಗೀಕರಿಸಿ 219 ಹೊಸ ವಚನಕಾರರನ್ನು ಗುರುತಿಸಿದರು. ಅಲ್ಲಿಯವರೆಗೂ ಕೇವಲ 50 ವಚನಕಾರರ ಹೆಸರುಗಳಷ್ಟನ್ನೇ ಗುರುತಿಸಲಾಗಿತ್ತು. ಹಳಕಟ್ಟಿಯವರ ವಚನಗಳ ಸಂಗ್ರಹದಿಂದ ಹೊಸ ವಚನಕಾರರು ಗುರುತಿಸಲ್ಪಟ್ಟರು. ವಿವಿಧ ವಿಭಾಗಗಳ ವಚನ ವರ್ಗೀಕರಣದಲ್ಲಿ 160 ಕ್ಕೂ ಹೆಚ್ಚು ಕೃತಿ ರಚಿಸಿ, 25,000 ಪುಟಗಳ ಸಾಹಿತ್ಯ ಬರೆದಿದ್ದಾರೆ. ಶಿವಾನುಭವ ಎಂಬ ಮಾಸಪತ್ರಿಕೆ ಆರಂಭಿಸಿದ ಅವರು ಸತತ 36 ವರ್ಷಗಳ ಕಾಲ ಅದನ್ನು ಪ್ರತಿ ತಿಂಗಳು ಮುದ್ರಣವಾಗುವಂತೆ ನೋಡಿಕೊಂಡರು. ಕರ್ನಾಟಕ ಏಕೀಕರಣದ ಚಳವಳಿಗೆ ಬೆಂಬಲ ನೀಡಲು ನವಕರ್ನಾಟಕ ಎಂಬ ವಾರಪತ್ರಿಕೆ ಆರಂಭಿಸಿದರು. ಕೇವಲ ನಮ್ಮ ನಾಡಿಗೆ ಮಾತ್ರವಲ್ಲದೆ ಪ್ರಪಂಚಕ್ಕೆ ಕೊಡುಗೆಯಾಗಬಲ್ಲ ವಚನ ಸಾಹಿತ್ಯದ ಸಂರಕ್ಷಣೆ ತಮ್ಮ ಬದುಕಿನ ಧ್ಯೇಯವಾಗಿ ಸಾಧಿಸಿದವರು ಹಳಕಟ್ಟಿ ಎಂದು ಹೇಳಿದರು.
ವಿಶ್ವಗುರು ಬಸವೇಶ್ವರ ಸಮಿತಿಯ ರಾಜೇಶ ಶಶಿಮಠ ಮಾತನಾಡಿ, ಫ.ಗು.ಹಳಕಟ್ಟಿ ಕೇವಲ ವಚನ ಸಾಹಿತ್ಯದ ಪಿತಾಮಹ ಮಾತ್ರವಲ್ಲ ಶಿಕ್ಷಣ ಕ್ಷೇತ್ರಕ್ಕೂ ಅವರ ಕೊಡುಗೆ ಅಪಾರವಾಗಿದೆ. ಅಖಂಡ ವಿಜಯಪುರ ಜಿಲ್ಲೆಯಲ್ಲಿ ಮರಾಠಿ ಭಾಷೆಯ ಪ್ರಭಾವ ಹೆಚ್ಚಿರುವ ಪ್ರದೇಶದಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ 6 ಗಂಡು ಮಕ್ಕಳ ಶಾಲೆಗಳನ್ನು ಹಾಗೂ 3 ಹೆಣ್ಣುಮಕ್ಕಳ ಶಾಲೆ ತೆರೆದರು. ಇಂದಿನ ಬಿ.ಎಲ್.ಡಿ.ಇ ಸಂಸ್ಥೆಯ ಮೂಲ ಸಂಸ್ಥಾಪಕರು ಹಳಕಟ್ಟಿಯವರು. ವಿಶ್ವ ಸಾಹಿತ್ಯಕ್ಕೆ ವಚನ ಸಾಹಿತ್ಯ ಕೊಡುಗೆಯಾಗಿ ನೀಡಿದ್ದಾರೆ ಎಂದು ಹೇಳಿದರು.ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಚಾರ್ಯ ಶರಣಬಸವಗೌಡ ಪಾಟೀಲ ಮಾತನಾಡಿ, ಇಂದಿನ ಮಕ್ಕಳು ಮೊಬೈಲ್ ಗೀಳಿನಿಂದ ಹೊರಬಂದು ಫ.ಗು. ಹಳಕಟ್ಟಿಯವರಂತಹ ಮಹನೀಯರು ನಮಗೆ ನೀಡಿದ ಕೊಡುಗೆ ಗೌರವಿಸಿ ಅನುಸರಿಸಬೇಕಿದೆ. ಏನನ್ನೂ ಓದದಿರುವುದು ಕೆಟ್ಟ ಸಾಹಿತ್ಯ ಓದುವುದಕ್ಕಿಂತಲೂ ಕೆಟ್ಟದ್ದು ಎಂಬ ಮಾತಿನಂತೆ ಓದುವ ಹವ್ಯಾಸ ಮಕ್ಕಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.