ದಿನ ಕಳೆದ ಬಳಿಕ ಮಳೆ ಆದರೂ ಸಹ ಬೆಳೆ ಸಮೃದ್ಧ ಬರುವುದಿಲ್ಲ. ಬೆಳೆ ಬೆಳವಣಿಗೆ ಕುಂಠಿತವಾಗಿ ಕಮರುತ್ತದೆ

ಕೊಪ್ಪಳ: ಈ ಬಾರಿಯ ಮುಂಗಾರು ಬಹುತೇಕ ಮುನಿಸಿಕೊಂಡಿದ್ದು. ಸುರಿದ ಅಲ್ಪಸ್ವಲ್ಪ ಮಳೆಗೆ ಈಗಾಗಲೇ ಬಿತ್ತನೆ ಮಾಡಿದ ರೈತ ದುಬಾರಿ ಖುರ್ಚು ಮಾಡಿಕೊಂಡು ಹೈರಾಣಾಗಿದ್ದಾನೆ. ಮುಂಗಾರಿನ ಮುನಿಸಿನಿಂದ ಮುಂದಿನ ದಿನಗಳಲ್ಲಿ ಬರದ ಛಾಯೆ ಆವರಿಸಲಿದೆ. ಮೋಡದ ವಾತಾವರಣ ಇದ್ದರೂ ಸಹ ಭೂಮಿಗೆ ಮಳೆ ಹನಿ ತಲುಪುತ್ತಿಲ್ಲ. ರೈತ ವರ್ಗ ಮಳೆ ದಾರಿ ಕಾಯುತ್ತಾ ಕುಳಿತಿದ್ದಾರೆ.

ಜಿಲ್ಲೆಯಲ್ಲಿ ಬಿತ್ತಿದ ಬೆಳೆಗೆ ಮಳೆ ಇಲ್ಲದೇ ತೇವಾಂಶ ಕೊರತೆಯಿಂದ ಬಾಡುತ್ತಿದೆ. ದಿನ ಕಳೆದ ಬಳಿಕ ಮಳೆ ಆದರೂ ಸಹ ಬೆಳೆ ಸಮೃದ್ಧ ಬರುವುದಿಲ್ಲ. ಬೆಳೆ ಬೆಳವಣಿಗೆ ಕುಂಠಿತವಾಗಿ ಕಮರುತ್ತದೆ. ಸದ್ಯ ಉಳುಮೆ, ಬಿತ್ತನೆ, ಕಳೆ ನಿರ್ವಹಣೆ ಸೇರಿದಂತೆ ರೈತ ವರ್ಗ ದುಬಾರಿ ಖರ್ಚು ಮಾಡಿ ಕಂಗಾಲಾಗಿದ್ದಾನೆ. ಇನ್ನೂ ಕೆಲವೆಡೆ ಮಳೆ ಅಭಾವಕ್ಕೆ ರೈತರು ಬಿತ್ತನೆಗೆ ಮುಂದಾಗಿಲ್ಲ. ಕಳೆದ ಮೂರು ವರ್ಷದ ಅಂಕಿ ಅಂಶಗಳ ಬಿತ್ತನೆ ಪ್ರಮಾಣ ಗಮನಿಸಿದರೆ ಈ ಸಲದ ಬಿತ್ತನೆ ಪ್ರಮಾಣ ಬಹುತೇಕ ಕಡಿಮೆಯೇ ಇದೆ. ರೈತರು ಹೆಸರು, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆ ಹೊಲದಲ್ಲಿ ಬಿತ್ತಿ ಬಂದಿದ್ದಾರೆ. ನಂತರ ನಿರಂತರ ವರುಣ ದೇವ ಕೈಕೊಟ್ಟ ಪರಿಣಾಮ ಬಿತ್ತಿದ ಬೀಜ ನೆಲ ಬಿಟ್ಟು ಮೇಲೆ ಎದ್ದಿಲ್ಲ. ಕೆಲವು ಕಡೆಯಂತೂ ಸಸಿಗಳು ಹೊರ ಬಂದಿದ್ದು, ಮಳೆಯಾಗದ ಪರಿಣಾಮ ಬಾಡುತ್ತಿವೆ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಇದುವರೆಗೆ ವಾಡಿಕೆಗಿಂತ ಶೇ. 3ರಷ್ಟು ಹೆಚ್ಚು ಮಳೆ ದಾಖಲಿಸಿದ್ದರೂ ಕಳೆದ 10 ರಿಂದ 12 ದಿನಗಳಿಂದ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಮಳೆಯಾಶ್ರಿತ ಪ್ರದೇಶಗಳ ಬೆಳೆ ಬಾಡುವ ಸ್ಥಿತಿಗೆ ತಲುಪಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ.

ಜಿಲ್ಲೆಯಲ್ಲಿ ಜೂ.28ರ ಅಂತ್ಯದವರೆಗೆ ವಾಡಿಕೆ 157 ಮಿಮೀ ಮಳೆಯಾಗಬೇಕಿದ್ದರೆ ವಾಸ್ತವವಾಗಿ 161.60 ಮಿಮೀ ಮಳೆಯಾಗಿದ್ದು, ಒಟ್ಟಾರೆ ಶೇ.3ಕ್ಕೂ ಅಧಿಕ ಮಳೆ ದಾಖಲಾಗಿದೆ. ಆದರೆ, ಕಳೆದ ಕೆಲವು ದಿನಗಳಿಂದ ಮಳೆ ಕೈಕೊಟ್ಟ ಪರಿಣಾಮ ಜಿಲ್ಲಾದ್ಯಂತ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಜಿಲ್ಲೆಯ ಮುಂಗಾರು ಬಿತ್ತನೆ ಗುರಿ 3,49,892 ಹೆಕ್ಟೇರ್ ಆಗಿದ್ದು, ಇದುವರೆಗೆ 1,63,546 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಒಟ್ಟು ಗುರಿಯ ಶೇ. 47ರಷ್ಟು ಬಿತ್ತನೆ ಪೂರ್ಣಗೊಂಡಿದೆ.

ಅಂತರ್ಜಲ ಮಟ್ಟ ಕುಸಿತ: ಮಳೆ ಅಭಾವದ ಹಿನ್ನೆಲೆ ಅಂತರ್ಜಲ ಮಟ್ಟ ಸಹ ಕುಸಿಯುತ್ತಿದೆ. ಬೇಸಿಗೆ ದಿನದಲ್ಲಿ ಮಾತ್ರವಲ್ಲದೆ ಮಳೆಗಾಲದ ಈ ದಿನದಲ್ಲೂ ಸಹ ಬೋರವೆಲ್‌ಗಳಲ್ಲಿ ಮಳೆ ಅಭಾವದಿಂದ ನೀರಿನ ಪ್ರಮಾಣ ಕಡಿಮೆ ಆಗಿದೆ. ಜಿಲ್ಲಾದ್ಯಂತ ವರುಣನ ಮುನಿಸು ಮುಂದುವರೆದಿರುವುದರಿಂದ ರೈತರು ಕಷ್ಟಪಟ್ಟು ಬೆಳೆದ ಬೆಳೆ ಬಾಡಲಾರಂಭಿಸಿವೆ.

ಮಳೆಯಾಶ್ರೀತ ಪ್ರದೇಶದ ರೈತರ ಪರಿಸ್ಥಿತಿ ದೇವರಿಗೆ ಪ್ರೀತಿ ಎಂಬಂತಾಗಿದ್ದು, ಇನ್ನೊಂದು ವಾರದಲ್ಲಿ ಮಳೆ ಬಾರದಿದ್ದರೆ ರೈತರು ಕಷ್ಟ ಪಟ್ಟು ಬಿತ್ತದ ಬೆಳೆಗಳೆಲ್ಲ ಮಣ್ಣು ಪಾಲಾಗುವ ಸಂಭವ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಮುಕ್ಕಾಲು ಭಾಗ ಖುಷ್ಕಿ ಪ್ರದೇಶವಿದ್ದು, ಕಾಲು ಭಾಗ ನೀರಾವರಿ ಪ್ರದೇಶವಿದೆ. ಆದರೆ ಪ್ರಸಕ್ತ ಸಾಲಿನಲ್ಲಿ ಈ ಎರಡು ಭಾಗದ ರೈತರು ತೊಂದರೆ ಅನುಭವಿಸುತ್ತಿದ್ದಾರೆ‌.

ಕಳೆದ ವರ್ಷ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ದುರಸ್ತಿ ಕಾರ್ಯ ಹಮ್ಮಿಕೊಂಡ ಹಿನ್ನೆಲೆ ರೈತರು ಎರಡನೇ ಬೆಳೆ ಬೆಳೆಯದೇ ತ್ಯಾಗ ಮಾಡಿದ್ದರು. ಆದರೀಗ ಪ್ರಕೃತಿ ವಿಕೋಪದ ಪರಿಣಾಮ ಪ್ರಸಕ್ತ ಸಾಲಿನಲ್ಲಿ ಮೊದಲನೇ ಬೆಳೆ ಬೆಳೆಯಲಾರದ ಸಂದಿಗ್ಧ ಪರಿಸ್ಥಿತಿಗೆ ಬಂದು ನಿಂತಿದ್ದಾರೆ. ಜಿಲ್ಲೆಯ ಕುಕನೂರು, ಯಲಬುರ್ಗಾ, ಕನಕಗಿರಿ, ಕುಷ್ಟಗಿ ಹಾಗೂ ಕೊಪ್ಪಳ ತಾಲೂಕಿನ ಅಳವಂಡಿ, ಇರಕಲ್ಲಗಡ ಹೋಬಳಿ ರೈತರು ದಿನನಿತ್ಯ ಮಳೆರಾಯನಿಗಾಗಿ ಜಪ ಶುರು ಮಾಡಿದ್ದು, ವರುಣ ದೇವ ಕೃಪೆ ತೊರಬೇಕಿದೆ.

ಮಳೆ ಬಾರದಿದ್ದರೆ ರೈತರ ಗತಿ ಅಧೋಗತಿ ಆಗುತ್ತದೆ. ಮಳೆ ನಂಬಿ ಸಾವಿರಾರು ಖರ್ಚು ಮಾಡಿಕೊಂಡು ರೈತ ವರ್ಗ ಬಿತ್ತನೆ ಮಾಡಿದೆ. ಮಳೆ ಈಗಾಗಲೇ ಕೈ ಕೊಟ್ಟಿದೆ. ಇದರಿಂದ ರೈತರು ಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಸಹ ಇದರ ಬಗ್ಗೆ ಗಮನ ಹರಿಸಿ ರೈತ ವರ್ಗಕ್ಕೆ ಬರ ಪರಿಹಾರ, ಬೆಳೆ ವಿಮೆ ಸರಿಯಾಗಿ ತಲುಪಿಸುವ ಕಾರ್ಯ ಮಾಡಬೇಕು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರುಳಿ ತಿಳಿಸಿದ್ದಾರೆ.

ಜೂನ್ ತಿಂಗಳ ಮೊದಲ ವಾರದಲ್ಲಿ ಮಳೆ ಆಗಿದ್ದು ನಂತರ ದಿನದಲ್ಲಿ ಒಣ ಹವೆ ಇದೆ. ಮಳೆ ಅಭಾವ ಇದೆ ಎಂದು ಕೊಪ್ಪಳ ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಟಿ. ಕೃಷ್ಣಮೂರ್ತಿ ತಿಳಿಸಿದ್ದಾರೆ.