ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದಂತೆ ಸಾರ್ವಜನಿಕರ ವಾಹನಗಳು ಹಾಗೂ ಆ್ಯಂಬುಲೆನ್ಸ್ ಮೂಲಕ ಗದಗಿನ ಜಿಮ್ಸ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಗದಗ: ಶಾಲಾ ಆಟದ ಅವಧಿಯಲ್ಲಿ ಗೋಡಂಬಿ ಬೀಜ ಎಂದು ತಪ್ಪಾಗಿ ಭಾವಿಸಿ ಔಡಲಕಾಯಿ ಸೇವಿಸಿದ ಪರಿಣಾಮ 25ಕ್ಕೂ ಹೆಚ್ಚು ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಬೆಳಧಡಿ ತಾಂಡಾದಲ್ಲಿ ಬುಧವಾರ ಸಂಜೆ ನಡೆದಿದೆ. ಅಸ್ವಸ್ಥಗೊಂಡ ಎಲ್ಲ ಮಕ್ಕಳನ್ನು ತಕ್ಷಣವೇ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಬೆಳಧಡಿ ತಾಂಡಾದ ಸರ್ಕಾರಿ ಶಾಲೆಯ ಪಕ್ಕದಲ್ಲಿದ್ದ ಗಿಡದಿಂದ 2, 3 ಮತ್ತು 4ನೇ ತರಗತಿಯ ಮಕ್ಕಳು ಆಟದ ಅವಧಿಯಲ್ಲಿ ಈ ಕಾಯಿಗಳನ್ನು ಕಿತ್ತಿದ್ದಾರೆ. ನೋಡುವುದಕ್ಕೆ ಕಾಯಿಗಳು ಗೋಡಂಬಿ ಬೀಜದಂತೆ ಕಂಡಿದ್ದರಿಂದ, ಮಕ್ಕಳು ಅದನ್ನು ತಿನ್ನುವ ಪದಾರ್ಥವೆಂದು ಭಾವಿಸಿ ಹಂಚಿಕೊಂಡು ತಿಂದಿದ್ದಾರೆ.

ಕಾಯಿ ಸೇವಿಸಿದ ಕೆಲವೇ ಸಮಯದ ಬಳಿಕ ಮಕ್ಕಳಲ್ಲಿ ತೀವ್ರ ವಾಂತಿ, ಭೇದಿ, ಹೊಟ್ಟೆನೋವು ಹಾಗೂ ತಲೆಸುತ್ತು ಕಾಣಿಸಿಕೊಂಡಿದೆ. ಒಂದೇ ಬಾರಿಗೆ ಇಷ್ಟೊಂದು ಸಂಖ್ಯೆಯ ಮಕ್ಕಳು ಅಸ್ವಸ್ಥಗೊಳ್ಳುತ್ತಿದ್ದಂತೆ ಶಾಲಾ ಸಿಬ್ಬಂದಿ ಹಾಗೂ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಅಸ್ವಸ್ಥರಲ್ಲಿ 18 ಬಾಲಕಿಯರು ಹಾಗೂ 9 ಬಾಲಕರು ಸೇರಿದ್ದಾರೆ.

ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದಂತೆ ಸಾರ್ವಜನಿಕರ ವಾಹನಗಳು ಹಾಗೂ ಆ್ಯಂಬುಲೆನ್ಸ್ ಮೂಲಕ ಗದಗಿನ ಜಿಮ್ಸ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ಮಕ್ಕಳ ವಾರ್ಡ್‌ನಲ್ಲಿ ಸದ್ಯ ಎಲ್ಲ ವಿದ್ಯಾರ್ಥಿಗಳಿಗೆ ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯಕ್ಕೆ ಮಕ್ಕಳ ಆರೋಗ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆಯಾದರೂ, ಪೋಷಕರು ಮತ್ತು ಸಂಬಂಧಿಕರು ಆಸ್ಪತ್ರೆಯ ಆವರಣದಲ್ಲಿ ಆತಂಕದಿಂದ ಕಣ್ಣೀರಿಡುತ್ತಿದ್ದ ದೃಶ್ಯ ಕಂಡುಬಂದಿತು.

ಗುಣಮುಖರಾಗಲಿ: ಮಕ್ಕಳು ಶಾಲೆಗೆ ಅಂತಾ ಹೋಗಿದ್ರು. ಆಟ ಆಡೋ ಟೈಮಲ್ಲಿ ಶಾಲೆಯ ಪಕ್ಕದಲ್ಲಿದ್ದ ಗಿಡದ ಕಾಯಿನ ಗೋಡಂಬಿ ಅಂತಾ ತಿಳಿದುಕೊಂಡು ತಿಂದಿದ್ದಾರೆ. ಆಮೇಲೆ ಮಕ್ಕಳಿಗೆ ವಾಂತಿ, ಹೊಟ್ಟೆನೋವು ಶುರುವಾಗಿ ನಮಗೆ ವಿಷಯ ಗೊತ್ತಾಯ್ತು. ತಕ್ಷಣವೇ ಆಸ್ಪತ್ರೆಗೆ ಕರ್ಕೊಂಡು ಬಂದಿದ್ದೀವಿ. ಡಾಕ್ಟರ್ಸ್ ಚಿಕಿತ್ಸೆ ಕೊಡುತ್ತಿದ್ದಾರೆ ಮಕ್ಕಳು ಬೇಗ ಗುಣಮುಖರಾಗಲಿ ಅಷ್ಟೇ ನಮ್ಮ ಪ್ರಾರ್ಥನೆ ಎಂದು ಪೋಷಕಿ ಕಮಲಾ ಪೂಜಾರ ತಿಳಿಸಿದರು.ಜಾಗೃತಿ ಅಗತ್ಯ: ಶಾಲೆಯ ಆವರಣದ ಸನಿಹದಲ್ಲಿ ಇಂತಹ ವಿಷಕಾರಿ ಗಿಡಗಳನ್ನು ಇರಬಾರದಿತ್ತು. ಮಕ್ಕಳಿಗೆ ತಿಳಿವಳಿಕೆ ಇರುವುದಿಲ್ಲ. ಗೋಡಂಬಿ ತರಹ ಕಾಣಿಸಿದ್ದಕ್ಕೆ ತಿಂದು ಈ ಅವಾಂತರ ಮಾಡಿಕೊಂಡಿದ್ದಾರೆ. ಶಿಕ್ಷಣ ಇಲಾಖೆಯವರು ಮತ್ತು ಶಾಲಾ ಮಂಡಳಿಯವರು ಇನ್ನು ಮುಂದೆಯಾದರೂ ಶಾಲೆಯ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಡುವತ್ತ ಗಮನಹರಿಸಬೇಕು. ಇಂತಹ ಕಾಯಿಗಳ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಗ್ರಾಮಸ್ಥ ವಿಠ್ಠಲ ತೋಟದ ತಿಳಿಸಿದರು.