ಫ.ಗು. ಹಳಕಟ್ಟಿ ಸೇವೆ ಅವಿಸ್ಮರಣೀಯ: ಅಪರ ಡಿಸಿ ಡಾ. ಭಾಸ್ಕರ್

KannadaprabhaNewsNetwork |  
Published : Jul 03, 2026, 01:15 AM IST
       ಸಿಕೆಬಿ-3 ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಡಾ. ಫಾ.ಗು. ಹಳಕಟ್ಟಿಯವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು | Kannada Prabha

ಸಾರಾಂಶ

ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ವಿಶ್ವದ ಮುಂದೆ ಎತ್ತಿಹಿಡಿದ ಪ್ರಮುಖ ಸಾಹಿತ್ಯ ಪರಂಪರೆಗಳಲ್ಲಿ ವಚನ ಸಾಹಿತ್ಯವೂ ಒಂದಾಗಿದೆ. ಈ ಅಮೂಲ್ಯ ಸಾಹಿತ್ಯ ಸಂಪತ್ತನ್ನು ಸಂಗ್ರಹಿಸಿ, ಸಂರಕ್ಷಿಸಿ, ಕೃತಿರೂಪದಲ್ಲಿ ಮುಂದಿನ ಪೀಳಿಗೆಗೆ ತಲುಪಿಸಿದ ಮಹಾನ್ ಸಾಧನೆ ಡಾ. ಫ.ಗು. ಹಳಕಟ್ಟಿಯವರದ್ದು

ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ

ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ವಿಶ್ವದ ಮುಂದೆ ಎತ್ತಿಹಿಡಿದ ಪ್ರಮುಖ ಸಾಹಿತ್ಯ ಪರಂಪರೆಗಳಲ್ಲಿ ವಚನ ಸಾಹಿತ್ಯವೂ ಒಂದಾಗಿದೆ. ಈ ಅಮೂಲ್ಯ ಸಾಹಿತ್ಯ ಸಂಪತ್ತನ್ನು ಸಂಗ್ರಹಿಸಿ, ಸಂರಕ್ಷಿಸಿ, ಕೃತಿರೂಪದಲ್ಲಿ ಮುಂದಿನ ಪೀಳಿಗೆಗೆ ತಲುಪಿಸಿದ ಮಹಾನ್ ಸಾಧನೆ ಡಾ. ಫ.ಗು. ಹಳಕಟ್ಟಿಯವರದ್ದು ಎಂದು ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಡಾ. ಫ.ಗು. ಹಳಕಟ್ಟಿಯವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಕನ್ನಡವು ಅತ್ಯಂತ ಸುಂದರವಾದ, ವೈಜ್ಞಾನಿಕ ಹಾಗೂ ಪ್ರಾಚೀನ ಭಾಷೆಯಾಗಿದ್ದು, ಅದರ ಸಾಹಿತ್ಯ ಪರಂಪರೆ ವಿಶ್ವದ ಇತರ ಭಾಷೆಗಳ ಸಾಹಿತ್ಯಕ್ಕಿಂತ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸುವಲ್ಲಿ ವಚನ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಈ ಸಾಹಿತ್ಯವನ್ನು ಸಂಗ್ರಹಿಸಿ ಸಂರಕ್ಷಿಸುವ ಮೂಲಕ ಫ.ಗು. ಹಳಕಟ್ಟಿಯವರು ಕನ್ನಡ ನಾಡಿಗೆ ಸಲ್ಲಿಸಿರುವ ಸೇವೆ ಚಿರಸ್ಮರಣೀಯ ಎಂದು ತಿಳಿಸಿದರು.

ವಚನಗಳು ಸಮಾಜದಲ್ಲಿ ಸಮಾನತೆ, ಮಾನವೀಯತೆ, ಶ್ರಮದ ಗೌರವ ಮತ್ತು ಬದುಕಿನ ಮೌಲ್ಯಗಳನ್ನು ಸಾರುವ ಮಹತ್ವದ ಸಂದೇಶಗಳನ್ನು ಒಳಗೊಂಡಿವೆ. ಇಂತಹ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

ಉಪನ್ಯಾಸ ನೀಡಿದ ನಿವೃತ್ತ ಪ್ರಾಂಶುಪಾಲರಾದ ಡಾ.ಸಿ. ನಾಗರತ್ನಮ್ಮ, ವಚನ ಸಾಹಿತ್ಯವು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ಶೈಲಿಯಲ್ಲಿ ರಚನೆಯಾಗಿದ್ದು, ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿದಂತೆ ಅನೇಕ ಶರಣರ ವಚನಗಳು ಸಮಾಜ ಸುಧಾರಣೆಗೆ ದಾರಿದೀಪವಾಗಿವೆ ಎಂದರು.

ಸರ್ವಜ್ಞರ ತ್ರಿಪದಿಗಳೂ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಿರುವ ಅಮೂಲ್ಯ ಕೊಡುಗೆಗಳಾಗಿವೆ. ಡಾ. ಫ.ಗು. ಹಳಕಟ್ಟಿಯವರು ವೃತ್ತಿಯಲ್ಲಿ ವಕೀಲರಾಗಿದ್ದರೂ ಕನ್ನಡ ಸಾಹಿತ್ಯ ಸೇವೆಯನ್ನು ಜೀವನದ ಧ್ಯೇಯವನ್ನಾಗಿಸಿಕೊಂಡಿದ್ದರು. ರಾಜ್ಯದ ವಿವಿಧ ಭಾಗಗಳಿಗೆ ಸಂಚರಿಸಿ ಓಲೆಗರಿ ಹಾಗೂ ತಾಳೆಗರಿಗಳಲ್ಲಿ ಅಡಗಿದ್ದ ವಚನ ಸಾಹಿತ್ಯವನ್ನು ಹುಡುಕಿ ಸಂಗ್ರಹಿಸುವ ಮಹತ್ತರ ಕಾರ್ಯ ಕೈಗೊಂಡರು. ತಮ್ಮ ಸ್ವಂತ ಆಸ್ತಿಯನ್ನು ತ್ಯಾಗ ಮಾಡಿ ಬಿಜಾಪುರದಲ್ಲಿದ್ದ ಮನೆಯನ್ನು ಮಾರಾಟ ಮಾಡಿ ಮುದ್ರಣಾಲಯವನ್ನು ಸ್ಥಾಪಿಸಿ, ವಚನ ಸಾಹಿತ್ಯವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಜನಸಾಮಾನ್ಯರಿಗೆ ತಲುಪಿಸಿದರು ಎಂದು ತಿಳಿಸಿದರು.

ಈ ವೇಳೆ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ರಘು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ.ಕೋಡಿರಂಗಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಮಹೇಶ್ ಬಸವಾಪುರ, ರಾಜ್ಯ ಯುವ ಘಟಕದ ನಿರ್ದೇಶಕ ಜಿ. ರಾಜಣ್ಣ, ಜಿಲ್ಲಾ ನಿರ್ದೇಶಕ ರೇವಣಸಿದ್ದೇಶ್ವರ ಹಾಗೂ ವೀರಶೈವ ಸೇವಾ ಸಮಾಜದ ಕಾರ್ಯದರ್ಶಿಗಳಾದ ಪರಂ ಶಿವಯ್ಯ, ಮಹಿಳಾ ಅಧ್ಯಕ್ಷೆ ಗೀತಾ, ಕನ್ನಡ ಸಾಹಿತ್ಯ ಪರಿಷತ್ತಿನ ಯಲುವಹಳ್ಳಿ ಸೊಣ್ಣೇಗೌಡ, ಕೆ.ಎಂ. ರೆಡ್ಡಪ್ಪ. ಸರ್ಧಾರ್ ಚಾಂದ್ ಪಾಶ, ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತಿತರರು ಇದ್ದರು. ಸಿಕೆಬಿ-3

ಡಾ. ಫ.ಗು. ಹಳಕಟ್ಟಿಯವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಂಪೇಗೌಡ ಜಯಂತಿ ವೇಳೆ ಗದ್ದಲ: ಸಂಸದ ಸುಧಾಕರ್‌ ವಿರುದ್ಧ ತನಿಖೆಗೆ ಆಗ್ರಹ
11ಕ್ಕೆ ರಾಷ್ಟ್ರೀಯ ಬೃಹತ್ ಲೋಕ ಅದಾಲತ್: ನ್ಯಾಯಾಧೀಶ ರಾಮಲಿಂಗೇಗೌಡ