11ಕ್ಕೆ ರಾಷ್ಟ್ರೀಯ ಬೃಹತ್ ಲೋಕ ಅದಾಲತ್: ನ್ಯಾಯಾಧೀಶ ರಾಮಲಿಂಗೇಗೌಡ

KannadaprabhaNewsNetwork |  
Published : Jul 03, 2026, 01:15 AM IST
ಸಿಕೆಬಿ-1 ಸುದ್ದಿಗೋಷ್ಟಿಯಲ್ಲಿ ನ್ಯಾ.ಟಿ.ಪಿ.ರಾಮಲಿಂಗೇಗೌಡ ಮಾತನಾಡಿದರು | Kannada Prabha

ಸಾರಾಂಶ

2026ನೇ ಸಾಲಿನ ಎರಡನೇ ಬೃಹತ್ ಲೋಕ ಅದಾಲತ್ ಕಾರ್ಯಕ್ರಮವನ್ನು ಇದೇ ಜು.11 ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಹಮ್ಮಿಕೊಂಡಿದ್ದು ಜಿಲ್ಲೆಯ ಸಾರ್ವಜನಿಕರು ಅದಾಲತ್ ನಲ್ಲಿ ಭಾಗವಹಿಸಿ ತಮ್ಮ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಿ

ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:

2026ನೇ ಸಾಲಿನ ಎರಡನೇ ಬೃಹತ್ ಲೋಕ ಅದಾಲತ್ ಕಾರ್ಯಕ್ರಮವನ್ನು ಇದೇ ಜು.11 ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಹಮ್ಮಿಕೊಂಡಿದ್ದು ಜಿಲ್ಲೆಯ ಸಾರ್ವಜನಿಕರು ಅದಾಲತ್ ನಲ್ಲಿ ಭಾಗವಹಿಸಿ ತಮ್ಮ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಟಿ.ಪಿ. ರಾಮಲಿಂಗೇಗೌಡ ತಿಳಿಸಿದರು.

ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ನ್ಯಾಯಾಲಯಗಳಲ್ಲಿ 50,306 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಇವುಗಳ ಪೈಕಿ ಈಗಾಗಲೆ ಲೋಕ ಅದಾಲತ್ ಗೆ ಈ ಬಾರಿ ತೆಗೆದುಕೊಳ್ಳಲು 7932 ರಾಜಿ ಪ್ರಕರಣಗಳನ್ನು ಗುರುತಿಸಲಾಗಿದೆ. ಅವುಗಳ ಪೈಕಿ 1908 ಪ್ರಕರಣಗಳು ರಾಜಿಗೆ ಸಿದ್ಧವಾಗಿವೆ. ಜುಲೈ 11ನೇ ತಾರೀಕಿನ ವರೆಗೆ ಇನ್ನೂ ಹೆಚ್ಚಿನ ಪ್ರಕರಣಗಳು ಅದಾಲತ್ ಗೆ ಬರುವ ನಿರೀಕ್ಷೆ ಇದೆ. ಒಟ್ಟಾರೆ ಜು. 11 ರ ಅದಾಲತ್ ನಲ್ಲಿ 12ಸಾವಿರ ಕ್ಕೂ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಇದೆ ಎಂದರು.

ನೇರವಾಗಿ ಸಕ್ಷಮ ಪ್ರಾಧಿಕಾರಗಳನ್ನು ಸಂಪರ್ಕಿಸಿ ಯಾವುದೇ ಸಾರ್ವಜನಿಕರು ಯಾವುದೇ ರೀತಿಯ ಕುಂದುಕೊರತೆ, ಅಹವಾಲು, ಸಮಸ್ಯೆಗಳನ್ನು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳನ್ನು ಹಾಗೂ ಆ ಪ್ರಾಧಿಕಾರಗಳ ಅಧಿಕಾರಿ ಮತ್ತು ಸಿಬ್ಬಂದಿ ಸಂಪರ್ಕಿಸಿ ಪರಿಹರಿಸಿಕೊಳ್ಳುವ ಪ್ರಯತ್ನವನ್ನು ಮೊದಲಿಗೆ ಮಾಡಬೇಕು. ಅಲ್ಲಿ ಪರಿಹಾರ ಅಥವಾ ವಿಲೇವಾರಿ ಆಗದೇ ಇದ್ದ ಪಕ್ಷದಲ್ಲಿ ಜಿಲ್ಲೆಯ ನ್ಯಾಯಾಲಯಗಳಲ್ಲಿನ ಮಧ್ಯಸ್ಥಿಕೆ ಕೇಂದ್ರಗಳು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಲು ಪ್ರಯತ್ನಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ನಿರಂತರವಾಗಿ ರಾಜಿ ಪಂಚಾಯಿತಿ ಮೂಲಕ ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯಗಳಲ್ಲಿ ಬಾಕಿ ಇರುವ ರಾಜಿಯಾಗಬಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸುತ್ತಾ ಬರಲಾಗುತ್ತಿದೆ, ಈ ಬಾರಿಯ ಜು.11ರ ಅದಾಲತ್ ನಲ್ಲಿ ಜಿಲ್ಲಾ ನ್ಯಾಯಾಲಯವೂ ಸೇರಿದಂತೆ ಜಿಲ್ಲೆಯ ತಾಲೂಕು ಹಂತದ ನ್ಯಾಯಾಲಯಗಳಲ್ಲಿ ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗದಲ್ಲಿ ಪುನ‌ರ್ ಸ್ಥಾಪಿಸಲ್ಪಡುವ ಪ್ರಕರಣಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಷೇಮುಗಳು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಪ್ರಕರಣಗಳು, ವಿಚ್ಛೇದನವನ್ನು ಹೊರತುಪಡಿಸಿ ವೈವಾಹಿಕ ಕುಟುಂಬ ನ್ಯಾಯಾಲಯದ ಪ್ರಕರಣಗಳನ್ನು ಕಕ್ಷಿದಾರರು ಹಾಗೂ ವಕೀಲರ ಸಹಕಾರದೊಂದಿಗೆ ಇತ್ಯರ್ಥಪಡಿಸಲಾಗುವುದು. ಜೊತೆಗೆ ಬ್ಯಾಂಕ್‌ ಚೆಕ್‌ ಅಮಾನ್ಯ ಪ್ರಕರಣಗಳು, ಸಾಲ ವಸೂಲಾತಿ ನ್ಯಾಯಾಧಿಕರಣದ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ಕಾರ್ಮಿಕರ ವಿವಾದಗಳು, ಭೂಸ್ವಾಧೀನ ಪ್ರಕರಣಗಳು ಹಾಗೂ ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು ಹಾಗೂ ಸಿವಿಲ್ ಪಿಂಚಣಿ ಪ್ರಕರಣಗಳನ್ನು ರಾಜಿ ಮೂಲಕ ಇಬ್ಬರೂ ಕಕ್ಷಿದಾರರ ಮನವೊಲಿಸಿ ಇತ್ಯರ್ಥ ಪಡಿಸಲಾಗುವುದು. ಜೊತೆಗೆ ರಾಜಿಯಾಗಬಲ್ಲ ಸಿವಿಲ್ ಹಾಗೂ ಖಾಯಂ ಜನತಾ ನ್ಯಾಯಾಲಯದಲ್ಲಿನ ಪ್ರಕರಣಗಳನ್ನೂ ಇತ್ಯರ್ಥ ಪಡಿಸಲಾಗುವುದು. ನ್ಯಾಯಾಲಯಗಳಲ್ಲಿನ ಪ್ರಕರಣಗಳನ್ನು ಉಭಯ ಕಕ್ಷಿದಾರರು ರಾಜಿ ಮಾಡಿಕೊಳ್ಳಲು ಸೂಕ್ತ ಕಾನೂನು ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಲಾಗುವುದು ಎಂದರು. ಲೋಕ ಅದಾಲತ್ ನಲ್ಲಿ ಪ್ರಕರಣಗಳನ್ನು ಸ್ವಯಂ ಪ್ರೇರಿತರಾಗಿ ಇತ್ಯರ್ಥಪಡಿಸಿಕೊಳ್ಳಲು ಎರಡೂ ಕಡೆಯವರಿಗೂ ಒಪ್ಪಿಗೆಯಾಗುವಂತೆ ಪ್ರಕರಣ ತೀರ್ಮಾನವಾಗುವುದರಿಂದ ಇಬ್ಬರ ನಡುವಿನ ಬಾಂಧವ್ಯ ಉಳಿದು ವಿವಾದವು ಸುಖಾಂತ್ಯಗೊಳ್ಳುತ್ತದೆ ಎಂದರು.

ಹಣ ಉಳಿತಾಯ: ಲೋಕ ಅದಾಲತ್ ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವುದರಿಂದ ಪದೇ ಪದೇ ನ್ಯಾಯಾಲಯಕ್ಕೆ ಅಲೆಯುವುದು ತಪ್ಪುತ್ತದೆ. ಕಕ್ಷಿದಾರರ ಸಮಯ ಮತ್ತು ಹಣ ಉಳಿತಾಯವಾಗಿ ಇಬ್ಬರಿಗೂ ನ್ಯಾಯ ದೊರೆತಂತಾಗಿ ನೆಮ್ಮದಿಯೂ ದೊರೆಯುತ್ತದೆ. ಅಲ್ಲದೇ ನ್ಯಾಯಾಲಯದ ಅಮೂಲ್ಯ ಸಮಯವೂ ಉಳಿತಾಯವಾಗಿ ಆ ಸಮಯವನ್ನು ಬಾಕಿ ಇರುವ ಇತರೆ ಪ್ರಕರಣಗಳ ವಿಚಾರಣೆ ಮತ್ತು ಇತ್ಯರ್ಥಕ್ಕೆ ನೀಡಲು ಸಹಕಾರಿಯಾಗುತ್ತದೆ. ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳುವುದರಿಂದ ಕಕ್ಷಿದಾರರ ನಡುವಿನ ವೈಮನ್ಯಸ್ಸು, ಭಿನ್ನಾಭಿಪ್ರಾಯ, ದ್ವೇಷ ಕಡಿಮೆಯಾಗಿ ಇಬ್ಬರ ನಡುವೆ ಸಾಮರಸ್ಯ, ಸೌಹಾರ್ದತೆಯ ವಾತಾವರಣ ನಿರ್ಮಾಣವಾಗಿ ಸಮಾಜದಲ್ಲಿ ಶಾಂತಿ ನೆಮ್ಮದಿಯೂ ನಿರ್ಮಾಣವಾಗುತ್ತದೆ ಎಂದರು. ಜು.11 ರ ಅದಾಲತ್ ನಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಸಾರ್ವಜನಿಕರು ಮುಂಚಿತವಾಗಿ ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕುಗಳ ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.

ಈ ವೇಳೆ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಿಲ್ಪಇದ್ದರು.

ಸಿಕೆಬಿ-1 ಸುದ್ದಿಗೋಷ್ಠಿಯಲ್ಲಿ ನ್ಯಾ.ಟಿ.ಪಿ.ರಾಮಲಿಂಗೇಗೌಡ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಂಪೇಗೌಡ ಜಯಂತಿ ವೇಳೆ ಗದ್ದಲ: ಸಂಸದ ಸುಧಾಕರ್‌ ವಿರುದ್ಧ ತನಿಖೆಗೆ ಆಗ್ರಹ
ಫ.ಗು. ಹಳಕಟ್ಟಿ ಸೇವೆ ಅವಿಸ್ಮರಣೀಯ: ಅಪರ ಡಿಸಿ ಡಾ. ಭಾಸ್ಕರ್