ಮಂಜುನಾಥ ಕೆ.ಎಂ.
ಜೂ.1ರಿಂದ ಸರ್ಕಾರಿ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗೆ ಎಐ ಆಧರಿತ ಫೇಸ್ ಲೊಕೇಶನ್ ಹಾಜರಾತಿ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಕಡ್ಡಾಯಗೊಳಿಸಿದೆ. ಇಲಾಖೆಯ ಆದೇಶದನ್ವಯ ನಿಗದಿತ ಸಮಯ ಮೀರಿ ಶಾಲೆಗೆ ಬರುವ ಶಿಕ್ಷಕ ಸಿಬ್ಬಂದಿಗೆ ಆಕಸ್ಮಿಕ ರಜೆ ಎಂದು ಪರಿಗಣಿಸುತ್ತಿರುವುದರಿಂದ ಶಿಕ್ಷಕರು ತಡ ಮಾಡದೆ ಶಾಲೆಯತ್ತ ತರಾತುರಿಯ ಹೆಜ್ಜೆ ಹಾಕುತ್ತಿರುವುದು ಕಂಡು ಬರುತ್ತಿದೆ.
ನೂತನ ಹಾಜರಾತಿ ವ್ಯವಸ್ಥೆ ಅನುಷ್ಠಾನಗೊಳಿಸಿದ ಬಳಿಕ ಶೇ.95 ಸಿಬ್ಬಂದಿ ಶಾಲೆಗೆ ಸರಿಯಾದ ಸಮಯಕ್ಕೆ ಹಾಜರಾಗುತ್ತಿದ್ದಾರೆ. ಇನ್ನು ಕೆಲವೆಡೆ ತಾಂತ್ರಿಕ ಸಮಸ್ಯೆಗಳಿದ್ದು, ಕ್ರಮೇಣವಾಗಿ ಸರಿಪಡಿಸಲಾಗುತ್ತಿದೆ ಎಂದು ಇಲಾಖೆ ಮೂಲಗಳು ಖಚಿತಪಡಿಸಿವೆ.ಲೊಕೇಶನ್ ಹಾಜರಾತಿ ಕಡ್ಡಾಯ ಯಾಕಾಯ್ತು?:ಸರ್ಕಾರಿ ಶಾಲೆ ಶಿಕ್ಷಕರ ಪೈಕಿ ಶೇ.15ರಷ್ಟು ಜನರು ಸರಿಯಾದ ಸಮಯಕ್ಕೆ ಹಾಜರಾಗುತ್ತಿರಲಿಲ್ಲ. ಈ ಪೈಕಿ ಶೇ.5ರಷ್ಟು ಮಂದಿ ಶಾಲೆಯ ಮುಖ ನೋಡುವುದೇ ಅಪರೂಪ ಎನ್ನುವಂತಾಗಿತ್ತು. ಶಿಕ್ಷಕರ ಸಂಘಟನೆ ಕೆಲಸ ನೆಪದಲ್ಲಿ ಹೊರಗಡೆ ಇರುತ್ತಿದ್ದರು. ಇನ್ನು ಶಾಲೆಗೆ ಹಾಜರಾಗುವ ಶಿಕ್ಷಕರು ಸಹ ತಡವಾಗಿ ಶಾಲೆಗೆ ಬರುವುದನ್ನು ರೂಢಿ ಮಾಡಿಕೊಂಡಿದ್ದರು. ಇನ್ನು ಮುಖ್ಯ ಶಿಕ್ಷಕರನ್ನು ಯಾರೂ ಪ್ರಶ್ನಿಸುವಂತಿರಲಿಲ್ಲ. ಡಿಡಿಪಿಐ ಕಚೇರಿ ಕೆಲಸ, ಬಿಇಒ ಕಚೇರಿ ಕೆಲಸ ಎಂದು ಹೇಳಿಕೊಂಡು ಶಾಲೆಯಿಂದ ಹೊರಗಡೆಯೇ ಹೆಚ್ಚಾಗಿ ಕಾಲ ಕಳೆಯುತ್ತಾರೆ ಎಂಬ ಆರೋಪಗಳಿದ್ದವು. ಲೋಕೇಶನ್ ಹಾಜರಾತಿ ಕಡ್ಡಾಯಗೊಳಿಸಿದ ಬಳಿಕ ಮುಖ್ಯಶಿಕ್ಷಕರು ಸೇರಿದಂತೆ ಶಾಲಾ ಸಿಬ್ಬಂದಿ ನಿಗದಿತ ಸಮಯಕ್ಕೆ ಶಾಲೆಗೆ ಹಾಜರಾಗಿ ವಿದ್ಯಾರ್ಥಿಗಳಿಗೆ ನಿತ್ಯ ದರ್ಶನ ನೀಡುತ್ತಿದ್ದಾರೆ.
ರಾಜ್ಯ ಶಿಕ್ಷಣ ಇಲಾಖೆ ಜಾರಿಗೊಳಿಸಿದ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರಿಗೆ ಫೇಸ್ ಲೊಕೇಶನ್ ಹಾಜರಾತಿ ಆದೇಶದಿಂದ ಪೋಷಕರಿಗೆ ಸಂತಸವಾಗಿದ್ದರೆ ನಿರ್ದಿಷ್ಟ ಸಮಯಕ್ಕೆ ಶಾಲೆಗೆ ಬರದೆ, ರಾಜಕೀಯ ಮಾಡಿಕೊಂಡು ಓಡಾಡುವ, ಮುಖ್ಯ ಶಿಕ್ಷಕರ ಜೊತೆ ಹೊಂದಾಣಿಕೆ ಮಾಡಿಕೊಂಡು ತಡವಾಗಿ ಶಾಲೆಗೆ ತೆರಳುವ ಬೋಧಕರು ಹಾಗೂ ಕ್ಲರ್ಕ್ ಮತ್ತಿತರ ಸಿಬ್ಬಂದಿಗೆ ನುಂಗದ ತುತ್ತಾಗಿ ಪರಿಣಮಿಸಿದೆ. ನಿತ್ಯ ನಿಗದಿತ ಸಮಯದೊಳಗೆ ಶಾಲೆಗೆ ಆಗಮಿಸಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಶಿಕ್ಷಕರಂತೂ ಸರ್ಕಾರದ ಆದೇಶದಿಂದ ಸಂತಸಗೊಂಡಿದ್ದಾರೆ. ಶಾಲೆಗೆ ಕೆಲಸಕ್ಕೆ ಕಚೇರಿಗೆ ಹೋಗುವ ಮುಖ್ಯ ಶಿಕ್ಷಕರು ಒಒಡಿ (ಅನ್ಯತಾ ಕಾರ್ಯ) ಎಂದು ಕಡ್ಡಾಯವಾಗಿ ನಮೂದಿಸುತ್ತಿದ್ದಾರೆ.
ಮಕ್ಕಳ ಫೇಸ್ ಹಾಜರಾತಿ ಪ್ರಕ್ರಿಯೆಗೆ ಚಾಲನೆ:
ಬಳ್ಳಾರಿ ಜಿಲ್ಲೆಯ 720 ಸರ್ಕಾರಿ ಶಾಲೆಗಳಲ್ಲಿ 3271 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.