ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ, ಮೂಢನಂಬಿಕೆ ತೊಲಗಿಸಿ: ಎಂ.ಸಿ.ಬಸವರಾಜು

KannadaprabhaNewsNetwork | Published : Jan 14, 2024 1:34 AM

ಸಾರಾಂಶ

ಮೂಢನಂಬಿಕೆ ತೊಲಗಿಸಿ ಜನತೆಯನ್ನು ಅಜ್ಞಾನದಿಂದ ವಿಜ್ಞಾನದ ಕಡೆಗೆ ಕರೆ ತರುವ ಕರ್ತವ್ಯ ಇಂದಿನ ಯುವ ಪೀಳಿಗೆ ಮೇಲಿದೆ. ಮೌಢ್ಯಕ್ಕೆ ಬಲಿಯಾಗದೆ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿದಾಗ ಮಾತ್ರ ನೆಮ್ಮದಿಯಿಂದ ಬದುಕಲು ಸಾಧ್ಯ.

ಕನ್ನಡಪ್ರಭ ವಾರ್ತೆ ಭಾರತೀನಗರ

ಮೌಢ್ಯಕ್ಕೆ ಬಲಿಯಾಗದೆ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿದಾಗ ಮಾತ್ರ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ರಾಜ್ಯ ವೈಜ್ಞಾನಿಕ ಪರಿಷತ್‌ನ ಗೌರವಾಧ್ಯಕ್ಷ ಎಂ.ಸಿ.ಬಸವರಾಜು ಹೇಳಿದರು.

ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ ರಾಜ್ಯ ವೈಜ್ಞಾನಿಕ ಪರಿಷತ್ ಮಂಡ್ಯ ಜಿಲ್ಲಾ ಘಟಕ, ಇನ್ನರ್‌ವಿಲ್ ಸಂಸ್ಥೆ, ಕೇಂಬ್ರಿಡ್ಜ್ ಪಬ್ಲಿಕ್ ಶಾಲೆ ಸಹಯೋಗದಲ್ಲಿ ನಡೆದ ನಮ್ಮ ನಡಿಗೆ ವಿಜ್ಞಾನದ ಕಡೆಗೆ, ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೂಢನಂಬಿಕೆ ತೊಲಗಿಸಿ ಜನತೆಯನ್ನು ಅಜ್ಞಾನದಿಂದ ವಿಜ್ಞಾನದ ಕಡೆಗೆ ಕರೆ ತರುವ ಕರ್ತವ್ಯ ಇಂದಿನ ಯುವ ಪೀಳಿಗೆ ಮೇಲಿದೆ. ಪರಿಷತ್‌ನಿಂದ ಹಲವು ಕಾರ್ಯಕ್ರಮಗಳನ್ನು ಮೂಢನಂಬಿಕೆಗಳ ವಿರುದ್ಧ ನೀಡಲಾಗುತ್ತಿದೆ ಎಂದರು.

ಕೇಂಬ್ರಿಡ್ಜ್ ಸಂಸ್ಥಾಪಕ ಅಧ್ಯಕ್ಷ ಎ.ಟಿ.ಬಲ್ಲೇಗೌಡ ಮಾತನಾಡಿ, ಜನರು ದೇವರು, ಮಠ-ಮಂದಿರಗಳು, ಮಾಟ-ಮಂತ್ರ ಇತ್ಯಾದಿಗಳಿಗೆ ಮಾರುಹೋಗಿದ್ದು, ವಿಜ್ಞಾನದ ಅರಿವು ಇಲ್ಲದವರಾಗಿ ಮೌಢ್ಯವನ್ನು ಆರಾಧಿಸುತ್ತಾ ದಾರಿತಪ್ಪಿದ್ದಾರೆ. ಅವರನ್ನು ಸರಿದಾರಿಗೆ ತಂದು ವಿಜ್ಞಾನದಿಂದ ಜಗತ್ತು ಎಂಬುದನ್ನು ಸಾರಿ ಹೇಳಬೇಕಾದ ಜವಾಬ್ದಾರಿ ಯುವ ಜನತೆ ಮೇಲಿದೆ ಎಂದರು.

ಮಂಡ್ಯ ವಿಷಯ ವಿಜ್ಞಾನ ಪರಿವೀಕ್ಷಕ ನಂಜರಾಜು ಮಾತನಾಡಿ, ಮೌಢ್ಯತೆ ಮತ್ತು ಜನರ ಮುಗ್ದತೆಯನ್ನು ಬಂಡವಾಳವಾಗಿಸಿಕೊಂಡ ಕೆಲವು ವ್ಯಕ್ತಿಗಳು ಪವಾಡಗಳ ಮೂಲಕ ಸಾರ್ವಜನಿಕರನ್ನು ನಿರಂತರವಾಗಿ ವಂಚಿಸುವುದರ ಬಗ್ಗೆ ಪವಾಡ ಬಯಲು ಕಾರ್ಯಕ್ರಮ ನೀಡಿ ಸಾರ್ವಜನಿಕರಿಗೆ ಎಚ್ಚರದ ಸಂದೇಶ ಸಾರಿದರು.

ಕಾರ್ಯಕ್ರಮದಲ್ಲಿ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಚಿಕ್ಕರಸಿನಕೆರೆ ಸಿ.ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪುಷ್ಪಲತಾ, ಖಜಾಂಚಿ ಜಯರಾಜು, ಶಾಲೆ ಮುಖ್ಯಸ್ಥೆ ನಾಗರತ್ನ ಬಲ್ಲೇಗೌಡ, ಇನ್ನರ್ ಸಂಸ್ಥೆ ಅಧ್ಯಕ್ಷ ಸುಮಅನಂತ್, ಕಾರ್ಯದರ್ಶಿ ವಸಂತ, ತಾಲೂಕು ಅಧ್ಯಕ್ಷ ಡಿ.ಸಿ.ಮಹೇಂದ್ರ, ಸದಸ್ಯೆ ನಾಗರತ್ನ ಸೇರಿದಂತೆ ಹಲರಿದ್ದರು.

ಪರೀಕ್ಷೆ ಆತಂಕ ದೂರ ಮಾಡಲು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ: ಪುಟ್ಟರಾಜು

ಮಳವಳ್ಳಿ: ಪರೀಕ್ಷೆ ವೇಳೆ ಎದುರಾಗುವ ಆತಂಕ ದೂರಮಾಡುವ ನಿಟ್ಟಿನಲ್ಲಿ ಪೋಷಕರು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಬೇಕು ಎಂದು ಭೀಮನಹಳ್ಳಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಪುಟ್ಟರಾಜು ಕರೆ ನೀಡಿದರು.

ತಾಲೂಕಿನ ದುಗ್ಗನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಮಾತನಾಡಿದ ಅವರು, ಪರೀಕ್ಷೆ ವೇಳೆ ಸಾಕಷ್ಟು ಆತಂಕ ಎದುರಾಗುತ್ತದೆ. ತರಗತಿಗಳನ್ನು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಶಿಕ್ಷಕರು ಮಾಡುತ್ತಾರೆ. ಅವರ ಜೊತೆಗೆ ಮನೆಯಲ್ಲೂ ಸಹ ಪೋಷಕರು ಬೆಂಬಲವಾಗಿ ನಿಲ್ಲಬೇಕು ಎಂದರು.ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸುವಲ್ಲಿ ಶಿಕ್ಷಕರಷ್ಟೇ ಜವಾಬ್ದಾರಿ ಪೋಷಕರಿಗೂ ಇರುತ್ತದೆ. ಜೀವನದಲ್ಲಿ ಸಂಸ್ಕೃತಿ ವಿಧಾನವನ್ನು ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದರು.ಬಿಇಒ ಎಸ್.ಚಂದ್ರಪಾಟೀಲ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಗ್ರಾಮೀಣ ಭಾಗದ ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ರೈತಾಪಿ ವರ್ಗಗಳ ಮಕ್ಕಳೇ ಓದುತ್ತಾರೆ. ಜನರು ತಮ್ಮ ಮಕ್ಕಳ ಶಿಕ್ಷಣದತ್ತ ಹೆಚ್ಚಿನ ಗಮನ ನೀಡಬೇಕಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಜೊತೆಗೆ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.ಸಮಾರಂಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ವೆಂಟಕೇಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ಮರಿಸ್ವಾಮಿ, ಶಿಕ್ಷಕರಾದ ಭಾಸ್ಕರ್, ಸಂತೋಷ್ ಕುಮಾರ್, ಎಂ.ಎಲ್.ಪಾರ್ಥನಾಥ್, ಗ್ರಾಮದ ಹಿರಿಯ ಮುಖಂಡರಾದ ಶಾಂತಪ್ಪ, ಮರಿಸ್ವಾಮಿ, ನಾಗರಾಜು ಭಾಗವಹಿಸಿದ್ದರು.

Share this article