ಶಿರಸಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂಘಟಿತ ಪ್ರಯತ್ನದಿಂದ ಅಭೂತಪೂರ್ವ ಜಯ ಸಾಧಿಸಿದ್ದೇವೆ. ಅದೇ ರೀತಿಯಲ್ಲಿ ಮುಂಬರುವ ಲೋಕಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಸಂಘಟಿತ ಪ್ರಯತ್ನದ ಮೂಲಕ ಕಾಂಗ್ರೆಸ್ ಗೆಲುವಿಗೆ ಕಾರಣರಾಗಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಐವಾನ್ ಡಿಸೋಜಾ ಹೇಳಿದರು. ನಗರದ ಹೊರವಲಯದ ಹುಸುರಿ ಮಾರ್ಗದ ಪಾಂಡುರಂಗ ಸಭಾಭವನದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ಭಾನುವಾರ ಪಾಲ್ಗೊಂಡು ಅವರು ಮಾತನಾಡಿದರು. ಜಿಲ್ಲೆಯಲ್ಲಿ ಪಕ್ಷದ ಶಾಸಕರ ಸಂಖ್ಯೆ ತೀರಾ ಕಡಿಮೆ ಇರುವಾಗಲೂ ವಿಧಾನಸಭೆ ಚುನಾವಣೆಯಲ್ಲಿ ಸಾಧನೆ ಮಾಡಿದ್ದೇವೆ. ಈಗ ನಾಲ್ಕು ಶಾಸಕರು ನಮ್ಮ ಜತೆಯಲ್ಲಿದ್ದಾರೆ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಗೆಲುವಿಗೆ ಶ್ರಮಿಸಬೇಕು ಎಂದರು. ಪಕ್ಷದ ಜಿಲ್ಲಾ ಕಮಿಟಿಯ ಹೊಸ ತಂಡವೇ ರಚನೆಯಾಗಿದೆ. ಇವರನ್ನು ಜಿಲ್ಲೆಯ ಎಲ್ಲೆಡೆ ನಿಯೋಜನೆ ಮಾಡಿ ಪಕ್ಷದ ಸಂಘಟನೆ ಸದೃಢಗೊಳಿಸಬೇಕು. ಯಾವುದೇ ಘಟಕಗಳಲ್ಲಿ ಯಾರೇ ಕ್ರಿಯಾಶೀಲವಾಗಿರದೇ ಇದ್ದರೂ ಅವರನ್ನು ಮನವೊಲಿಸಿ ಪಕ್ಷದ ಕೆಲಸಕ್ಕೆ ಅಣಿಗೊಳಿಸಬೇಕು ಎಂದು ಕರೆ ನೀಡಿದರು. ಮನೆ-ಮನೆಗೆ ತೆರಳಿ ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿ ಸೌಲಭ್ಯ ತಲುಪಿದೆಯೇ ಎಂಬುದನ್ನು ತಿಳಿದುಕೊಳ್ಳುವ ಕೆಲಸ ಮಾಡಬೇಕು. ಈ ಮೂಲಕ ಗ್ಯಾರಂಟಿಯಿಂದ ಅವರಿಗೇನು ಅನುಕೂಲವಾಗಿದೆ ಎಂಬ ಅಭಿಪ್ರಾಯ ಸಂಗ್ರಹಿಸಬೇಕು. ಈ ಮೂಲಕ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸುವ ಕೆಲಸ ಮಾಡುವಂತೆ ತಿಳಿಸಿದರು. ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಪಕ್ಷದ ಜಿಲ್ಲಾ ಅಧ್ಯಕ್ಷನಾಗಿ ಸುದೀರ್ಘ ಅವಧಿಗೆ ಕಾರ್ಯ ಮಾಡಿದ್ದೇನೆ. ಇದು ನಾನು ಶಾಸಕನಾಗಲು ಮೆಟ್ಟಿಲಾಗಿದೆ. ಜತೆಯಲ್ಲಿ ಜನರ ಸಮಸ್ಯೆ ಅರಿತುಕೊಳ್ಳುವುದಕ್ಕೂ ಪೂರಕವಾಗಿದೆ. ನಾನು ಎಷ್ಟೇ ಬಾರಿ ಸೋತರೂ ಪಕ್ಷ ವಿಶ್ವಾಸ ಇಟ್ಟು ಟಿಕೆಟ್ ನೀಡಿದ್ದಕ್ಕೆ ನಾನು ಶಾಸಕ ಆಗಿದ್ದೇನೆ. ಸೋತರೂ ಕೈಬಿಡದೇ ಪಕ್ಷ ನನ್ನ ಜತೆಗಿದ್ದು ಪ್ರಾಮುಖ್ಯತೆ ನೀಡಿದೆ ಎಂದ ಅವರು, ನನ್ನ ಕ್ಷೇತ್ರದ ಅಭಿವೃದ್ಧಿಯ ಜತೆಯಲ್ಲಿ ಜಿಲ್ಲೆಯ ಪಕ್ಷದ ೧೪ ಬ್ಲಾಕ್‌ಗಳ ಕಾರ್ಯಕರ್ತರ ಏನೇ ಸಮಸ್ಯೆ ಇದ್ದರೂ ಅವರ ಜತೆ ನಿಲ್ಲುತ್ತೇನೆ ಎಂದು ಭರವಸೆಯಿತ್ತರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ಸಾಯಿ ಗಾವಂಕರ ಮಾತನಾಡಿ, ಪಕ್ಷದಲ್ಲಿ ಶಿಸ್ತು ಕಾಪಾಡಬೇಕು. ಪಕ್ಷದಲ್ಲಿ ನಮ್ಮ ಜವಾಬ್ದಾರಿ ಅರಿತು ಎಲ್ಲರೂಢಗೂಡಿ ಸಂಘಟನೆ ಮಾಡಬೇಕು. ಇನ್ನು ಬ್ಲಾಕ್ ಕಾಂಗ್ರೆಸ್ ಸೇರಿದಂತೆ ವಿವಿಧ ಸೆಲ್‌ಗಳ ಪದಾಧಿಕಾರಿಗಳು ಕ್ರಿಯಾಶೀಲರಾಗಿರಬೇಕು. ಇಲ್ಲದಿದ್ದರೆ ಬದಲಾವಣೆ ಮಾಡುತ್ತೇವೆ. ಪಕ್ಷದಲ್ಲಿ ಶಿಸ್ತು ಕಾಪಾಡುವುದು ಮುಖ್ಯವಾಗಿದ್ದು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಪಕ್ಷದ ನಾಯಕರು, ಪದಾಧಿಕಾರಿಗಳನ್ನು ಅವಹೇಳನ ಮಾಡಿದರೆ ಶಿಸ್ತುಕ್ರಮ ತೆಗೆದುಕೊಳ್ಳುತ್ತೇವೆ. ಏನೇ ತೊಂದರೆ ಇದ್ದರೂ ಲಿಖಿತವಾಗಿ ಬ್ಲಾಕ್ ಇಲ್ಲವೇ ಜಿಲ್ಲಾ ಘಟಕಕ್ಕೆ ತಿಳಿಸಿ ಎಂದು ಜಿಲ್ಲಾಧ್ಯಕ್ಷ ಸಾಯಿನಾಥ ಗಾಂವಕರ್ ತಿಳಿಸಿದರು. ಇದೇ ವೇಳೆ ಪಕ್ಷದ ಜಿಲ್ಲಾ ಪದಾಧಿಕಾರಿಗಳಿಗೆ ಆದೇಶಪತ್ರ ನೀಡಲಾಯಿತು. ಮಾಜಿ ಶಾಸಕ ವಿ.ಎಸ್. ಪಾಟೀಲ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಗಾಂವಕರ್, ಮುಖಂಡರಾದ ರಾಮಾ ಮೊಗೇರ, ಯಶೋಧರ ನಾಯ್ಕ, ಆರ್.ಎಚ್. ನಾಯ್ಕ, ಶಂಭು ಶೆಟ್ಟಿ, ವನಿತಾ ನಾಯ್ಕ, ಬಸವರಾಜ ದೊಡ್ಮನಿ, ಬಿ.ಡಿ. ಚೌಗಲೆ, ದೀಪಕ ದೊಡ್ಡೂರು ಮತ್ತು ಮುಖಂಡರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕ ಅಧ್ಯಕ್ಷ ಸತೀಶ ನಾಯ್ಕ ನಿರೂಪಿಸಿದರು. ಪಕ್ಷಕ್ಕಾಗಿ ದುಡಿದವರನ್ನು ಮುಂಬರುವ ದಿನಗಳಲ್ಲಿ ಗುರುತಿಸುವ ಕೆಲಸವನ್ನು ಪಕ್ಷ ಮಾಡಲಿದೆ. ನಿಗಮ ಮಂಡಳಿ, ವಿವಿಧ ಹಂತದಲ್ಲಿ ನಾಮನಿರ್ದೇಶನ ಮಾಡುವ ಕೆಲಸ ಎರಡ್ಮೂರು ತಿಂಗಳಲ್ಲಿ ಆಗಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವಾನ ಡಿಸೋಜಾ ಭರವಸೆ ನೀಡಿದರು