ದಾಬಸ್‌ಪೇಟೆ: ಮಾವನನ್ನೇ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ದಾಬಸ್‌ಪೇಟೆ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆಯ ಗಂಗಸಂದ್ರ ಗ್ರಾಮದ ಕುಮಾರ್ (42) ಬಂಧಿತ. ಅ.8ರಂದು ಸೋಂಪುರ ಹೋಬಳಿಯ ಶಿವಗಂಗೆ ಸಮೀಪದ ಮೈಥೀಲೇಶ್ವರ ದೇವಾಲಯದ ಆವರಣದಲ್ಲಿ ತುಮಕೂರು ಜಿಲ್ಲೆಯ ಕ್ಯಾತ್ಸಂದ್ರದ ಸಂಜೀವಿನಿ ನಗರ ನಿವಾಸಿ ರಂಗಶಾಮಯ್ಯ (64) ಅವರನ್ನು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಳಿಯನೇ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದನು. ದಾಬಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆಗಾರ ಕುಮಾರ್, ಶಿವಗಂಗೆಯಿಂದ ತುಮಕೂರಿನ ಜಯನಗರದಲ್ಲಿ ಮೊಬೈಲ್ ಎಸೆದು, ಶೆಟ್ಟಿಹಳ್ಳಿ ದೇವಾಲಯವೊಂದರ ಸಮೀಪ ಕಾರನ್ನು ಬಿಟ್ಟು, ಸ್ವಲ್ಪ ದೂರದಲ್ಲಿಯೇ ಮಚ್ಚನ್ನು ಎಸೆದು ತುಮಕೂರಿನಿಂದ ಮತ್ತೆ ಬೆಂಗಳೂರಿಗೆ ಬಂದಿದ್ದಾನೆ. ನಂತರ ಬೆಂಗಳೂರಿಂದ ಧರ್ಮಸ್ಥಳಕ್ಕೆ ತೆರಳಿದ್ದಾನೆ. ದೇವರ ದರ್ಶನ ಪಡೆದು ಎರಡು ದಿನಗಳ ನಂತರ ತನ್ನ ತಾಯಿಯನ್ನು ನೋಡಲು ಗಂಗಸಂದ್ರಕ್ಕೆ ಬಂದಿದ್ದನು. ಗಂಗಸಂದ್ರದ ತೋಟದ ಮನೆಯೊಂದರಲ್ಲಿ ಅಡಗಿದ್ದು, ಬೆಳಗಿನ ಜಾವ ತನ್ನ ತಾಯಿ ಮನೆಗೆ ಬರುತ್ತಾನೆಂಬ ವಿಷಯ ಅರಿತ ಪೊಲೀಸ್ ಸಿಬ್ಬಂದಿ ಆತ ಮನೆಗೆ ಬರುತ್ತಿದ್ದಂತೆ ಹಿಡಿದು ಪರಪ್ಪನ ಅಗ್ರಹಾರದ ಜೈಲಿಗಟ್ಟಿದ್ದಾರೆ. ಪೊಲೀಸ್ ಇನ್ಸ್ ಪೆಕ್ಟರ್ ರವಿ ಹಾಗೂ ಅವರ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ, ಅಪರ ಜಿಲ್ಲಾ ವರಿಷ್ಟಾಧಿಕಾರಿ ಪುರುಷೋತ್ತಮ್, ಡಿವೈಎಸ್‌ಪಿ ಜಗದೀಶ್ ಅಭಿನಂದಿಸಿದ್ದಾರೆ.