25,000 ಫಲಾನುಭವಿಗಳಿಗೆ ಸೌಲಭ್ಯ ವಿತರಣೆ: ಕೃಷ್ಣ ಬೈರೇಗೌಡ

KannadaprabhaNewsNetwork |  
Published : Feb 28, 2026, 01:15 AM IST
ಸಿಕೆಬಿ-4  ನಗರ ಹೊರ ವಲಯದ ಚೊಕ್ಕಹಳ್ಳಿ ಬಳಿ ನಡೆದ “ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶ ಹಾಗೂ ವಿಶೇಷ ಕಂದಾಯ ಗ್ರಾಮ ಅಭಿಯಾನ 2.O ಚಾಲನಾ ಕಾರ್ಯಕ್ರಮದಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು  ಫಲಾನುಭವಿಗಳಿಗೆ ಕಂದಾಯ ಇಲಾಖೆಯ ವಿವಿಧ ಸೌಲಭ್ಯಗಳನ್ನು ವಿತರಿಸಿದರು | Kannada Prabha

ಸಾರಾಂಶ

ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶ ಹಾಗೂ ವಿಶೇಷ ಕಂದಾಯ ಗ್ರಾಮ ಅಭಿಯಾನ 2.O ಕಾರ್ಯಕ್ರಮಕ್ಕೆ ಚಾಲನೆ ನೀಡಿವುದರ ಜೊತೆಗೆ 25 ಸಾವಿರ ಫಲಾನುಭವಿಗಳಿಗೆ ಕಂದಾಯ ಇಲಾಖೆಯ ವಿವಿಧ ಸೌಲಭ್ಯಗಳ ಚಿತರಣೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕಂದಾಯ ಇಲಾಖೆಯಲ್ಲಿ ಹಲವು ದಶಕಗಳಿಂದ ಇತ್ಯರ್ಥವಾಗದೇ ಬಾಕಿ ಉಳಿದಿದ್ದ ದರಕಾಸ್ತು ಪೋಡಿ, ಪೌತಿ ಖಾತೆ, ಕಂದಾಯ ಗ್ರಾಮ ರಚನೆ ಮತ್ತಿತರ ಸಮಸ್ಯೆಗಳನ್ನು ಪರಿಹರಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡು ರೈತರು, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ನಗರ ಹೊರ ವಲಯದ ಚೊಕ್ಕಹಳ್ಳಿ ಬಳಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ “ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶ ಹಾಗೂ ವಿಶೇಷ ಕಂದಾಯ ಗ್ರಾಮ ಅಭಿಯಾನ 2.O ಕಾರ್ಯಕ್ರಮಕ್ಕೆ ಚಾಲನೆ ನೀಡಿವುದರ ಜೊತೆಗೆ 25 ಸಾವಿರ ಫಲಾನುಭವಿಗಳಿಗೆ ಕಂದಾಯ ಇಲಾಖೆಯ ವಿವಿಧ ಸೌಲಭ್ಯಗಳನ್ನು ವಿತರಿಸಿ ಮಾತನಾಡಿದರು. ಪ್ರಸ್ತುತದ ಸರ್ಕಾರ ಅಧಿಕಾರಕ್ಕೆ ಬಂದ 1,000 ಸಾವಿರ ದಿನಗಳಲ್ಲಿ ಕಂದಾಯ ಇಲಾಖೆಯಲ್ಲಿ ಕೈಗೊಂಡ ಕ್ರಮಗಳ ಫಲವಾಗಿ ಹತ್ತು ಹಲವು ಕ್ರಾಂತಿಕಾರಕ ಸುಧಾರಣೆಗಳಾಗಿದ್ದು, ಅದರ ಪ್ರತಿಫಲವೇ ಇಂದು ರಾಜ್ಯದಲ್ಲಿ ಸಾವಿರಾರು ರೈತರು ದರಕಾಸ್ತು ಪೋಡಿ ವಿಶೇಷ ಅಭಿಯಾನದಡಿ ತಮ್ಮ ಸಾಗುವಳಿ ಜಮೀನಿಗೆ ನೈಜ ವಾರಸುದಾರರಾಗಿ ಅಧಿಕೃತ ಹಕ್ಕು ದಾಖಲೆ ಪತ್ರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಕಂದಾಯ ಇಲಾಖೆಯಲ್ಲಿನ ಹತ್ತು ಹಲವು ಸಮಸ್ಯೆಗಳಿಗೆ ಮುಕ್ತಿ ಕಾಣಿಸುವ ಮೂಲಕ ಜನರಿಗೆ ನೆಮ್ಮದಿ ನೀಡಲಾಗುತ್ತಿದೆ ಎಂದರು.

ಸಾಗುವಳಿ ಜಮೀನುಗಳಿಗೆ ನಕಲಿ ಮಾಡಲು ಆಗದೇ ಇರುವ ವ್ಯವಸ್ಥೆಯಡಿ ಶಾಶ್ವತ ಹಕ್ಕು ಪತ್ರ ನೀಡಲಾಗಿದೆ. ಖುದ್ದು ತಹಸೀಲ್ದಾರರೇ ಫಲಾನುಭವಿಗಳನ್ನು ಸಬ್ ರಿಜಿಸ್ಟ್ರಾರ್ ಕಚೇರಿಗೆ ಕರೆದುಕೊಂಡು ಹೋಗಿ ಸರ್ಕಾರಿ ಜಮೀನಿನ ಕ್ರಯಪತ್ರ ಮಾಡಿಕೊಟ್ಟು ಬಡ ಸಾಗುವಳಿದಾರರನ್ನು ಜಮೀನಿನ‌ ಮಾಲೀಕರನ್ನಾಗಿ ಮಾಡುವ ಪಾರದರ್ಶಕ ವ್ಯವಸ್ಥೆ ಮಾಡಲಾಗಿದೆ. ತಮ್ಮ ಜಮೀನಿನ ಹಕ್ಕು ದಾಖಲೆಗಾಗಿ ಪದೇ ಪದೇ ತಾಲ್ಲೂಕು ಕಚೇರಿಗೆ ಅಲೆದು ಸೊರಗಿ ಸುಸ್ತಾಗಿದ್ದ ರೈತರ ಸಮಸ್ಯೆಗೆ ಅದೇ ತಾಲೂಕು ಕಚೇರಿಯ ಮೂಲಕವೇ ಮುಕ್ತಿ ಕಾಣಿಸಿ ಅವರ ಮುಖದಲ್ಲಿ ಭೂ ಮಾಲೀಕತ್ವದ ಸಂತಸದ ಮಂದಹಾಸ ಮೂಡಿಸುವ ಕೆಲಸವನ್ನು ಕಂದಾಯ ಇಲಾಖೆ ಇಂದು ಮಾಡುತ್ತಿದೆ ಎಂದರು.

ಕಂದಾಯ ಗ್ರಾಮಗಳ ಮೂಲಕ ಹಕ್ಕು ಪತ್ರ ಪಡೆದುಕೊಂಡವರು ಎಂದಿಗೂ ಯಾವ ಕಚೇರಿಗೂ ಮತ್ತೆ ಅಲೆಯಬಾರದು ಎಂಬ ದೃಷ್ಟಿಯಿಂದ ಅವರಿಗೆ ಸರ್ಕಾರವೇ ಮನೆಯ ಇ ಸ್ವತ್ತು ನೀಡಲಿದ್ದು, ಅವರೆಂದೂ ತಮ್ಮ ಮಾಲೀಕತ್ವದ ವಿಚಾರದಲ್ಲಿ ಯಾವ ಇಲಾಖೆಯ ಕಡೆಗೂ ತಿರುಗಿ ನೋಡದೆ ನೆಮ್ಮದಿ ಕಾಣುವಂತ ಭೂ ಗ್ಯಾರಂಟಿ ಯೋಜನೆಯನ್ನು ನೀಡಲಾಗುತ್ತಿದೆ. ಸರ್ಕಾರ ಕಳೆದ 1000 ದಿನಗಳಲ್ಲಿ 18,50,000 ಪೌತಿ ಖಾತೆಗಳನ್ನು ಮಾಡಿ ರೈತರ ಮನೆ ಬಾಗಿಲಿಗೆ ತಲುಪಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

71 ಕೋಟಿ ಪುಟದ ದಾಖಲೆ ಡಿಜಿಟಲೀಕರಣ:ಭೂ ಸುರಕ್ಷಾ ಯೋಜನೆಯಡಿ ಈ ವರೆಗೆ ರಾಜ್ಯ ರಾಜ್ಯದಲ್ಲಿ 71 ಕೋಟಿ ಪುಟದಷ್ಟು ಕಂದಾಯ ದಾಖಲೆಗಳನ್ನು ಸ್ಕ್ಯಾನ್ ಮಾಡುವ ಜೊತೆಗೆ ಡಿಜಿಟಲೀಕರಣಗೊಳಿಸಿ ಜನರು ಕಚೇರಿಗೆ ಅಲೆಯದೆ ಬೆರಳ ತುದಿಯಲ್ಲೇ ಆನ್ ಲೈನ್ ಮೂಲಕ ಕಂದಾಯ ದಾಖಲೆಗಳನ್ನು ಪಡೆದುಕೊಳ್ಳುವ ಮಹತ್ತರ ಸುಧಾರಣೆಯನ್ನು ತರಲಾಗಿದೆ. ಇದೊಂದು ಮೌನ ಕ್ರಾಂತಿಯಾಗಿ ಪರಿವರ್ತನೆಯಾಗಿ ಜನರು ದಾಖಲೆಗಳನ್ನು ಪಡೆಯುತ್ತಿರುವುದು ಸಾರ್ಥಕ ಭಾವನೆ ಮೂಡಿಸಿದೆ ಎಂದು ತಿಳಿಸಿದರು. ಹಲವು ದಾಖಲೆಗಳು ಒಂದೇ ಕಡೆ ಲಭ್ಯಪಹಣಿ, ಸ್ಕೆಚ್ ಕಾಪಿ, ಇಸಿ, ಎಂಆರ್ ಹಾಗೂ ಆಕಾರ್ ಬಂದ್ ದಾಖಲೆಗಳನ್ನು ಪ್ರಸ್ತುತ ಬೇರೆ ಬೇರೆ ಕಚೇರಿಗಳನ್ನು ಸಂಪರ್ಕಿಸಿ ಪಡೆಯಬೇಕಾಗಿದೆ. ಈ ವ್ಯವಸ್ಥೆಗೆ ಇತೀಶ್ರೀ ಹಾಡಿ ಈ ಎಲ್ಲಾ ದಾಖಲೆಗಳನ್ನು ಆನ್ ಲೈನ್ ಮೂಲಕ ಒಂದೇ ಕಡೆ ಅಥವಾ ಒಂದೇ ಕಚೇರಿಯಲ್ಲಿ ಲಭ್ಯವಾಗುವ ರೀತಿಯಲ್ಲಿ ಹಲವು ಸುಧಾರಣೆಗಳನ್ನು ಇಲಾಖೆ ಈಗಾಗಲೇ ಕೈಗೊಳ್ಳುತ್ತಿದೆ. ಬರುವ ಆಯವ್ಯಯದ ನಂತರ ಜನರು ದೃಢೀಕೃತ ಪಹಣಿ, ಸ್ಕೆಚ್ ಕಾಪಿ, ಇಸಿ, ಎಂಆರ್ ಹಾಗೂ ಆಕಾರ್ ಬಂದ್ ದಾಖಲೆಗಳನ್ನು ಆನ್ ಲೈನ್ ಮೂಲಕವೇ ಪಡೆಯುವ ಏಕ ವ್ಯವಸ್ಥೆ ತ್ವರಿತವಾಗಿ ಬರಲಿದೆ ಎಂದು ಭರವಸೆ ನೀಡಿದರು.ಸಿಕೆಬಿ-4 ನಗರ ಹೊರ ವಲಯದ ಚೊಕ್ಕಹಳ್ಳಿ ಬಳಿ ನಡೆದ “ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶ ಹಾಗೂ ವಿಶೇಷ ಕಂದಾಯ ಗ್ರಾಮ ಅಭಿಯಾನ 2.O ಚಾಲನಾ ಕಾರ್ಯಕ್ರಮದಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಫಲಾನುಭವಿಗಳಿಗೆ ಕಂದಾಯ ಇಲಾಖೆಯ ವಿವಿಧ ಸೌಲಭ್ಯಗಳನ್ನು ವಿತರಿಸಿದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜಕೀಯ ಸ್ಥಾನಮಾನ ಶಾಶ್ವತವಲ್ಲ: ಬಿ.ಜಿ.ಗೋವಿಂದಪ್ಪ
ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆಗೆ ಶಿಬಿರ ಸಹಕಾರಿ : ತಸ್ನೀಮ್