ಕೊಪ್ಪಳ: ಬಲ್ಡೋಟಾ ಸೇರಿದಂತೆ ವಿವಿಧ ಕಾರ್ಖಾನೆಗಳ ಸ್ಥಾಪನೆ ಮತ್ತು ವಿಸ್ತರಣೆ ವಿರೋಧಿಸಿ ನಗರದ ನಗರಸಭೆ ಬಳಿ ನಡೆಯುತ್ತಿರುವ ಅನಿರ್ದಿಷ್ಠಾವಧಿ ಧರಣಿ ಮುಂದುವರೆದಿದ್ದು, ಶುಕ್ರವಾರ 148ನೇ ದಿನದ ಹೋರಾಟದಲ್ಲಿ ನೂತನ ಕೊಪ್ಪಳ ಕಾರ್ಖಾನೆ ಬಾಧಿತ ರೈತ ಸಂಘದ ಲಾಂಛನ ಅನಾವರಣಗೊಳಿಸಲಾಯಿತು.
ಬಾಧಿತ ಹಳ್ಳಿಗಳಲ್ಲಿ ಕಾರ್ಖಾನೆಗಳು ಗೂಂಡಾಗಿರಿ ಮಾಡುತ್ತಾ ಬೆದರಿಕೆ ಒಡ್ಡುವುದು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಪರಿಸರ ಹಾಳು ಮಾಡಿ ನಮ್ಮ ಜನಗಳ ಮೇಲೆ ಹಲ್ಲೆ ನಡೆಸಿದರೆ ತಕ್ಕ ಉತ್ತರ ಚಳವಳಿಯಿಂದ ಕೊಡೋಣ. ಧೈರ್ಯದಿಂದ ದಿಟ್ಟ ನಿಲುವು ತಳೆದು ಪರಿಸ್ಥಿತಿ ಎದುರಿಸೋಣ ಎಂದರು.
ಬಾಧಿತ ಗ್ರಾಮಗಳಾದ ಹಿರೇಬಗನಾಳ, ಹಾಲವರ್ತಿ, ಕುಣಿಕೇರಿ, ಕಾಸನಕಂಡಿ, ಕುಣಿಕೇರಿ ತಾಂಡಾ, ಲಾಚನಕೇರಿ, ಗಿಣಿಗೇರಿ, ಬಸಾಪುರ ಗ್ರಾಮದ ರೈತರು ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರೈತರು ತಮ್ಮ ಸಮಸ್ಯೆ ಕುರಿತು ಚರ್ಚಿಸಿದರು.ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ ಸಂಘದ ವ್ಯಾಪ್ತಿ,ಕಾರ್ಯಸೂಚಿ,ಅದರ ದೃಷ್ಟಿಕೋನದ ಕುರಿತು ವಿವರಣೆ ನೀಡಿ ಮಾತನಾಡಿದರು.
ಮಹಿಳಾ ನಾಯಕಿಯರಾದ ಜ್ಯೋತಿ ಎಂ.ಗೊಂಡಬಾಳ, ಕಾವ್ಯ ಪ್ರಸನ್ನ ಗಡಾದ, ಸೌಮ್ಯ ನಾಲ್ವಾಡ, ಬಾಲಕಿ ಅಕ್ಷರ ಎಂ. ಗೊಂಡಬಾಳ ಮಾತನಾಡಿದರು. ಮಾಲಾ ಬಡಿಗೇರ ಸೇರಿದಂತೆ ಗ್ರಾಮದ ರೈತರು ಇದ್ದರು.