ಕೊಪ್ಪಳ: ಜಿಲ್ಲೆಯ 2026ರ ಮುಂಗಾರು ಹಂಗಾಮಿನಲ್ಲಿ ಅವಶ್ಯವಿರುವ ರಸಗೊಬ್ಬರಕ್ಕೆ ಯಾವುದೇ ರೀತಿಯ ಕೊರತೆ ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ಸುರೇಶ್ ಬಿ. ಇಟ್ನಾಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
2025ರ ಮುಂಗಾರು ಹಂಗಾಮಿನಲ್ಲಿ ಹಲವು ಸವಾಲುಗಳ ನಡುವೆಯೂ ಜಿಲ್ಲೆಯಲ್ಲಿ ರಸಗೊಬ್ಬರ ವಿತರಣೆ ಸಮರ್ಪಕವಾಗಿ ನಿರ್ವಹಿಸಿರುವುದು ಶ್ಲಾಘನೀಯವಾಗಿದೆ. ಆದರೆ, ಪ್ರಸಕ್ತ ಇರಾನ್ ಸೇರಿದಂತೆ ವಿವಿಧ ದೇಶಗಳ ನಡುವಿನ ಯುದ್ಧ ಪರಿಸ್ಥಿತಿಯಿಂದ ರಸಗೊಬ್ಬರ ಉತ್ಪಾದನೆಗೆ ಅಗತ್ಯವಾದ ಕಚ್ಚಾ ವಸ್ತುಗಳ ಆಮದು ಹಾಗೂ ರಸಗೊಬ್ಬರಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದ್ದು, ಇದರಿಂದ 2026ರ ಮುಂಗಾರು ಹಂಗಾಮಿನಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಇದಕ್ಕಾಗಿ ಪೂರ್ವ ತಯಾರಿ ಮಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ. ರೈತರಿಗೆ ಉತ್ತಮ ಗುಣಮಟ್ಟದ ರಸಗೊಬ್ಬರ ಸಕಾಲದಲ್ಲಿ ಹಾಗೂ ಸಮರ್ಪಕವಾಗಿ ದೊರಕುವಂತೆ ಮಾಡುವುದು ಸರ್ಕಾರದ ಪ್ರಮುಖ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಯಾವುದೇ ನಿರ್ಲಕ್ಷ್ಯ ನಡೆಯಬಾರದು ಎಂದು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಹಾಯಧನದ ಯೂರಿಯಾ ರಸಗೊಬ್ಬರವನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಕೆಯಾಗುವುದನ್ನು ತಡೆಯಲು ಕಾರ್ಖಾನೆ ಹಾಗೂ ಕೈಗಾರಿಕೆ ಗುರುತಿಸಿ ಮಿಷನ್ ಮೋಡ್‌ನಲ್ಲಿ ಪರಿಶೀಲನೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಪ್ರತಿ 15 ದಿನಗಳಿಗೊಮ್ಮೆ ಪರಿಶೀಲನಾ ಸಭೆ ನಡೆಸಬೇಕು. ಜಿಲ್ಲೆಯಲ್ಲಿ ತೀವ್ರ ಬೇಡಿಕೆ ಎದುರಾದ ಸಂದರ್ಭದಲ್ಲಿ ಬಳಕೆಗಾಗಿ ಶೇ. 25ರಷ್ಟು ರಸಗೊಬ್ಬರವನ್ನು ಕಾಪು ದಾಸ್ತಾನು ಇಡುವ ಕ್ರಮ ಕಟ್ಟುನಿಟ್ಟಾಗಿ ಅನುಸರಿಸಬೇಕು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಹೇಮಂತ್ ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿ.ಡಿ. ಕೃಷ್ಣಮೂರ್ತಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣ ಉಕ್ಕುಂದು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ತಹಸೀಲ್ದಾರರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.