ಕಾರ್ಖಾನೆಯ ಧೂಳಿನಿಂದ ಬೆಳೆ ಮೇಲೆ ಪ್ರತಿಕೂಲ ಪರಿಣಾಮ

KannadaprabhaNewsNetwork |  
Published : Dec 14, 2024, 12:48 AM IST
ಸ | Kannada Prabha

ಸಾರಾಂಶ

ಕಪ್ಪು ಧೂಳಿನಿಂದ ಮಣ್ಣಿನ ಫಲವತ್ತತೆ ಹಾಗೂ ಬೆಳೆಗಳ ಮೇಲಾಗುತ್ತಿರುವ ಪ್ರತಿಕೂಲ ಪರಿಣಾಮ ಕುರಿತು ಪರಿಶೀಲನೆ ನಡೆಸಿತು.

ಸಂಡೂರು: ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಮುನಿರಾಬಾದ್‌ನ ತೋಟಗಾರಿಕಾ ಮಹಾವಿದ್ಯಾಲಯದ ವಿಜ್ಞಾನಿಗಳ ತಂಡ ಶುಕ್ರವಾರ ತಾಲೂಕಿನ ರಣಜಿತ್‌ಪುರ-ನರಸಾಪುರ ಗ್ರಾಮದ ವ್ಯಾಪ್ತಿಯಲ್ಲಿನ ಜಮೀನು ಹಾಗೂ ತೋಟಗಳಿಗೆ ಭೇಟಿ ನೀಡಿ, ಸದರಿ ಗ್ರಾಮಗಳ ವ್ಯಾಪ್ತಿಯಲ್ಲಿರುವ ಇನ್‌ಫ್ರಾಸ್ಟ್ರಕ್ಚರ್‌ (ಆರ್‌ಐಪಿಎಲ್) ಸ್ಪಾಂಜ್ ಐರನ್ ಉದ್ದಿಮೆಯು ಹೊರ ಸೂಸುತ್ತಿರುವ ಕಪ್ಪು ಧೂಳಿನಿಂದ ಮಣ್ಣಿನ ಫಲವತ್ತತೆ ಹಾಗೂ ಬೆಳೆಗಳ ಮೇಲಾಗುತ್ತಿರುವ ಪ್ರತಿಕೂಲ ಪರಿಣಾಮ ಕುರಿತು ಪರಿಶೀಲನೆ ನಡೆಸಿತು.

ಕರೂರ್ ಮಾಧವ ರೆಡ್ಡಿ ನೇತೃತ್ವದ ರಾಜ್ಯ ರೈತ ಸಂಘವು ಸೆ.೨೦ರಂದು ಬಳ್ಳಾರಿಯ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಿಗೆ ಪತ್ರ ಬರೆದು, ರಣಜಿತ್‌ಪುರದ ಬಳಿಯ ಆರ್‌ಐಪಿಎಲ್ ಸ್ಪಾಂಜ್ ಐರನ್ ಕಾರ್ಖಾನೆಯು ಹೊರ ಸೂಸುತ್ತಿರುವ ಕಪ್ಪು ಧೂಳಿನಿಂದ ಸುತ್ತಲಿನ ಜಮೀನುಗಳಲ್ಲಿರುವ ಮಣ್ಣಿನ ಫಲವತ್ತತೆ ಹಾಳಾಗಿದೆ. ಈ ಜಮೀನುಗಳಲ್ಲಿ ಬೆಳೆಯಲಾಗುತ್ತಿರುವ ಶೇಂಗಾ, ಮೆಕ್ಕೆಜೋಳ, ಹತ್ತಿ, ಅಡಕೆ, ಬಾಳೆ ಮುಂತಾದ ಬೆಳೆಗಳ ಇಳುವರಿ ಕುಂಠಿತವಾಗುತ್ತಿದೆ. ಕಪ್ಪುಧೂಳಿನಿಂದ ಬೆಳೆಗಳ ಮೇಲೆ ಆಗಿರುವ ಹಾನಿಯ ಕುರಿತು ಅಧ್ಯಯನ ಮಾಡುವಂತೆ ಆಗ್ರಹಿಸಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಮುನಿರಾಬಾದಿನ ತೋಟಗಾರಿಕಾ ಮಹಾವಿದ್ಯಾಲಯ, ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ರಣಜಿತ್‌ಪುರ, ನರಸಾಪುರ, ವಿಠಲನಗರದಲ್ಲಿನ ಪಿ. ಮಂಜುನಾಥ, ಪಿ.ಸಿ. ಪರಮೇಶ್, ಹೆಚ್. ಕಾಡಪ್ಪ, ಜಿ.ಕೆ. ನಾಗರಾಜ ಮುಂತಾದ ರೈತರ ಜಮೀನು, ತೋಟಗಳಿಗೆ ಭೇಟಿ ನೀಡಿ, ಅಲ್ಲಿನ ಬಾಳೆ, ಅಡಕೆ, ಮೆಕ್ಕೆಜೋಳ ಮುಂತಾದ ಬೆಳೆಗಳ ಮೇಲೆ ಸಂಗ್ರಹವಾಗುತ್ತಿರುವ ಕಾರ್ಖಾನೆಯ ಕಪ್ಪು ಧೂಳು, ಅದರಿಂದ ಉಂಟಾಗುತ್ತಿರುವ ತೊಂದರೆಗಳ ಕುರಿತು ಅಧ್ಯಯನ ನಡೆಸಿದರಲ್ಲದೆ, ರೈತರಿಂದ ಮಾಹಿತಿಯನ್ನು ಸಂಗ್ರಹಿಸಿದರು.

ರಣಜಿತ್‌ಪುರದ ರೈತ ಮುಖಂಡರಾದ ಪಿ.ಸಿ. ಪರಮೇಶ್, ಜಿ. ಪರಮೇಶ್, ಕಾಡಪ್ಪ, ನರಸಾಪುರದ ರೈತ ಮುಖಂಡ ಜಿ.ಕೆ. ನಾಗರಾಜ ಅವರು ಮಾತನಾಡಿ, ಕಾರ್ಖಾನೆ ಹೊರ ಸೂಸುವ ಕಪ್ಪು ಧೂಳಿನಿಂದ ಇಲ್ಲಿನ ನೆಲ, ಜಲ ಮಲೀನವಾಗಿದೆ. ಬೆಳೆಗಳ ಇಳುವರಿ ಕುಂಟಿತವಾಗಿದೆ. ಜೋಳ, ಮೆಕ್ಕೆಜೋಳದ ಸೊಪ್ಪಿನ ಮೇಲೆ ಧೂಳು ಸಂಗ್ರಹಗೊಳ್ಳುವುದರಿಂದ, ಅದನ್ನು ದನಗಳು ತಿನ್ನುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಬೆಳೆ ಶರೀರ ಕ್ರಿಯಾಶಾಸ್ತç ಪ್ರಾಧ್ಯಾಪಕ ಡಾ. ಮುಕೇಶ ಚವ್ಹಾಣ್, ಸಸ್ಯರೋಗ ಶಾಸ್ತç ಸಹ ಪ್ರಾಧ್ಯಾಪಕ ಡಾ. ರಾಘವೇಂದ್ರ ಆಚಾರಿ, ಸಹಾಯಕ ಪ್ರಾಧ್ಯಾಪಕ ಡಾ. ಕೃಷ್ಣ ಡಿ ಕುರುಬೆಟ್ಟ, ಮಣ್ಣು ವಿಜ್ಞಾನ ಸಹಾಯಕ ಪ್ರಾಧ್ಯಾಪಕ ಡಾ. ಯೋಗಿಶಪ್ಪ ಎಚ್., ತೋಟಗಾರಿಕಾ ಸಹಾಯಕ ಪ್ರಾಧ್ಯಾಪಕ ಡಾ. ಆರ್. ಲೋಕೇಶ್, ತಾಲೂಕು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಹನುಮಪ್ಪ ನಾಯಕ ಜರಕುಂಠಿ, ಸಹಾಯಕ ತೋಟಗಾರಿಕೆ ನಿರ್ದೇಶಕ ಟಿ.ವಿ. ಉದಯ ಅವರು ರಣಜಿತ್‌ಪುರ-ನರಸಾಪುರ ಗ್ರಾಮಗಳ ಜಮೀನುಗಳ ಪರಿಶೀಲನಾ ತಂಡದಲ್ಲಿ ಭಾಗವಹಿಸಿದ್ದರು.

ಸಂಡೂರು ತಾಲೂಕಿನ ರಣಜಿತ್‌ಪುರ ಹಾಗೂ ನರಸಾಪುರ ಗ್ರಾಮಗಳಲ್ಲಿನ ತೋಟಗಳಿಗೆ ಶುಕ್ರವಾರ ತೋಟಗಾರಿಕಾ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ