ಕೈಕೊಟ್ಟ ಮಳೆ: ರೈತನಿಗೆ ತಪ್ಪದ ಆರ್ಥಿಕ ಸಂಕಟ

KannadaprabhaNewsNetwork |  
Published : Sep 03, 2026, 02:15 AM IST
ಅಣ್ಣಿಗೇರಿ ತಾಲೂಕಿನಲ್ಲಿ ಮಳೆಯಾಗದೇ ತೇವಾಂಶ ಕೊರತೆಯಿಂದಾಗಿ ಬಿಟಿ ಹತ್ತಿ ಬೆಳೆಯು ಸಮರ್ಪಕವಾಗಿ ಬೆಳೆಯದಿರುವುದು. | Kannada Prabha

ಸಾರಾಂಶ

ಹವಾಮಾನ ವೈಪರೀತ್ಯದ ಪರಿಣಾಮ ಮುಂಗಾರು ಬೆಳೆಗಳಾದ ಹೆಸರು, ಉದ್ದು ಈಗಾಗಲೇ ತೀವ್ರ ಇಳುವರಿ ಕುಂಠಿತದಿಂದ ರೈತರನ್ನು ಕಂಗೆಡಿಸಿದ್ದು, ಬಿಟಿ ಹತ್ತಿಗೂ ಬರದ ಬಿಸಿ ತಟ್ಟಿದೆ.

ರಫೀಕ ಕಲೇಗಾರ

ಅಣ್ಣಿಗೇರಿ:

ಒಂದೆಡೆ ಬಿತ್ತನೆಗೆ ಮಾಡಿದ ಸಾಲ, ಮತ್ತೊಂದೆಡೆ ಕೈಕೊಟ್ಟ ಮಳೆ, ಬೆಳೆ ಕೈಹಿಡಿಯುತ್ತದೆ ಎಂಬ ಅನ್ನದಾತನ ನಿರೀಕ್ಷೆ ಹುಸಿಯಾಗಿದ್ದು, ಪ್ರಸಕ್ತ ಕೃಷಿ ವರ್ಷ ತಾಲೂಕಿನ ರೈತರ ಪಾಲಿಗೆ ಸಂಕಷ್ಟದ ವರ್ಷವಾಗಿ ಪರಿಣಮಿಸಿದೆ.

ಹವಾಮಾನ ವೈಪರೀತ್ಯದ ಪರಿಣಾಮ ಮುಂಗಾರು ಬೆಳೆಗಳಾದ ಹೆಸರು, ಉದ್ದು ಈಗಾಗಲೇ ತೀವ್ರ ಇಳುವರಿ ಕುಂಠಿತದಿಂದ ರೈತರನ್ನು ಕಂಗೆಡಿಸಿದ್ದು, ಬಿಟಿ ಹತ್ತಿಗೂ ಬರದ ಬಿಸಿ ತಟ್ಟಿದೆ. ತೇವಾಂಶದ ಕೊರತೆಯಿಂದ ಹತ್ತಿ ಗಿಡಗಳು ಸದೃಢವಾಗಿ ಬೆಳೆಯದೆ, ಕಾಯಿ ಕಟ್ಟುವ ಹಂತದಲ್ಲೇ ಒಣಗಿ ನೆಲಕ್ಕುರುಳುತ್ತಿವೆ.

ರೈತರು ಸಾಲ ಮಾಡಿ ಬೀಜ, ಗೊಬ್ಬರ, ಔಷಧಿ, ಬಿತ್ತನೆ ಸೇರಿದಂತೆ ವಿವಿಧ ಖರ್ಚು ಮಾಡಿಕೊಂಡಿದ್ದರು. ಆದರೆ, ನಿರೀಕ್ಷಿತ ಮಳೆಯಾಗದೆ ಹೆಸರು, ಉದ್ದು ಬೆಳೆಗಳ ಇಳುವರಿ ಶೇ. 70ರಷ್ಟು ಕುಸಿದಿದೆ. ಮಾಡಿದ ಖರ್ಚಿಗೆ ಹಣವೂ ಬರದ ಸ್ಥಿತಿ ನಿರ್ಮಾಣವಾಗಿದೆ.

ವಾಡಿಕೆ ಮಳೆ ಕುಸಿತ:

ಮಾರ್ಚ್‌ನಿಂದ ಮೇ ವರೆಗೆ ಅಣ್ಣಿಗೇರಿ ಭಾಗದಲ್ಲಿ 120.4 ಮಿ.ಮೀ ವಾಡಿಕೆ ಮಳೆಯಲ್ಲಿ 213.2 ಮಿ.ಮೀ. ಮಳೆಯಾಗಿದ್ದು, ಶೇ. 77ರಷ್ಟು ಅಧಿಕ ಮಳೆಯಾಗಿತ್ತು. ಇದರಿಂದ ಮುಂಗಾರು ಬಿತ್ತನೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗುವ ನಿರೀಕ್ಷೆ ರೈತರಲ್ಲಿತ್ತು. ಆದರೆ, ಜೂನ್‌ನಲ್ಲಿ 124.8 ಮಿಮೀ ವಾಡಿಕೆ ಮಳೆಗೆ ಕೇವಲ 95.5 ಮಿಮೀ ಮಳೆಯಾಗಿದ್ದು, ಶೇ. 23ರಷ್ಟು ಕೊರತೆಯಾಗಿದೆ. ಜುಲೈನಲ್ಲಿ ಮಳೆ ಕೊರತೆ ಶೇ. 45ಕ್ಕೆ ತಲುಪಿದೆ. ಆಗಸ್ಟ್ 1ರಿಂದಲೂ ನಿರೀಕ್ಷಿತ ಮಳೆಯಾಗದೆ, ಬೆಳೆಗಳಿಗೆ ತೇವಾಂಶದ ಕೊರತೆ ಮತ್ತಷ್ಟು ಉಲ್ಬಣಿಸಿದೆ.

ಮೂರು ಎಕರೆ ಹತ್ತಿ ನೆಲಕಚ್ಚಿತು:

ಪಟ್ಟಣದ ರೈತ ಭರಮಪ್ಪ ಬಾವಿಕಟ್ಟಿ ಅವರು 3 ಎಕರೆ ಜಮೀನಿನಲ್ಲಿ ಬಿಟಿ ಹತ್ತಿ ಬೆಳೆದಿದ್ದು ತೇವಾಂಶ ಕೊರತೆಯಿಂದ ಗಿಡಗಳು ಸಮರ್ಪಕವಾಗಿ ಬೆಳೆದಿಲ್ಲ. ಕೆಲ ಗಿಡಗಳಲ್ಲಿ 3-4 ಕಾಯಿ ಕಟ್ಟಿದ್ದರೂ ಅವು ಕೂಡ ಒಣಗಿ ಉದುರುತ್ತಿವೆ.

7,025 ಹೆಕ್ಟೇರ್‌ ಹತ್ತಿ:

ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು 7,025 ಹೆಕ್ಟೇರ್ ಪ್ರದೇಶದಲ್ಲಿ ಬಿಟಿ ಹತ್ತಿ ಬಿತ್ತನೆಯಾಗಿದ್ದರೂ ಬೆಳೆಯ ಭವಿಷ್ಯದ ಬಗ್ಗೆಯೇ ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.ಸರ್ಕಾರ ಕಾಲಹರಣ ಮಾಡದೆ ತೀವ್ರ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಬೇಕು. ಅಣ್ಣಿಗೇರಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ, ಪ್ರತಿ ಎಕರೆಗೆ ₹ 50 ಸಾವಿರ ಪರಿಹಾರ ನೀಡಬೇಕು. ವಿಳಂಬ ಮಾಡಿದರೆ ತಾಲೂಕು ವ್ಯಾಪ್ತಿಯಲ್ಲಿ ಉಗ್ರ ಹೋರಾಟ ನಡೆಸಲಾಗುವುದು.

ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಸಚಿವವರದಿ ಪರಿಶೀಲನೆಯಾದ ಬಳಿಕ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲು ವಿಳಂಬವಾಗಿದೆ. ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು ಮರು ಪರಿಶೀಲನೆ ನಂತರ ಬರಗಾಲ ಜಿಲ್ಲೆ ಘೋಷಣೆಯಾಗುವ ಭರವಸೆಯಿದೆ.

ಎನ್.ಎಚ್. ಕೋನರಡ್ಡಿ, ಶಾಸಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುತ್ ನಿಯಮ ತಿದ್ದುಪಡಿ ಕೈಬಿಡಲು ಆಗ್ರಹ
ಮಾನಸಿಕ, ಬೌದ್ಧಿಕ ಬೆಳವಣಿಗೆಗೆ ಕ್ರೀಡೆ ಪೂರಕ: ಸುನೀಲ ಮಹಾಂತಶೆಟ್ಟರ