ಮುಂಡರಗಿ: ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕಿನ ಗಡಿಯಲ್ಲಿರುವ ಕಪ್ಪತ್ತಗುಡ್ಡದ ಜಾಗೃತ ಕ್ಷೇತ್ರ ಕಪೋತಗಿರಿಯಲ್ಲಿ ಸೆ. 3ರಿಂದ 6ರ ವರೆಗೆ ಕಪ್ಪತ್ತ ಮಲ್ಲೇಶ್ವರ ಸ್ವಾಮಿ ಹಾಗೂ ಭ್ರಮರಾಂಬಾದೇವಿಯವರ ವಿವಾಹ ಮಹೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ ಎಂದು ಕಪ್ಪತ್ತಮಲ್ಲೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಆನಂದಗೌಡ ಪಾಟೀಲ ಮುಂಡವಾಡ ಹೇಳಿದರು.ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಾತ್ರಾಮಹೋತ್ಸವ ಕಾರ್ಯಕ್ರಮಗಳು ಕಪ್ಪತ್ತಮಠದ ಧರ್ಮದರ್ಶಿ ಮಲ್ಲಿಕಾರ್ಜುನ ಸ್ವಾಮಿಗಳ ಸಾನ್ನಿಧ್ಯದಲ್ಲಿ ಜರುಗುವುವು. ಶ್ರಾವಣ ಮಾಸದಲ್ಲಿ ಕಪ್ಪತ್ತಮಲ್ಲೇಶ್ವರಸ್ವಾಮಿ ಹಾಗೂ ಭ್ರಮರಾಂಬಾದೇವಿಗೆ ಪ್ರತಿನಿತ್ಯ ಮಹಾರುದ್ರಾಭಿಷೇಕ ನಡೆಯುವುದು. ಸೆ. 3ರಂದು ಬೆಳಗ್ಗೆ 11ರಿಂದ 12.30ರ ವರೆಗೆ ಹಿರೇವಡ್ಡಟ್ಟಿ ಗ್ರಾಮದ ಕಪ್ಪತ್ತಮಲ್ಲೇಶ್ವರ ಮೂರ್ತಿ ಹಾಗೂ ಪಾಲಕಿ ಸೇವಾ ಸಿಬ್ಬಂದಿಯವರ ಆಗಮನದ ನಂತರ ಮಠದ ಸಂಪ್ರದಾಯದಂತೆ ವಿವಾಹ ಹಾಗೂ ಜಾತ್ರಾ ಮಹೋತ್ಸವ ವೈಭವದಿಂದ ನೆರವೇರಲಿದೆ.ಸೆ. 5ರಂದು ಡಂಬಳ ಗ್ರಾಮದಿಂದ ಕಪ್ಪತ್ತಮಲ್ಲೇಶ್ವರಸ್ವಾಮಿ ಹಾಗೂ ಭ್ರಮರಾಂಬಾದೇವಿಯ ಮೂರ್ತಿ ಆಗಮಿಸಿ, ಶ್ರೀಮಠದ ಧರ್ಮಾಧಿಕಾರಿಗಳಿಂದ ಬರಮಾಡಿಕೊಳ್ಳುವ ಕಾರ್ಯಕ್ರಮ ಸಂಜೆ 5ಕ್ಕೆ ಜರುಗುವುದು. ಸೆ. 6ರಂದು ಬೆಳಗ್ಗೆ 10ಕ್ಕೆ ಡಂಬಳ ದೈವದವರು ಮತ್ತು ಸುತ್ತಲಿನ ಗ್ರಾಮದ ಸದ್ಭಕ್ತರಿಂದ ವಿಶೇಷ ಜಾತ್ರಾ ಮಹೋತ್ಸವವು ಜರುಗುವುದು. ಪ್ರತಿದಿನ ಕಪ್ಪತಮಲ್ಲೇಶ್ವರನ ಸನ್ನಿಧಿಯಲ್ಲಿ ಭಕ್ತರ ಸಹಕಾರದಿಂದ ಅನ್ನದಾಸೋಹ ನಡೆಯುವುದು. ಭಕ್ತರಿಗೆ ಗದಗ ಮತ್ತು ಮುಂಡರಗಿಯಿಂದ ಕೆಎಸ್ಆರ್‌ಟಿಸಿ ವಿಶೇಷ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9686608924, 9611727143 ಸಂಪರ್ಕಿಸಬಹುದು ಎಂದರು.