ಬಳ್ಳಾರಿ: ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆಯ ನಕಲಿ ಬಿಲ್ ಸೃಷ್ಟಿಸಿ ಸಾರ್ವಜನಿಕರ ಕೋಟ್ಯಂತರ ಹಣ ಅವ್ಯವಹಾರ ನಡೆದಿದೆ. ಈ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕು ಎಂದು ಪಾಲಿಕೆಯ ಬಿಜೆಪಿ ಸದಸ್ಯರು ಒತ್ತಾಯಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಪಾಲಿಕೆಯ ಪ್ರತಿಪಕ್ಷದ ನಾಯಕ ಇಬ್ರಾಹಿಂ ಬಾಬು, ನಗರದ ವಿವಿಧೆಡೆ ನಕಲಿ ಬಿಲ್‌ಗಳನ್ನು ಕೊಟ್ಟು ಪಾಲಿಕೆ ಸಿಬ್ಬಂದಿ ಹಣ ನುಂಗಿ ಹಾಕಿದ ಘಟನೆಗಳ ಸಾಕ್ಷಿ ಸಿಕ್ಕಿವೆ. ಕೋಟ್ಯಂತರ ರು. ಅವ್ಯವಹಾರ ನಡೆದಿರುವ ಗುಮಾನಿಯಿದೆ. ಹೀಗಾಗಿ ಕಳೆದ 10 ವರ್ಷಗಳಲ್ಲಿ ಪಾಲಿಕೆಯಲ್ಲಾದ ಅವ್ಯವಹಾರಗಳ ತನಿಖೆಯಾಗಬೇಕು. ನಕಲಿ ಬಿಲ್ ಸೃಷ್ಟಿಸಿದ ಸಿಬ್ಬಂದಿ ಕಂದಾಯ ಅಧಿಕಾರಿ ಮನೋಹರ್ ಹಾಗೂ ಬಿಲ್ ಕಲೆಕ್ಟರ್ ಶ್ರೀನಿವಾಸ್ (ಸೀನಾ) ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಇಲ್ಲದಿದ್ದರೆ ಪಾಲಿಕೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ನಕಲಿ ಬಿಲ್ ಸೃಷ್ಟಿಸಿ ಹಣ ಲಪಟಾಯಿಸಿರುವ ಪ್ರಕರಣದ ಬಗ್ಗೆ ಪಾಲಿಕೆ ಆಯುಕ್ತರ ಗಮನಕ್ಕೆ ತರಲಾಗಿದೆ. ಈ ಕುರಿತು ಕ್ರಮ ವಹಿಸುವಂತೆ ಒತ್ತಾಯಿಸಿದ್ದೇವೆ. ಆದರೆ, ಆಯುಕ್ತರು ಅತ್ಯಂತ ನಿರ್ಲಕ್ಷ್ಯದಿಂದ ಮಾತನಾಡಿದರು. ಆಯಿತು ನೋಡೋಣ ಎಂದು ಸಾಗ ಹಾಕಿದರು. ಸಾರ್ವಜನಿಕರ ಹಣ ನುಂಗಿ ಹಾಕಿದವರ ವಿರುದ್ಧ ಈವರೆಗೆ ಕ್ರಮ ಜರುಗಿಸಿಲ್ಲ. ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿಲ್ಲ ಎಂದಾದರೆ ಇದರ ಹಿಂದಿನ ಉದ್ದೇಶವೇನು? ಎಂದು ಇಬ್ರಾಹಿಂಬಾಬು ಪ್ರಶ್ನಿಸಿದರು.
ನಕಲಿ ಬಿಲ್‌ಗಳ ಸೃಷ್ಟಿಯಿಂದಾಗಿ ಪಾಲಿಕೆಯ ವಾರ್ಷಿಕ ಕಂದಾಯ ಗುರಿ ತಲುಪಿಲ್ಲ. ಕಳೆದ ವರ್ಷ ಆಸ್ತಿ ಮತ್ತಿತರ ತೆರಿಗೆ ₹44 ಕೋಟಿ ಆಗಬೇಕಿತ್ತು. ಆದರೆ, ನಿರ್ದಿಷ್ಟ ಗುರಿ ತಲುಪದೆ ಬರೀ ₹32 ಕೋಟಿಯಷ್ಟೇ ತೆರಿಗೆ ಸಂಗ್ರಹವಾಗಿದೆ. ನಕಲಿ ಬಿಲ್ ಸೃಷ್ಟಿಯಿಂದಾಗಿ ಭಾರೀ ಪ್ರಮಾಣದ ತೆರಿಗೆ ಸಂಗ್ರಹ ಇಳಿಮುಖವಾಗಿದೆ. ಪಾಲಿಕೆಯ ವಾರ್ಷಿಕ ಕಂದಾಯ ಗುರಿಯ ಶೇ.30ರಿಂದ 40ರಷ್ಟು ಇಳಿಕೆಯಾಗಿದೆ. ನಕಲಿ ಬಿಲ್ ಸೃಷ್ಟಿಸಿ ಸಾರ್ವಜನಿಕರ ಹಣವನ್ನು ನುಂಗಿ ಹಾಕಿರುವುದರಿಂದಾಗಿಯೇ ತೆರಿಗೆ ಪ್ರಮಾಣ ಸಾಕಷ್ಟು ಕುಸಿದಿದೆ ಎಂದು ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸೂಕ್ತ ತನಿಖೆಯಾದರೆ ಎಲ್ಲವೂ ಹೊರ ಬರುತ್ತದೆ ಪಾಲಿಕೆಯ ಬಿಜೆಪಿ ಸದಸ್ಯ ಶ್ರೀನಿವಾಸ ಮೋತ್ಕರ್ ತಿಳಿಸಿದರು.ಬಿಜೆಪಿ ಸದಸ್ಯರಿರುವ ವಾರ್ಡ್ ಗಳಲ್ಲಿ ಸಾರ್ವಜನಿಕರು ಪಾಲಿಕೆಗೆ ಸಂದಾಯ ಮಾಡಿರುವ ಬಿಲ್‌ಗಳನ್ನು ಪರಿಶೀಲಿಸುತ್ತೇವೆ. ನಕಲಿ ಬಿಲ್ ನೀಡಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಪರಿಶೀಲನೆ ಕಾರ್ಯಕ್ಕೆ ಮುಂದಾಗುತ್ತೇವೆ ಎಂದು ಗೋವಿಂದರಾಜುಲು ತಿಳಿಸಿದರು.
ಬಿಜೆಪಿ ಪಾಲಿಕೆ ಸದಸ್ಯರಾದ ಸುರೇಖಾ ಮಲ್ಲನಗೌಡ, ಹನುಮಂತ ಗುಡಿಗಂಟಿ, ಹನುಮಂತಪ್ಪ, ಮುಖಂಡರಾದ ಎಸ್.ಮಲ್ಲನಗೌಡ, ವೇಮಣ್ಣ ಮತ್ತಿತರರಿದ್ದರು.ಪಾಲಿಕೆ ಸಿಬ್ಬಂದಿ ಕೈಗೆ ಹಣ ಕೊಡಬೇಡಿ:
ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ನಿವಾಸಿಗಳು ಆಸ್ತಿ ತೆರಿಗೆ ಸೇರಿದಂತೆ ಯಾವುದೇ ತೆರಿಗೆಯ ನಗದನ್ನು ಪಾಲಿಕೆ ಸಿಬ್ಬಂದಿ ಅಥವಾ ಅಧಿಕಾರಿಗಳ ಕೈಗೆ ನೀಡಬಾರದು ಎಂದು ಬಿಜೆಪಿಯ ಪಾಲಿಕೆಯ ಸದಸ್ಯರು ಮನವಿ ಮಾಡಿದರು.ಕೈಗೆ ನಗದು ಹಣ ನೀಡಿದರೆ ನುಂಗಿ ಹಾಕುವ ಸಾಧ್ಯತೆಗಳಿವೆ. ನಕಲಿ ಬಿಲ್ ನೀಡಿ ಯಾಮಾರಿಸಬಹುದು. ಎಷ್ಟೇ ಪರಿಚಿತರಿದ್ದರೂ ನಗದು ನೀಡದೆ, ಚೆಕ್ ಅಥವಾ ಡಿಡಿ ಮೂಲಕವೇ ನೀಡಿ ಎಂದು ಮನವಿ ಮಾಡಿದರು.