ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲಾಧಿಕಾರಿ ಕಚೇರಿಗೆ ಡಿ.12ರಂದೇ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿದ್ದರೂ ಅದನ್ನು ಕಚೇರಿ ಸಿಬ್ಬಂದಿ ಗಮನಿಸಿದಂತೆ ಕಾಣಿಸಿಲ್ಲ. ಇ-ಮೇಲ್ ಬಂದು 5 ದಿನಗಳ ಬಳಿಕ ಎಚ್ಚೆತ್ತುಕೊಂಡಿರುವ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಬುಧವಾರ ಪೊಲೀಸ್ ಇಲಾಖೆಗೆ ಮಾಹಿತಿ ರವಾನಿಸಿದೆ. ತಕ್ಷಣವೇ ಎಚ್ಚೆತ್ತ ಪೊಲೀಸ್ ಇಲಾಖೆ ಜಿಲ್ಲಾಡಳಿತ ಭವನಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಸಮೇತ ಆಗಮಿಸಿ ಎಲ್ಲ ಕಡೆಗೂ ಪರಿಶೀಲನೆ ನಡೆಸಿತು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಂಬ್ ಇಡಲಾಗಿದೆ ಎನ್ನುವ ಇ-ಮೇಲ್ ಸುದ್ದಿ ತಿಳಿದು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಕೂಡ ಆತಂಕಗೊಂಡಿದ್ದರು. ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದ ಜಂಟಿ ಪರಿಶೀಲನೆ ಬಳಿಕ ಇದೊಂದು ಹುಸಿ ಇ-ಮೇಲ್ ಎನ್ನುವುದು ತಿಳಿದು ನಿರಾತಂಕಗೊಂಡರು.ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಇಡಲಾಗಿದೆ ಎಂದು ಇ-ಮೇಲ್ ಬಂದಿರುವ ವಿಚಾರವನ್ನು ಇಲಾಖೆ ಗಮನಕ್ಕೆ ತರುತ್ತಿದ್ದಂತೆ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ಸಿಬ್ಬಂದಿ ಸಂಪೂರ್ಣ ತಪಾಸಣೆ ಮಾಡಿದ್ದು, ಇಂದೊಂದು ಫೇಕ್ ಇ-ಮೇಲ್ ಎನ್ನುವುದು ತಿಳಿದುಬಂದಿದೆ. ಯಾವುದೇ ಆತಂಕ ಇಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಸಿದ್ಧಾರ್ಥ ಗೋಯಲ್ ತಿಳಿಸಿದ್ದಾರೆ.