ಧಾರವಾಡ:
ತಮಿಳುನಾಡಿನಲ್ಲಿ ಇಡಬ್ಲ್ಯೂಎಸ್ ಮೀಸಲು ಅನುಷ್ಠಾನ ನಿಲ್ಲಿಸಿ! ಎಂಬ ಸಂದೇಶವುಳ್ಳ ಇಮೇಲ್ ಮೂಲಕ ಹೈಕೋರ್ಟ್‌ನಲ್ಲಿ ಆರ್‌ಡಿಎಕ್ಸ್ ಬಾಂಬ್ ಇಟ್ಟು ಸೋಮವಾರ ಮಧ್ಯಾಹ್ನ 1.15ಕ್ಕೆ ಸ್ಫೋಟಗೊಳಿಸುವುದಾಗಿ ಜ. 6ರಂದು ಇ-ಮೇಲ್ ಮೂಲಕ ಬಂದಿದ್ದ ಮಾದರಿಯಲ್ಲಿಯೇ ಬೆದರಿಕೆ ಬಂದಿದೆ. ಹೈಕೋರ್ಟ್ ಹೆಚ್ಚುವರಿ ರಜಿಸ್ಟ್ರಾರ್ ಶಾಂತವೀರ ಶಿವಪ್ಪ ಇಮೇಲ್ ಪರಿಶೀಲಿಸಿ, ಕೂಡಲೇ ವಿಷಯವನ್ನು ಎಸ್ಪಿ ಗುಂಜನ್ ಆರ್ಯ ಅವರಿಗೆ ತಿಳಿಸಿದ್ದಾರೆ. ಕಳೆದ ಬಾರಿಯಂತೆ ಮತ್ತೆ ಎಚ್ಚೆತ್ತುಕೊಂಡ ಎಸ್ಸಿ ಅವರು ತಮ್ಮ ಪೊಲೀಸ್ ತಂಡದೊಂದಿಗೆ ಹೈಕೋರ್ಟ್‌ಗೆ ಆಗಮಿಸಿ ನ್ಯಾಯಾಧೀಶರು ಸೇರಿದಂತೆ ವಕೀಲರು ಹಾಗೂ ಸಾರ್ವಜನಿಕರನ್ನು ಅವರವರ ವಾಹನಗಳೊಂದಿಗೆ ಹೈಕೋರ್ಟ್ ಆವರಣದಿಂದ ಹೊರ ಕಳುಹಿಸಿದರು. ಜತೆಗೆ ಸ್ಥಳಕ್ಕೆ ಅಗ್ನಿಶಾಮಕ ದಳ ಸಹ ಕರೆಯಿಸಲಾಗಿತ್ತು.
ಎಸ್ಪಿ ಗುಂಜನ್ ಆರ್ಯ ನೇತೃತ್ವದಲ್ಲಿ ಬೆರಳಚ್ಚು ತಜ್ಞರು, ಬಾಂಬ್ ನಿಷ್ಕ್ರಿಯ ದಳವು ಸುಮಾರು ಒಂದೂವರೆ ಗಂಟೆ ಕಾಲ ಪರಿಶೀಲನೆ ಕಾರ್ಯ ನಡೆಯಿತು. ಹೈಕೋರ್ಟ್‌ನ ಮೂಲೆ ಮೂಲೆ ಪರಿಶೀಲಿಸಿ ಯಾವುದೇ ಅನುಮಾನಾಸ್ಪದ ವಸ್ತು ಸಿಕ್ಕಿಲ್ಲ ಎಂದು ಎಸ್ಪಿ ಅವರು ಮಾಹಿತಿ ನೀಡಿದ ನಂತರ ಮಧ್ಯಾಹ್ನ ನಂತರವೇ ಸ್ಥಗಿತಗೊಂಡಿದ್ದ ಕೋರ್ಟ್ ಕಲಾಪಗಳು ಆರಂಭವಾದವು. ಆದರೆ, ಕಳೆದ ಬಾರಿಯಂತೆ ಈ ಬಾರಿಯೂ ನ್ಯಾಯಾಧೀಶರು, ನ್ಯಾಯವಾದಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಹುಸಿ ಬೆದರಿಕೆ ಇದ್ದರೂ ಆತಂಕಕ್ಕೆ ಒಳಗಾಗಿದ್ದರು. ಮಹತ್ವದ ಕಲಾಪಗಳನ್ನು ಬಿಟ್ಟು ಹೈಕೋರ್ಟ್ ಹೊರಗೆ ನಿಲ್ಲುವ ಸ್ಥಿತಿ ಉಂಟಾಯಿತು ಎಂದು ವಕೀಲರು ಹಾಗೂ ಕಕ್ಷಿದಾರರು ತಮ್ಮ-ತಮ್ಮಲ್ಲಿಯೇ ಗುಣುಗುತ್ತಿದ್ದರು.ಜಿಲ್ಲಾ ನ್ಯಾಯಾಲಯಕ್ಕೂ ಬೆದರಿಕೆ:
ಇನ್ನು, ಹೈಕೋರ್ಟ್‌ನಲ್ಲಿ ಬಾಂಬ್ ಬೆದರಿಕೆ ಸುದ್ದಿ ಹಬ್ಬುತ್ತಿದ್ದಂತೆ ಕ್ಷಣ ಮಾತ್ರದಲ್ಲಿ ಜಿಲ್ಲಾ ನ್ಯಾಯಾಲಯಕ್ಕೂ ಅದೇ ಮಾದರಿ ಇಮೇಲ್ ಬಂದಿದ್ದು, ವಿಷಯ ತಿಳಿದು ಉಪ ನಗರ, ಶಹರ ಠಾಣೆ ಪೊಲೀಸ್ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ತಮ್ಮ ಸಿಬ್ಬಂದಿಯೊಂದಿಗೆ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು, ವಕೀಲರು ಹಾಗೂ ಕಕ್ಷಿದಾರರನ್ನು ನ್ಯಾಯಾಲಯದ ಆವರಣದಿಂದ ಹೊರ ಕಳುಹಿಸಿ ತಪಾಸಣೆ ಮಾಡಿದರು. ಇಲ್ಲಿ ಮೊದಲ ಬಾರಿ ಇಂತಹ ಬೆದರಿಕೆ ಬಂದ ಹಿನ್ನೆಲೆಯಲ್ಲಿ ತುಸು ಗೊಂದಲ ಉಂಟಾಯಿತು. ಇದೇ ಸಂದರ್ಭದಲ್ಲಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಡಿಸಿಪಿ ಮಹಾನಿಂಗ ನಂದಗಾವಿ ಸಹ ಭೇಟಿ ನೀಡಿ ಪರಿಸ್ಥಿತಿ ನಿಭಾಯಿಸಿದರು. ಯಾವುದೇ ಬಾಂಬ್ ಅಥವಾ ಅನುಮಾನಸ್ಪದ ವಸ್ತು ಸಿಗದ ಹಿನ್ನೆಲೆಯಲ್ಲಿ ಮಧ್ಯಾಹ್ನ ನಂತರ ಮತ್ತೆ ಜಿಲ್ಲಾ ನ್ಯಾಯಾಲಯದಲ್ಲೂ ಕಲಾಪಗಳು ಶುರುವಾದವು.ನ್ಯಾಯಾಲಯದಲ್ಲಿಯೇ ಬಾಂಬ್ ಇಡಲಾಗಿದೆ ಎಂಬ ಹುಸಿ ಬೆದರಿಕೆಯು ಎರಡು ಬಾರಿ ಬಂದರೂ ರಾಜ್ಯ ಸರ್ಕಾರ ಈ ಬಗ್ಗೆ ಗಂಭೀರವಾಗಿ ಏತಕ್ಕೆ ಪರಿಗಣಿಸುತ್ತಿಲ್ಲ. ಬರೀ ಧಾರವಾಡ ಮಾತ್ರವಲ್ಲದೇ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲೂ ಇದೇ ಬೆದರಿಕೆ ಇ-ಮೇಲ್ ಬಂದಿದೆ. ಕಳೆದ ಬಾರಿ ಇಂತಹ ಸಂದೇಶ ಬಂದಾಗಲೇ ಎಚ್ಚೆತ್ತುಕೊಳ್ಳಬೇಕಿತ್ತು. ದುಷ್ಕರ್ಮಿಗಳನ್ನು ಕೂಡಲೇ ಪತ್ತೆ ಹಚ್ಚಬೇಕು. ಜತೆಗೆ ಪ್ರತಿಯೊಂದು ನ್ಯಾಯಾಲಯಗಳಲ್ಲಿ ಡಿಜಿಟಲ್ ತಪಾಸಣೆ ಕೈಗೊಳ್ಳಬೇಕು ಎಂದು ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ ಸರ್ಕಾರಕ್ಕೆ ಆಗ್ರಹಿಸಿದರು.