ಬಿಜೆಪಿಯಿಂದಲೂ ನಕಲಿ ಮತದಾನ- ಕಾಂಗ್ರೆಸ್‌ ಮುಖಂಡ ಹಿರೇಮಠ

KannadaprabhaNewsNetwork |  
Published : Oct 27, 2026, 04:15 AM IST
ಹಾವೇರಿ ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಈ ಕುರಿತು ದಾಖಲೆ ಸಹಿತವಾಗಿ ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಪ್ರಸನ್ನ ಹಿರೇಮಠ ಮಾತನಾಡಿದರು. | Kannada Prabha

ಸಾರಾಂಶ

ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಮತಗಳ್ಳತನವಾಗಿರುವ ಬೆನ್ನಲ್ಲೇ ಬಿಜೆಪಿಯಿಂದಲೂ ಅಕ್ರಮ ಮತದಾನ ನಡೆದಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಬಿಜೆಪಿ ಮುಖಂಡರ ಸಂಬಂಧಿಕರ ಹೆಸರಿನಲ್ಲಿ ಬೇರೆಯವರು ಮತ ಚಲಾಯಿಸಿದ್ದಾರೆ ಎಂದು ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಪ್ರಸನ್ನ ಹಿರೇಮಠ ಆರೋಪಿಸಿದ್ದಾರೆ.

ಹಾವೇರಿ: ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಮತಗಳ್ಳತನವಾಗಿರುವ ಬೆನ್ನಲ್ಲೇ ಬಿಜೆಪಿಯಿಂದಲೂ ಅಕ್ರಮ ಮತದಾನ ನಡೆದಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಬಿಜೆಪಿ ಮುಖಂಡರ ಸಂಬಂಧಿಕರ ಹೆಸರಿನಲ್ಲಿ ಬೇರೆಯವರು ಮತ ಚಲಾಯಿಸಿದ್ದಾರೆ ಎಂದು ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಪ್ರಸನ್ನ ಹಿರೇಮಠ ಆರೋಪಿಸಿದ್ದಾರೆ.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಈ ಕುರಿತು ದಾಖಲೆ ಸಹಿತವಾಗಿ ಮಾತನಾಡಿದ ಅವರು, ಬಿಜೆಪಿ ಮುಖಂಡರಾದ ಮಾಜಿ ನಗರಸಭೆ ಸದಸ್ಯ ಶಿವಬಸವ ವನ್ನಳ್ಳಿ ಹಾಗೂ ನಾಗರಾಜ್ ಹರಿಗೋಲ ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿ ಅಕ್ರಮ ಮತದಾನ ನಡೆದಿದೆ ಎಂದು ಆರೋಪಿಸಿದರು.

ನಾಗರಾಜ್ ಹರಿಗೋಲ ಅವರ ಇಬ್ಬರು ಪುತ್ರಿಯರು ಹಾಗೂ ಶಿವಬಸವ ವನ್ನಳ್ಳಿ ಅವರ ಅಣ್ಣನ ಮಗಳು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಈ ಮೂವರೂ ಅ. 23ರಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ. ಆದರೂ, ಅವರ ಹೆಸರಿನಲ್ಲಿ ಬೇರೆಯವರಿಂದ ಮತ ಚಲಾವಣೆಯಾಗಿರುವ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದರು.

ಮತದಾನ ಮಾಡದವರ ಹೆಸರಿನಲ್ಲಿ ಮತ ಚಲಾಯಿಸಿರುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿದೆ. ಈ ಕುರಿತು ಈಗಾಗಲೇ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಚುನಾವಣಾ ಆಯೋಗಕ್ಕೂ ದೂರು ನೀಡಲಾಗುವುದು. ಸಂಬಂಧಪಟ್ಟ ಕಂಪನಿಗಳಿಂದ ಮೂವರು ಉದ್ಯೋಗಿಗಳ ಹಾಜರಾತಿ ವಿವರಗಳನ್ನು ಪಡೆದು, ಅವರು ಮತದಾನದ ದಿನದಂದು ಕರ್ತವ್ಯದಲ್ಲಿದ್ದರೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಮನವಿ ಮಾಡಲಾಗುವುದು ಎಂದರು.

ಹಾವೇರಿ ನಗರದಲ್ಲಿ 2,400ಕ್ಕೂ ಅಧಿಕ ಮತಗಳಿರುವುದರಿಂದ ಪ್ರತಿಯೊಬ್ಬ ಮತದಾರರ ಗುರುತನ್ನು ಪರಿಶೀಲಿಸುವುದು ಚುನಾವಣಾ ಏಜೆಂಟರಿಗೆ ಕಷ್ಟಕರವಾಗಿದೆ. ಇದೇ ಅವಕಾಶವನ್ನು ಬಳಸಿಕೊಂಡು ಬಿಜೆಪಿ ಮುಖಂಡರು ಇನ್ನೂ 25ರಿಂದ 30 ಮತಗಳನ್ನು ಇದೇ ರೀತಿಯಲ್ಲಿ ಅಕ್ರಮವಾಗಿ ಚಲಾಯಿಸಿರುವ ಸಾಧ್ಯತೆಯಿದೆ ಎಂಬ ಅನುಮಾನವಿದೆ. ಈ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ದಾಖಲೆಗಳು ಲಭ್ಯವಾದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಸ್.ಎಸ್‌. ಖಾಜಿ, ಜಮೀರ್ ಜಿಗರಿ, ಸಂಜಯಗಾಂಧಿ ಸಂಜೀವಣ್ಣನವರ, ಬಸವರಾಜ ಹೆಡಿಗ್ಗೊಂಡ, ಉಮರ್ ಇನಾಮದಾರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬು ಬೆಳೆಗಾರರ ಸಭೆ ವಿಫಲ: ಪರಿಹಾರವಿಲ್ಲ
ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ₹215 ಕೋಟಿ ಅಭಿವೃದ್ಧಿ ಯೋಜನೆ!