- ನಮ್ಮನ್ನು ಎನ್‌ಕೌಂಟರ್ ಮಾಡಿ ಅಥವಾ ಸಾಮೂಹಿಕ ಆತ್ಮಹತ್ಯೆಗೆ ಅವಕಾಶ ಕೊಡಿ: ಒತ್ತಾಯ - ಹೊನ್ನೆಮರದಹಳ್ಳಿ ಗ್ರಾಮಸ್ಥರ ಮೇಲೆ ಚನ್ನಗಿರಿ ಸಿಪಿಐ ರವೀಶ್‌ಗೆ ಯಾಕಿಷ್ಟು ದ್ವೇಷ-ಅಸೂಯೆ?
ಕನ್ನಡಪ್ರಭ ವಾರ್ತೆ ದಾವಣಗೆರೆ
ವೈಯಕ್ತಿಕ ದ್ವೇಷದಿಂದ ಸುಮಾರು 40-50 ಜನರ ಮೇಲೆ ಅಮಾಯಕ ಮಹಿಳೆಯಿಂದ ಅತ್ಯಾಚಾರ, ಪ್ರಾಣ ಬೆದರಿಕೆ ಕೇಸ್ ದಾಖಲಿಸಿದ ಚನ್ನಗಿರಿ ವೃತ್ತ ನಿರೀಕ್ಷಕ ರವೀಶ್ ವಿರುದ್ಧ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗೆ ಸುಳ್ಳು ಕೇಸ್ ಹಾಕುವ ಬದಲು, ನಮ್ಮೆಲ್ಲರನ್ನೂ ಸಾಮೂಹಿಕವಾಗಿ ಎನ್‌ಕೌಂಟರ್ ಮಾಡಿ ಎಂದು ಚನ್ನಗಿರಿ ತಾಲೂಕು ಹೊನ್ನೆಮರದಹಳ್ಳಿ ಗ್ರಾಮಸ್ಥರು ಒಕ್ಕೊರಲಿನಿಂದ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥ ಬಿ.ಆರ್.ರಘು, ಚನ್ನಗಿರಿ ಪೊಲೀಸ್ ವೃತ್ತ ನಿರೀಕ್ಷಕ ರವೀಶ್ ಗ್ರಾಮದ ಸುಮಾರು 40-50 ಜನರ ವಿರುದ್ಧ ಅತ್ಯಾಚಾರ, ಕೊಲೆ ಬೆದರಿಕೆಯಂತಹ ಸುಳ್ಳು ಕೇಸ್‌ಗಳನ್ನು ಗ್ರಾಮದ ಅಮಾಯಕ ಮಹಿಳೆ ಮುಖಾಂತರ ಕೊಡಿಸಿದ್ದಾರೆ. ಅದೇ ಮಹಿಳೆ ತಮ್ಮಿಂದ ಹೀಗೆ ಸುಳ್ಳು ಕೇಸ್ ಮಾಡಿಸಿದ್ದಾರೆಂಬುದಾಗಿ ಗ್ರಾಮಸ್ಥರ ಸಮ್ಮುಖದಲ್ಲೇ ಹೇಳುತ್ತಿದ್ದಾರೆ. ಜವಾಬ್ದಾರಿಯುತ ಅಧಿಕಾರಿ ಈ ಮಟ್ಟಕ್ಕೆ ದ್ವೇಷ ಸಾಧಿಸುವುದು ಯಾವ ಕಾರಣಕ್ಕೆ ಎಂದರು.
ಕೇಸ್‌ಗೆ ಸಂಬಂಧಿಸಿದಂತೆ ನ್ಯಾಯಾಲಯ ಅಥವಾ ಪೊಲೀಸರಿಂದ ಕರೆ ಬಂದರೆ ಸ್ವಯಂಪ್ರೇರಿತರಾಗಿ ಸುಳ್ಳು ಕೇಸ್‌ನಲ್ಲಿ ಹೆಸರಿಸಲಾದ ಎಲ್ಲರೂ ವಿಚಾರಣೆಗೆ ಹಾಜರಾಗುತ್ತೇವೆ. ನಾವು ಕಾನೂನನ್ನು ಗೌರವಿಸುವವರು. ಎಲ್ಲಿಯೂ ಓಡಿ ಹೋಗುವವರಲ್ಲ. ಕಾನೂನು ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಆದರೆ, ಬಂಧನ ಅಥವಾ ವಿಚಾರಣೆಯ ಸಂದರ್ಭದಲ್ಲಿ ನಮ್ಮ ಕಾನೂನುಬದ್ಧ ಹಕ್ಕುಗಳನ್ನೂ ಗೌರವಿಸಬೇಕು. ನಮ್ಮಗಳ ಪೈಕಿ ಯಾರೊಬ್ಬರ ಮೇಲಾದರೂ ಅಕ್ರಮವಾಗಿ ಒತ್ತಡ ಹೇರುವುದು, ದೌರ್ಜನ್ಯ ಎಸಗುವುದು, ಕಾನೂನುಬಾಹಿರ ಕ್ರಮ ಕೈಗೊಂಡರೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ನೇರ ಹೊಣೆ ಎಂದು ಅವರು ಎಚ್ಚರಿಸಿದರು.
ಹೊನ್ನೇಮರದಹಳ್ಳಿ ಗ್ರಾಮದ ಮಹಿಳೆಯರು, ಗ್ರಾಮಸ್ಥರ ಮೇಲೆ ಚನ್ನಗಿರಿ ಪೊಲೀಸ್ ಇನ್ಸ್‌ಪೆಕ್ಟರ್ ರವೀಶ್ ಈಚೆಗೆ ನಡೆಸಿದ ದೌರ್ಜನ್ಯ ಖಂಡಿಸಿ ಈವರೆಗೆ ನೀಡಿದ ದೂರುಗಳ ಮೇಲೆ ಯಾವುದೇ ಕ್ರಮವಾಗಿಲ್ಲ. ಗ್ರಾಮಸ್ಥರು ಆರ್‌ಟಿಐ ಮೂಲಕ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ಕೇಳಿದಾಗ, ಗ್ರಾಮಸ್ಥರ ಮೇಲೆಯೇ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಪ್ರಕರಣ ದಾಖಲು ಮಾಡಿಸಿದ್ದಾರೆ ಎಂದು ಆರೋಪಿಸಿದರು.
ಹೊನ್ನೇಮರದಹಳ್ಳಿ ವಾಸಿಗಳಾದ ಎಸ್.ಆರ್. ಶಾಂತವೀರಪ್ಪ, ಎಲ್.ಎಸ್.ಚಂದ್ರಪ್ಪ, ಜಿ.ಬಿ.ರುದ್ರೇಶ, ಬಿ.ಜೆ.ಶಿವರಾಜ, ಬಿ.ಆರ್. ವೀರಭದ್ರಪ್ಪ, ಜಿ.ಎಸ್. ರವಿ, ಬಿ.ಟಿ.ಮಧು, ಎನ್.ಕೆ. ಮಹೇಂದ್ರ, ಜೆ.ಆರ್.ಚೇತನ್, ಎಚ್.ವಿ.ರಂಗನಾಥ, ಎಲ್.ಎಸ್.ಸಿದ್ದೇಶ, ಖಾದರ್, ಆರ್.ಎಂ.ಸಂಜು, ಎ.ಸಿ.ಸಾಗರ್, ಸಂಜಯ್ ಇತರರು ಇದ್ದರು.
(ಬಾಕ್ಸ್) * ನಾವೆಲ್ಲರೂ ಅನುಮತಿ ಪಡೆದು ಸಾವಿಗೆ ಶರಣಾಗ್ತೇವೆ ರಾಷ್ಟ್ರಪತಿ, ರಾಜ್ಯಪಾಲರು, ಸುಪ್ರೀಂ ಕೋರ್ಟ್, ಹೈಕೋರ್ಟ್, ಜಿಲ್ಲಾ, ತಾಲೂಕು ನ್ಯಾಯಮೂರ್ತಿಗಳು, ಪ್ರಧಾನಿ, ಸಿಎಂ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಮಾನವ ಹಕ್ಕುಗಳ ಆಯೋಗ, ರಾಷ್ಟ್ರೀಯ ಮಹಿಳಾ ಆಯೋಗ ಸೇರಿದಂತೆ ಸಂಬಂಧಿಸಿದ ಇತರೆ ಇಲಾಖೆಗೆ ಪತ್ರ ಬರೆಯುತ್ತಿದ್ದೇವೆ. ನಮ್ಮ ಪ್ರಕರಣದ ಕಾನೂನಾತ್ಮಕ ಪ್ರಕ್ರಿಯೆಗೆ ಸಾರ್ವಜನಿಕ ಹಣ ವ್ಯಯಿಸುವುದು ಬೇಡ, ನ್ಯಾಯಾಲಯದ ಸಮಯ ಹಾಳು ಮಾಡುವುದೂ ಬೇಡ. ಸುಳ್ಳು ಕೇಸಿನಿಂದಾಗಿ ನಮ್ಮನ್ನು ಜೈಲಿನಲ್ಲಿಟ್ಟು ಊಟ ಹಾಕುವುದೂ ಬೇಡ. ಬದಲಿಗೆ ಈ ಹಣವನ್ನು ದೌರ್ಜನ್ಯಕ್ಕೆ ಒಳಗಾಗುವ ಹೆಣ್ಣುಮಕ್ಕಳ ಭವಿಷ್ಯಕ್ಕೆ ಬಳಸಲಿ. ನಮ್ಮ ಆಸ್ತಿಗಳನ್ನೂ ಸರ್ಕಾರದ ಹೆಸರಿಗೆ ಬರೆದು, ನಾವೆಲ್ಲರೂ ಅನುಮತಿ ಪಡೆದು ಸಾವಿಗೆ ಶರಣಾಗಲು ನಿರ್ಧರಿಸಿದ್ದೇವೆ ಎಂದು ಯುವಕ ಬಿ.ಆರ್.ರಘು ಹೇಳಿದರು.
-23ಕೆಡಿವಿಜಿ5: ದಾವಣಗೆರೆಯಲ್ಲಿ ಮಂಗಳವಾರ ಚನ್ನಗಿರಿ ತಾ. ಹೊನ್ನೆಮರದಹಳ್ಳಿ ಗ್ರಾಮಸ್ಥರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.