
ವಿಘ್ನೇಶ್ ಎಂ. ಭೂತನಕಾಡು/ದುಗ್ಗಳ ಸದಾನಂದ ನಾಪೋಕ್ಲುಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಹಾಕಿ ಪಂದ್ಯ ಚೇನಂಡ ಕಪ್ ಹಾಕಿ ಉತ್ಸವದಲ್ಲಿ ಕುಲ್ಲೇಟಿರ ಕುಟುಂಬ ಚಾಂಪಿಯನ್ ಪ್ರಶಸ್ತಿ ಗಳಿಸಿತು.
ನಾಪೋಕ್ಲುವಿನವರೇ ಆದ ಕುಲ್ಲೇಟಿರ ತಂಡ 3-1 ಗೋಲುಗಳನ್ನು ಗಳಿಸುವ ಮೂಲಕ ಚೆಪ್ಪುಡಿರ ತಂಡವನ್ನು ಸೋಲಿಸಿತು. ಪಂದ್ಯದ ಆರಂಭದಲ್ಲಿ ಉತ್ಸಾಹದಿಂದ ಆಡಿದ ಚೆಪ್ಪುಡಿರ ತಂಡದ ಆಟಗಾರರು ಕೊನೆಯಲ್ಲಿ ಗೋಲು ದಾಖಲಿಸುವಲ್ಲಿ ಎಡವಿದರು.
ಪಂದ್ಯದ ಮೊದಲಾರ್ಧದಲ್ಲಿ ಚೆಪ್ಪುಡಿರ ತಂಡಕ್ಕೆ ಎರಡು ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕರೂ ಕೂಡ ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಕುಲ್ಲೇಟಿರ ತಂಡದ ಗೋಲ್ ಕೀಪರ್ ಅದ್ಬುತ ವಾಗಿ ತಡೆಯುವಲ್ಲಿ ಯಶಸ್ವಿಯಾದರು. ಪಂದ್ಯದಲ್ಲಿ ಸುಮಾರು 7 ಪೆನಾಲ್ಟಿ ಕಾರ್ನರ್ ಅವಕಾಶ ದೊರಕಿದರೂ ಕೂಡ ಚೆಪ್ಪುಡಿರ ತಂಡ ಅದನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಯಿತು.ಕುಲ್ಲೇಟಿರ ತಂಡದ ಪರ ರೋಷನ್ ಲೋಕೇಶ್, ಅವನೀಶ್ ಮಂದಪ್ಪ ಹಾಗೂ ಶುಭಂ ಚೆಟ್ಟಿಯಪ್ಪ ಅವರು ತಲಾ ಒಂದೊಂದು ಗೋಲು ಗಳಿಸಿದರೆ, ಚೆಪ್ಪುಡಿರ ಪರ ವಚನ್ ಚಿಣ್ಣಪ್ಪ ಒಂದು ಗೋಲು ಗಳಿಸಿದರು.ವಿನ್ನರ್ಸ್ ಪ್ರಶಸ್ತಿ ಗಳಿಸಿ ಕುಲ್ಲೇಟಿರ ತಂಡಕ್ಕೆ ರು.3 ಲಕ್ಷ ನಗದು ಹಾಗೂ ಟ್ರೋಫಿ, ಕೊಡವ ಹಾಕಿ ಅಕಾಡೆಮಿಯ ಬೆಳ್ಳಿ ರೋಲಿಂಗ್ ಟ್ರೋಫಿ, ದ್ವಿತೀಯ ಬಹುಮಾನಿತ ಚೆಪ್ಪುಡರ ತಂಡಕ್ಕೆ ರು.2 ಲಕ್ಷ ನಗದು ಹಾಗೂ ಟ್ರೋಫಿಯನ್ನು ವಿತರಿಸಲಾಯಿತು.2027ರಲ್ಲಿ ಅಜ್ಜಿಕುಟ್ಟೀರ ಕಪ್: 27ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಅಜ್ಜಿಕುಟ್ಟೀರ ಕುಟುಂಬಸ್ಥರ ಮುಂದಾಳತ್ವದಲ್ಲಿ ಪೊನ್ನಂಪೇಟೆ ತಾಲೂಕಿನ ಹುದಿಕೇರಿಯಲ್ಲಿ ನಡೆಯಲಿದ್ದು, ನಾಪೋಕ್ಲುವಿನ ಮೈದಾನದಲ್ಲಿ ಅಜ್ಜಿಕುಟ್ಟೀರ ಕುಟುಂಬಸ್ಥರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಮೆರವಣಿಗೆ ನಡೆಸಿ ತಮ್ಮ ಕುಟುಂಬದ ಒಗ್ಗಟ್ಟು ಪ್ರದರ್ಶಿಸಿದರು. ಈ ಸಂದರ್ಭ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಮೆರವಣಿಯಲ್ಲಿ ಸಾಗಿದರು. ನಂತರ ಕುಟುಂಬಸ್ಥರು ಮೈದಾನದಲ್ಲಿ ವಾಲಗಕ್ಕೆ ನೃತ್ಯ ಮಾಡಿ ಸಂಭ್ರಮಿಸಿದರು. ಫೈನಲ್ ಪಂದ್ಯದ ಕೊನೆಯಲ್ಲಿ ಪ್ರಶಸ್ತಿ ವಿತರಣೆ ಬಳಿಕ ಕೊಡವ ಹಾಕಿ ಅಕಾಡೆಮಿಯ ಪ್ರಮುಖರು ಅಜ್ಜಿಕುಟ್ಟೀರ ಕುಟುಂಬಸ್ಥರಿಗೆ ಧ್ವಜ ಹಸ್ತಾಂತರವನ್ನು ಮಾಡುವ ಮೂಲಕ ಮುಂದಿನ ಬಾರಿ ಹಾಕಿ ನಡೆಸಲು ಜವಾಬ್ದಾರಿ ನೀಡಿದರು.ಪರದಂಡ ತಂಡಕ್ಕೆ ತೃತೀಯ ಬಹುಮಾನ: ಚೇನಂಡ ಕಪ್ ನಲ್ಲಿ ತೃತೀಯ ಸ್ಥಾನಕ್ಕಾಗಿ ಶನಿವಾರ ಬೆಳಗ್ಗೆ ನಡೆದ ಪಂದ್ಯದಲ್ಲಿ ಪರದಂಡ ತಂಡ ಪಳಂಗಂಡ ತಂಡವನ್ನು 1-0 ಗೋಲಿನಿಂದ ಸೋಲಿಸಿತು. ವಿಜೇತ ತಂಡದ ಪರ ಅಮನ್ ಕುಶಾಲಪ್ಪ ಒಂದು ಗೋಲು ಬಾರಿಸಿದರು. ತೃತೀಯ ಹಾಗೂ ನಾಲ್ಕನೇ ಬಹುಮಾನ ಪಡೆದ ವಿಜೇತರಿಗೆ ತಲಾ ಒಂದು ಲಕ್ಷ ರು. ನಗದು ಹಾಗೂ ಟ್ರೋಫಿಯನ್ನು ವಿತರಿಸಲಾಯಿತು.
18 ಜನ ಒಲಂಪಿಯನ್ ನೀಡಿದ ಈ ಕೊಡವ ಭೂಮಿಗೆ ವಂದನೀಯ. ಕ್ರೀಡಾ ಪ್ರತಿಭೆಗಳಿರುವ ಕೊಡಗಿಗೆ ಪ್ರೋತ್ಸಾಹ ನೀಡುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ಸಚಿವರು ಹೇಳಿದರು.
ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಬೋಪಣ್ಣ ಮಾತನಾಡಿ 1997ರಲ್ಲಿ ಪಾಂಡಂಡ ಕುಟ್ಟಣಿ ಅವರು ಆರಂಭಿಸಿದರು. ಅಂದು 60 ಕುಟುಂಬ ಪಾಲ್ಗೊಂಡಿತ್ತು. ಇಂದು 300ಕ್ಕೂ ಅಧಿಕ ಕುಟುಂಬಗಳು ಪಾಲ್ಗೊಳುತ್ತಿದೆ. ರಾಜ್ಯ ಸರ್ಕಾರ ಈಗಾಗಲೇ ಹಾಕಿ ಉತ್ಸವಕ್ಕೆ ಅನುದಾನ ನೀಡುತ್ತಿದೆ. ಅದರಂತೆ ಕೇಂದ್ರ ಸರ್ಕಾರ ಕೂಡ ಅನುದಾನ ನೀಡುವಂತೆ ಮನವಿ ಮಾಡಿದರು.
ಕೇಂದ್ರದ ಕ್ರೀಡಾ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ ಶಾಸಕ ಎ.ಎಸ್. ಪೊನ್ನಣ್ಣ:ಕೇಂದ್ರ ಕ್ರೀಡಾ ಸಚಿವ ಮಾನ್ಸೂಕ್ ಮಾಂಡವಿಯ ಅವರಿಗೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಕೊಡಗಿನ ಕ್ರೀಡಾ ಕ್ಷೇತ್ರಕ್ಕೆ ಅನುದಾನ ಹಾಗೂ ವಿಶೇಷ ಯೋಜನೆ ಘೋಷಿಸುವಂತೆ ಮನವಿ ಪತ್ರವನ್ನು ಸಲ್ಲಿಸಿದರು.ಈ ಸಂದರ್ಭ ಮಾತನಾಡಿದ ಪೊನ್ನಣ್ಣ ಅವರು ಹಾಕಿ, ಬ್ಯಾಡ್ಮಿಂಟನ್ ಸೇರಿ ಹಲವು ಕ್ರೀಡೆಯಲ್ಲಿ ಕೊಡಗಿನವರು ಪಾಲ್ಗೊಂಡು ಸಾಧನೆ ಮಾಡಿದ್ದಾರೆ. ಪುಟ್ಟ ಜಿಲ್ಲೆ ಕೊಡಗಿನ ಸುಮಾರು 18 ಮಂದಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಾಧನೆ ಮಾಡಿದ್ದಾರೆ ಎಂದರು.ವಿ. ಬಾಡಗದಲ್ಲಿ ಕ್ರೀಡಾ ತರಬೇತಿ ಕೇಂದ್ರ ನಿರ್ಮಾಣ ಆಗುತ್ತಿದೆ. ಹಲವು ಕ್ರೀಡೆಗಳ ತರಬೇತಿ ಹಾಗೂ ವಸತಿ ವ್ಯವಸ್ಥೆ ಇದೆ. ಈಗಾಗಲೇ ರಾಜ್ಯ ಸರ್ಕಾರದ ಅನುದಾನದಲ್ಲಿ ಕೆಲಸ ನಡೆಯುತ್ತಿದೆ. ಅದರಂತೆ ಕೇಂದ್ರ ಸರ್ಕಾರದಿಂದಲೂ ಕೂಡ ಅನುದಾನ ನೀಡುವಂತೆ ಮನವಿ ಮಾಡಿದರು.
ಕುಲ್ಲೇಟಿರ ಕುಟುಂಬವು ಕೊಡವ ಕೌಟುಂಬಿಕ ಹಾಕಿ ಉತ್ಸವದ ಇತಿಹಾಸದಲ್ಲಿ ಇದೀಗ ನಾಲ್ಕನೇ ಬಾರಿ ಚಾಂಪಿಯನ್ ಆಗಿದೆ. 2026ರ ಚೇನಂಡ ಕಪ್ ನಲ್ಲಿ ವಿನ್ನರ್ಸ್, 1998ರಲ್ಲಿ ಕಡಂಗದಲ್ಲಿ ನಡೆದ ಕೋಡಿರ ಕಪ್, 1999ರಲ್ಲಿ ಕಾಕೋಟುಪರಂಬಿನಲ್ಲಿ ನಡೆದ ಬಲ್ಲಚಂಡ ಕಪ್ ಹಾಗೂ 2002ರಲ್ಲಿ ಹುದಿಕೇರಿಯಲ್ಲಿ ನಡೆದ ಚೆಕ್ಕೇರ ಕಪ್ ನಲ್ಲಿ ಕೂಡ ವಿನ್ನರ್ಸ್ ಪ್ರಶಸ್ತಿ ಗಳಿಸಿತು. 2018ರಲ್ಲಿ ನಾಪೋಕ್ಲುವಿನಲ್ಲಿ 22ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ಆಯೋಜಿಸಿತ್ತು.