ಚಿತ್ರದುರ್ಗ: ಪಾಶ್ಚಿಮಾತ್ಯ ದೇಶದಲ್ಲಿ ಕುಟುಂಬಗಳು ಇಲ್ಲ. ಭಾರತ ದೇಶದಲ್ಲಿ ಮಾತ್ರ ಕುಟುಂಬ ವ್ಯವಸ್ಥೆಯನ್ನು ಕಾಣಲು ಸಾಧ್ಯವಿದೆ. ಇದು ನಮ್ಮ ಮಣ್ಣಿನ ಗುಣವಾಗಿದೆ. ಅದರಲ್ಲೂ ನಮ್ಮಲ್ಲಿ ಅವಿಭಕ್ತ ಕುಟುಂಬಗಳು ಹೆಚ್ಚಾಗಿವೆ ಎಂದು ಎರಡನೇ ಸಿವಿಲ್ ನ್ಯಾಯಾಧೀಶರಾದ ಉಜ್ವಲ್ ವೀರಣ್ಣ ತಿಳಿಸಿದರು.
ಹಿಂದಿನ ಕಾಲದಲ್ಲಿ ಒಂದು ಮನೆಯಲ್ಲಿ 25 ರಿಂದ 30 ಜನ ವಾಸ ಮಾಡುತ್ತಿದ್ದರು. ಇದರಲ್ಲಿ 5 ರಿಂದ 6 ತಲೆಮಾರು ಜನಾಂಗ ಇತ್ತು. ಆದರೆ ಇಂದಿನ ದಿನಮಾನದಲ್ಲಿ ಕುಟುಂಬ ವ್ಯವಸ್ಥೆ ಕ್ಷೀಣಿಸುತ್ತಿದೆ. ಕುಟುಂಬಗಳಲ್ಲಿ ವ್ಯಾಜ್ಯಗಳು ಹೆಚ್ಚಾಗಿವೆ. ನ್ಯಾಯಾಲಯದಲ್ಲಿಯೂ ಕುಟುಂಬದ ವ್ಯಾಜ್ಯಗಳ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಎಂದು ವಿಷಾದಿಸಿದರು.
ಇಂದು ನಮ್ಮ ಮಕ್ಕಳಿಗೆ ಜೀವನ ಶೈಲಿಯನ್ನು ಸರಿಯಾದ ರೀತಿಯಲ್ಲಿ ಕಲಿಸುತ್ತಿಲ್ಲ. ಪೋಷಕರು ಮಕ್ಕಳನ್ನು ಅಂಕಗಳನ್ನು ಗಳಿಸುವ ಯಂತ್ರಗಳನ್ನಾಗಿ ಮಾಡುತ್ತಿದ್ದಾರೆ. ಅವರಿಗೆ ಸರಿಯಾದ ರೀತಿಯಲ್ಲಿ ಸಂಸ್ಕಾರವನ್ನು ಕಲಿಸುತ್ತಿಲ್ಲ. ಕುಟುಂಬ ಎಂದರೆ ಏನು ಎಂಬುದನ್ನು ಹೇಳಿಕೊಡುತ್ತಿಲ್ಲ. 100 ಕುಟುಂಬಗಳು ಒಂದು ಸಮಾಜವನ್ನು ನಿರ್ಮಾಣ ಮಾಡುತ್ತವೆ ಎಂದು ಹೇಳಿದರು.ಭಾರತ ದೇಶದಲ್ಲಿ ಕುಟುಂಬದ ಮಹತ್ವವನ್ನು ತಿಳಿಯಬೇಕಿದೆ. ನಮ್ಮಲ್ಲಿನ ಆಚಾರ, ವಿಚಾರ, ಸಂಪ್ರದಾಯ, ರೀತಿ, ರಿವಾಜು, ಉಡುಗೆ, ಹಬ್ಬಗಳು, ಆಹಾರ ಪದ್ಧತಿ ಇವೆಲ್ಲಾ ಕುಟುಂಬದ ಜೀವನ ಶೈಲಿಗಳಾಗಿವೆ. ವಿದೇಶಿ ಜನತೆ ನಮ್ಮ ದೇಶದ ಜೀವನ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಆದರೆ ನಾವು ನಮ್ಮ ಪುರಾತನವಾದ ಪದ್ಧತಿಯನ್ನು ಬಿಟ್ಟು ವಿದೇಶಿ ಸಂಸ್ಕೃತಿ ಸಂಪ್ರದಾಯವನ್ನು ಅನುಕರಣೆ ಮಾಡುತ್ತಿರುವುದು ದುರಂತದ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ನಾವು ಇಂದ್ರಿಯಗಳನ್ನು ನಿಗ್ರಹಿಸಬೇಕಿದೆ. ಆಗ ಮಾತ್ರ ನಮ್ಮಲ್ಲಿ ಸಮತೋಲನವಾದ ಕುಟುಂಬಗಳು ಇರಲು ಸಾಧ್ಯವಿದೆ. ಹೆಚ್ಚಾಗಿ ಮೊಬೈಲ್ ನೋಡುವುದರಿಂದ ಕಣ್ಣಿಗೆ ತೊಂದರೆಯಾಗುತ್ತದೆ. ಇದನ್ನು ನಿಯಂತ್ರಿಸಬೇಕಿದೆ. ರಾತ್ರಿ ಮಲಗುವ ಮುನ್ನ ಧ್ಯಾನ ಮಾಡುವುದರಿಂದ ದೇಹವನ್ನು ಸಮತೋಲನಕ್ಕೆ ತರಬಹುದು. ಇದರಿಂದ ಮನಸ್ಸು ಪ್ರಶಾಂತವಾಗುತ್ತದೆ ಎಂದ ಅವರು, ಸ್ವದೇಶಿ ವಸ್ತುಗಳನ್ನು ಬಳಸುವುದರಿಂದ ಮನೆಯಲ್ಲಿನ ವಸ್ತುಗಳನ್ನೇ ಬಳಕೆ ಮಾಡಿದಂತೆ ಆಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ವದೇಶಿ ಮೇಳದ ಸಂಘಟಕ ಜಗದೀಶ್, ಸಂಯೋಜಕ ಕೆ.ಎಸ್.ನವೀನ್, ಸಂಚಾಲಕರಾದ ಸೌಭಾಗ್ಯ ಬಸವರಾಜನ್, ಮಲ್ಲಿಕಾರ್ಜುನ್, ಗಾಯಿತ್ರಿ ಶಿವರಾಮ್, ನಾಗರಾಜ್ ಸಂಗಂ, ಮಲ್ಲಿಕಾರ್ಜುನ್, ವೆಂಕಟೇಶ್ ಯಾದವ್, ಬಸಮ್ಮ ಮುಂತಾದವರು ಹಾಜರಿದ್ದರು.