ಹಿರಿಯೂರು: ಸಹಕಾರ ಕ್ಷೇತ್ರದಲ್ಲಿ ಚಿತ್ರದುರ್ಗ ಜಿಲ್ಲೆ ಇನ್ನಷ್ಟು ಬಲಿಷ್ಠವಾಗಿ ಬೆಳೆಯಬೇಕು. ನಾವು ಪ್ರತಿ ವರ್ಷ ಪ್ರಗತಿಯತ್ತ ಸಾಗೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಕರೆ ನೀಡಿದರು.
ನಗರದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಡಿಸಿಸಿ ಬ್ಯಾಂಕ್, ಕೃಷಿ ಪತ್ತಿನ ಸಹಕಾರ ಸಂಘ, ಪಿಎಲ್‌ಡಿ ಮತ್ತು ಟಿಎಪಿಸಿಎಂಎಸ್, ಸಹಕಾರ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ, ಹಾಲು ಉತ್ಪಾದಕರ ಸಂಘ ಹಾಗೂ ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ರೈತರು ಮತ್ತು ಸಾಮಾನ್ಯ ಜನರ ಹಿತಕ್ಕಾಗಿ ಸಹಕಾರ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಸಹಕಾರ ಸಂಘಗಳು ರೈತರಿಗೆ ಕಾಲಕಾಲಕ್ಕೆ ಸಾಲ ಸೌಲಭ್ಯ ನೀಡಿ ರೈತರ ಬೆನ್ನೆಲುಬಾಗಿ ನಿಂತಿವೆ. ಸಹಕಾರ ಸಂಸ್ಥೆಗಳು ಬೆಳೆಯುವುದರಿಂದ ರೈತರ ಬದುಕು ಸುಧಾರಣೆಗೊಳ್ಳುತ್ತದೆ. ರೈತರ ಸುಧಾರಣೆಯಿಂದ ದೇಶದ ಅಭಿವೃದ್ಧಿ ಸಾಧ್ಯವಿರುವುದರಿಂದ ಇಂತಹ ಕಾರ್ಯಕ್ರಮಗಳ ಆಯೋಜನೆ ಮಾಡಿ ಸಹಕಾರಿ ಸದಸ್ಯರನ್ನು ಪ್ರೋತ್ಸಾಹಿಸಬೇಕಿದೆ ಎಂದರು.
ಸಹಕಾರಿ ಸಂಘಗಳಿಗೆ ನೂರಾರು ವರ್ಷದ ಇತಿಹಾಸವಿದ್ದು, ಜವಾಹರ್‌ಲಾಲ್ ನೆಹರೂ ಅವರು ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಅಪಾರ ಕಾಣಿಕೆ ನೀಡಿದ್ದಾರೆ. ಸಹಕಾರಿ ಸಪ್ತಾಹ ಕಾರ್ಯಕ್ರಮ ಆಯೋಜನೆ ಹರ್ಷ ತಂದಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.ಶಿಮುಲ್ ಹಾಗೂ ಯೂನಿಯನ್ ನಿರ್ದೇಶಕ ಬಿ.ಸಿ.ಸಂಜೀವಮೂರ್ತಿ ಮಾತನಾಡಿ, ತಾಲೂಕಿನಲ್ಲಿ 65 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಪ್ರತಿದಿನ 45 ಸಾವಿರ ಲೀಟರ್ ಗುಣಮಟ್ಟದ ಹಾಲು ಉತ್ಪಾದನೆಯಾಗುತ್ತಿದೆ. ಇದರಿಂದ ಸುಮಾರು 6 ಸಾವಿರ ಕುಟುಂಬಗಳು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿವೆ. ನಾವು ಶಿಮುಲ್ ಆಡಳಿತಕ್ಕೆ ಬರುವ ಮುನ್ನ ತಾಲೂಕಿನಲ್ಲಿ 54 ಸಂಘಗಳಿದ್ದವು. 11 ನೂತನ ಹಾಲು ಉತ್ಪಾದಕರ ಸಂಘಗಳನ್ನು ಪುನಃ ಹಾಗೂ ಹೊಸದಾಗಿ ಪ್ರಾರಂಭಿಸಿದ್ದು, 100 ಹಾಲು ಉತ್ಪಾದಕರ ಸಂಘಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಹೈನುಗಾರಿಕೆ ಹೆಚ್ಚಿಸಲು ರೈತರಿಗೆ ಹಸು ಕೊಂಡುಕೊಳ್ಳಲು ಕೃಷಿ ಪದ್ಧತಿ ಸಹಕಾರ ಸಂಘಗಳು ಶೂನ್ಯ ದರದಲ್ಲಿ ಸಾಲ ಕೊಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಜಗದೀಶ್ ಕಂದಿಕೆರೆ, ತಾಲೂಕಿನಲ್ಲಿ ಸಹಕಾರ ಸಂಘಗಳ ಸಂಘಟನೆಯ ಹಿತದೃಷ್ಟಿಯಿಂದ ತಾಲೂಕು ಸಹಕಾರಿ ಯೂನಿಯನ್ ರಚನೆ ಮಾಡುವುದು ಹಾಗೂ ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಸಂಘಟನೆ ರಚಿಸುವ ಉದ್ದೇಶದಿಂದ ತಾಲೂಕಿನ 121 ಸಹಕಾರಿಗಳನ್ನು ಸನ್ಮಾನಿಸಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ನೀಡಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥ್ ಮಾಳಿಗೆ, ಶಿಮುಲ್ ನಿರ್ದೇಶಕ ಜಿ.ಬಿ.ಶೇಖರಪ್ಪ, ಜಿಲ್ಲಾ ಯೂನಿಯನ್ ಉಪಾಧ್ಯಕ್ಷ ರವಿಕುಮಾರ್, ಸಹಕಾರ ಸಂಘದ ಉಪನಿಬಂಧಕ ದಿಲೀಪ್ ಕುಮಾರ್, ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕ ಶಿವಮೂರ್ತಿ, ಆಲೂರು ಹನುಮಂತರಾಯಪ್ಪ, ಯೂನಿಯನ್ ನಿರ್ದೇಶಕ ಈರಲಿಂಗೇಗೌಡ ಮಾತನಾಡಿದರು.
ಈ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಹರ್ಷ, ನಗರಸಭೆ ಪೌರಾಯುಕ್ತ ಎ.ವಾಸಿಂ, ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಶಿವಕುಮಾರ್, ಮಹಾಲಿಂಗಪ್ಪ, ಕೃಷ್ಣಮೂರ್ತಿ, ಅಜಯ್ ಕುಮಾರ್, ಮಾನಸ ಮಂಜುನಾಥ್, ಕಲ್ಪನಾ, ಈಶ ರೈತ ಉತ್ಪಾದಕ ಸಂಸ್ಥೆ ಅಧ್ಯಕ್ಷೆ ಆರ್.ಸರಸ್ವತಿ, ಹಿರಿಯ ಸಹಕಾರಿಗಳಾದ ಎಲ್.ತಿಪ್ಪೇಸ್ವಾಮಿ, ಆಲೂರು ಸಿದ್ದರಾಮಣ್ಣ, ಉಮಾಶಂಕರ್, ಎಂ.ಎಸ್.ರಾಘವೇಂದ್ರ, ಎಸ್.ಜೆ.ಹನುಮಂತರಾಯ, ಕೀರ್ತಿ ಕುಮಾರಿ, ಶಂಕರಮೂರ್ತಿ, ಸಾದತ್ ಉಲ್ಲಾ, ಎಂ.ಕೆ.ಲಕ್ಷ್ಮಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು, ಕ್ರೆಡಿಟ್ ಸೊಸೈಟಿಗಳು, ಟಿಎಪಿಸಿಎಂಎಸ್, ಪಿಎಲ್‌ಡಿ ಬ್ಯಾಂಕ್ ಹಾಗೂ ಸೌಹಾರ್ದ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿಯ ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ಮಹಿಳಾ ಸಂಘದ ಸದಸ್ಯರು, ಸಿಬ್ಬಂದಿ ಹಾಜರಿದ್ದರು.ಇದೇ ವೇಳೆ ಗಣ್ಯರು, ಸಹಕಾರಿ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಹಿರಿಯ ಸಹಕಾರಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.