ತೆಂಕು-ಬಡಗಿನ ಖ್ಯಾತ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ಇನ್ನಿಲ್ಲ

KannadaprabhaNewsNetwork |  
Published : Jun 22, 2025, 01:18 AM IST
ಮುಖ್ಯಪ್ರಾಣ ಕಿನ್ನಿಗೋಳಿ | Kannada Prabha

ಸಾರಾಂಶ

ಪೌರಾಣಿಕ ಪ್ರಸಂಗಗಳಲ್ಲಿ ಬಾವುಕ, ರಜಕ, ನಾರದ, ವಿಜಯ, ವೃದ್ಧಬ್ರಾಹ್ಮಣ, ಕಂದರ, ಮಂಥರೆ, ವಿದ್ಯುಜ್ಜಿಹ, ಶನಿ ಪೀಡಿತ ವಿಕ್ರಮ ಮುಂತಾದ ಪಾತ್ರಗಳು, ಕಾಲ್ಪನಿಕ ಪ್ರಸಂಗಗಳಲ್ಲಿ ಚೆಲುವೆ, ಚಿತ್ರಾವತಿಯ ಅಡಗೂಲಜ್ಜಿ ಮತ್ತು ಮುರಳಿ ಶೂದ್ರ ತಪಸ್ವಿನಿಯ ರಂಗಾಚಾರಿ, ಕಾಂಚನ ಶ್ರೀಯ ಪ್ರೇತ, ಸ್ವಪ್ನ ಸಾಮ್ರಾಜ್ಯದ ಶೂರ ಸೇನ ಹಾಗೂ ಕಲಿಕ್ರೋಧನದ ಮಡಿವಾಳ, ನಾಗಶ್ರೀಯ ಕೈರವನ ಪಾತ್ರಗಳ ಮೂಲಕ ಅಪಾರ ಜನ ಮೆಚ್ಚುಗೆಯನ್ನು ಪಡೆದಿದ್ದವು.

ಕನ್ನಡಪ್ರಭ ವಾರ್ತೆ ಮೂಲ್ಕಿ

ತೆಂಕು ಬಡಗಿನ ಖ್ಯಾತ ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ (84) ಶನಿವಾರ ರಾತ್ರಿ ನಿಧನರಾದರು.

೫೮ ವರುಷಗಳಿಗೂ ಮಿಕ್ಕಿ ತೆಂಕು-ಬಡಗು ಯಕ್ಷಗಾನ ಕ್ಷೇತ್ರದಲ್ಲಿ ಸಾಧಕ ಕಲಾವಿದರಾಗಿ, ಕಟೀಲು ಮೇಳ, ಇರಾ, ಸುಬ್ರಹ್ಮಣ್ಯ, ಪೆರ್ಡೂರು, ಸಾಲಿಗ್ರಾಮ, ಮಂದಾರ್ತಿ, ಕದ್ರಿ ಮೇಳದಲ್ಲಿ ತಿರುಗಾಟ ಮಾಡಿದ್ದರು.

ಕಿನ್ನಿಗೋಳಿಯ ಸಮೀಪದ ಶಿಮಂತೂರು ಉದಯಗಿರಿಯ ನಿವಾಸಿಯಾಗಿದ್ದ ಅವರು ಪತ್ನಿ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.

ಪೌರಾಣಿಕ ಪ್ರಸಂಗಗಳಲ್ಲಿ ಬಾವುಕ, ರಜಕ, ನಾರದ, ವಿಜಯ, ವೃದ್ಧಬ್ರಾಹ್ಮಣ, ಕಂದರ, ಮಂಥರೆ, ವಿದ್ಯುಜ್ಜಿಹ, ಶನಿ ಪೀಡಿತ ವಿಕ್ರಮ ಮುಂತಾದ ಪಾತ್ರಗಳು, ಕಾಲ್ಪನಿಕ ಪ್ರಸಂಗಗಳಲ್ಲಿ ಚೆಲುವೆ, ಚಿತ್ರಾವತಿಯ ಅಡಗೂಲಜ್ಜಿ ಮತ್ತು ಮುರಳಿ ಶೂದ್ರ ತಪಸ್ವಿನಿಯ ರಂಗಾಚಾರಿ, ಕಾಂಚನ ಶ್ರೀಯ ಪ್ರೇತ, ಸ್ವಪ್ನ ಸಾಮ್ರಾಜ್ಯದ ಶೂರ ಸೇನ ಹಾಗೂ ಕಲಿಕ್ರೋಧನದ ಮಡಿವಾಳ, ನಾಗಶ್ರೀಯ ಕೈರವನ ಪಾತ್ರಗಳ ಮೂಲಕ ಅಪಾರ ಜನ ಮೆಚ್ಚುಗೆಯನ್ನು ಪಡೆದಿದ್ದವು.ಯಕ್ಷಗಾನ ಇಲ್ಲದ ಸಂದರ್ಭದಲ್ಲಿ ಮನೆಯಲ್ಲೇ ಕೈಮಗ್ಗದಲ್ಲಿ ದುಡಿಯುತ್ತಿದ್ದರು. ಯಕ್ಷಗಾನ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ದ.ಕ ಜಿಲ್ಲಾ ಸಾಹಿತ್ಯ ಪರಿಷತ್ತು ರಾಜ್ಯೋತ್ಸವ ಪ್ರಶಸ್ತಿ, ದ.ಕ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ, ಉಡುಪಿ ಕಲಾರಂಗದ ನಿಟ್ಟೂರು ಸುಂದರ ಶೆಟ್ಟಿ ಪ್ರಶಸ್ತಿ, ಹಾಗೂ ಕರ್ನಾಟಕ ಬಯಲಾಟ ಅಕಾಡೆಮಿ, ಕೋಡಿಮನೆ ವಾಸುಭಟ್ಟ ಪುರಸ್ಕಾರ ಸೇರಿದಂತೆ ನೂರಾರು ಸಂಮಾನ, ಗೌರವಗಳು ಸಂದಿದ್ದವು.

ಕಿನ್ನಿಗೋಳಿಯ ಗೋಳಿಜೋರದ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾಸಂಘದಲ್ಲಿ ಹವ್ಯಾಸಿ ವೇಷಧಾರಿಯಾಗಿ ತೊಡಗಿಕೊಂಡರು. ಯಕ್ಷಗಾನ ಕಲಾಧ್ಯಯನವನ್ನು ಗುರು ಮುಖೇನ ಕಲಿತ ಇವರಿಗೆ ಕವಿ ವಿದ್ವಾಂಸ, ಶಿಮಂತೂರು ನಾರಾಯಣ ಶೆಟ್ಟಿ ಗುರುಗಳು. ಮಿಜಾರು ಅಣ್ಣಪ್ಪ ಅವರಿಂದಲೂ ಮಾರ್ಗದರ್ಶನ ಪಡೆದ ಮುಖ್ಯಪ್ರಾಣ ಅವರು ಉಭಯ ತಿಟ್ಟುಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ತೆಂಕು ಹಾಗೂ ಬಡಗು ಎರಡೂ ತಿಟ್ಟಿನ ಪ್ರಸಿದ್ಧ ಯಕ್ಷಗಾನ ಮೇಳಗಳಲ್ಲಿ ಪ್ರಧಾನ ಕಲಾವಿದರಾಗಿ ಐವತ್ತೈದು ವರ್ಷಗಳಿಂದ ಸೇವೆ ಸಲ್ಲಿಸಿದ್ದ ಕಿನ್ನಿಗೋಳಿ ಮುಖ್ಯಪ್ರಾಣ ಶೆಟ್ಟಿಗಾರ್ ಅವರು ಓದಿದ್ದು ಐದನೇ ತರಗತಿ ಮಾತ್ರ.

ರಂಗ ಸನ್ನಿವೇಶವನ್ನು ಸಾಕ್ಷಾತ್ಕರಿಸಿ ಪಾತ್ರಕ್ಕೆ ಒಪ್ಪುವ ಉತ್ತಮ ನಾಟ್ಯ ಹಾಗೂ ಅಭಿನಯವನ್ನು ಮಾಡಿ ಪಾತ್ರ ಪೋಷಣೆ ನೀಡುವ ಇವರು ಪೌರಾಣಿಕ ಮತ್ತು ಕಾಲ್ಪನಿಕ ಪ್ರಸಂಗಗಳೆರಡರಲ್ಲೂ ಉತ್ತಮವಾಗಿ ಪಾತ್ರ ನಿರ್ವಹಿಸಿ ಪ್ರಸಿದ್ಧರಾಗಿದ್ದಾರೆ.

ಮೃತರ ಅಂತ್ಯಕ್ರಿಯೆಯು ಭಾನುವಾರ ಬೆಳಗ್ಗೆ 10 ಗಂಟೆಗೆ ಕಿನ್ನಿಗೋಳಿ ಸಮೀಪದ ಗೊಲಿಜೋರದ ಉದಯಗಿರಿಯ ಅವರ ಸ್ವಗೃಹದಲ್ಲಿ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ