ನಾನು ಸಿಎಂ ಆಗಬೇಕೆಂಬುದು ನಮ್ಮ ಅಭಿಮಾನಿಗಳ ಆಸೆ :ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ

KannadaprabhaNewsNetwork |  
Published : Feb 23, 2025, 12:34 AM ISTUpdated : Feb 23, 2025, 12:55 PM IST
cvv | Kannada Prabha

ಸಾರಾಂಶ

ಎಲ್ಲ ನಾಯಕರಿಗೂ ಅಭಿಮಾನಿಗಳು ಇರುತ್ತಾರೆ. ಅವರಿಗೆ ಅವರ ನಾಯಕನೇ ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇರುತ್ತದೆ ಎಂದು ಸಚಿವ ಜಾರಕಿಹೊಳಿ ಹೇಳಿದ್ದಾರೆ.

ನವಲಗುಂದ: ನಾನು ಸಿಎಂ ಆಗಬೇಕೆಂಬುದು ನಮ್ಮ ಅಭಿಮಾನಿಗಳ ಆಸೆ ಎಂದು ಹೇಳಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಮುಂದಿನ ಚುನಾವಣೆಯನ್ನು ಸಿದ್ದರಾಮಯ್ಯ ನೇತೃತ್ವದಲ್ಲಿ ಮಾಡಬೇಕೋ ಬೇಡವೋ ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ ಎಂದರು.

ಪಟ್ಟಣದಲ್ಲಿ ಶಾಸಕ ಎನ್.ಎಚ್. ಕೋನರಡ್ಡಿ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಎಲ್ಲ ನಾಯಕರಿಗೂ ಅಭಿಮಾನಿಗಳು ಇರುತ್ತಾರೆ. ಅವರಿಗೆ ಅವರ ನಾಯಕನೇ ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇರುತ್ತದೆ. ಅದೇ ರೀತಿ ನನ್ನ ಅಭಿಮಾನಿಗಳಿಗೆ ನಾನು ಮುಖ್ಯಮಂತ್ರಿಯಾಗಬೇಕೆಂಬ ಆಸೆ ಇದೆ. ಸಿದ್ದರಾಮಯ್ಯ ನಾಯಕತ್ವದಲ್ಲೇ ಮುಂದಿನ ಚುನಾವಣೆ ಎದುರಿಸುವ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ತೀರ್ಮಾನ ದೆಹಲಿಯಲ್ಲಿ ಹೈಕಮಾಂಡ್‌ ಮಾಡುತ್ತದೆ. ಯಾರ ನೇತೃತ್ವ, ಯಾರು ಸಾರಥಿ ಎಂಬುದನ್ನು ಅಲ್ಲೇ ನಿರ್ಧರಿಸುತ್ತಾರೆ ಎಂದರು.

ಮುಂದಿನ ಹತ್ತು ವರ್ಷ ನಾನೇ ನಾಯಕ ಎಂದಿರುವ ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, ಅದನ್ನು ಹೈಕಮಾಂಡ್‌ ನಿರ್ಣಯ ಮಾಡುತ್ತದೆ. ನಿರ್ಧಾರ ಮಾಡುವ ಮಾಲೀಕರು ಯಾರು? ನಮ್ಮ ಮಾಲೀಕರು ದೆಹಲಿಯಲ್ಲಿ ಇದ್ದಾರೆ. ಎರಡೂವರೆ ವರ್ಷ ಬಳಿಕ ಸಿಎಂ ಬದಲಾವಣೆ ವಿಚಾರ ನಮಗೆ ಗೊತ್ತಿಲ್ಲ. ಅದೂ ದೆಹಲಿಯವರೇ ನಿರ್ಧರಿಸಬೇಕು ಎಂದರು.

ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಸಚಿವ ಸ್ಥಾನದ ಆಕಾಂಕ್ಷಿಗಳು ಬಹಳಷ್ಟು ಶಾಸಕರಿದ್ದಾರೆ. ಆದರೆ, ಸಂಪುಟ ವಿಸ್ತರಣೆ ಯಾವಾಗ ಎನ್ನುವುದು ಗೊತ್ತಿಲ್ಲ. ಬಿಜೆಪಿಯವರು ಗ್ಯಾರಂಟಿ ಯೋಜನೆ ಟೀಕಿಸಿದ್ದರು. ಆದರೆ ದೆಹಲಿಯಲ್ಲಿ ಅವರೇ ಈಗ ಕೊಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿಯೂ ಕೊಟ್ಟಿದ್ದಾರೆ. ಈ ಬಗ್ಗೆ ಪ್ರಹ್ಲಾದ ಜೋಶಿ ಅವರನ್ನೇ ಕೇಳಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಧಾರವಾಡ ಕೈಗಾರಿಕೆಗೆ ಹಿಡಕಲ್ ಡ್ಯಾಮ್ ನೀರು ತರುವ ವಿಚಾರದ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ. ಅದು ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ವಿಚಾರವಾಗಿದೆ. ಬೆಂಗಳೂರಿನಲ್ಲಿ ಸರ್ಕಾರ ಈ ಬಗ್ಗೆ ತೀರ್ಮಾನ ಮಾಡುತ್ತದೆ. ನೀರಿನ ಮಾರ್ಗ ಡೈವರ್ಟ್ ಮಾಡುತ್ತಿದ್ದಾರಾ ಎಂಬುದು ಗೊತ್ತಿಲ್ಲ. ಆದರೆ, ನೀರು ಒಯ್ಯುವ ವಿಚಾರ ಮಾತ್ರ ಗೊತ್ತು. ಈಗಾಗಲೇ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಶುರುವಾಗಿದೆ. ಸರ್ಕಾರವೇ ಈ ಬಗ್ಗೆ‌ ಬೆಳಕು ಚೆಲ್ಲಬೇಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ