ಟಿಪ್ಪರ್ ಲಾರಿ ಹರಿದು ರೈತ ಸಾವು: ಪರಿಹಾರಕ್ಕೆ ಆಗ್ರಹ

KannadaprabhaNewsNetwork | Published : Nov 20, 2024 12:34 AM

ಸಾರಾಂಶ

ಜಲ್ಲಿ ತುಂಬಿದ್ದ ಟಿಪ್ಪರ್ ಹರಿದ ತಕ್ಷಣ ಟಿವಿಎಸ್ ಮೊಪೆಡ್‌ ಸಂಪೂರ್ಣ ಜಖಂಗೊಂಡು ನಿಂಗೇಗೌಡ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮದ್ದೂರು ಠಾಣೆ ಪೊಲೀಸ್ ಅಧಿಕಾರಿಗಳಾದ ವೆಂಕಟೇಗೌಡ, ಶಶಿಕುಮಾರ್ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ರಸ್ತೆ ಕಾಮಗಾರಿಗೆ ಜಲ್ಲಿ ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಹರಿದು ರೈತ ಸಂಘದ ಕಾರ್ಯಕರ್ತ ಮೃತಪಟ್ಟ ಘಟನೆ ಸಮೀಪದ ಕರಡಕೆರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೈತ ನಿಂಗೇಗೌಡ (55) ಮೃತ ದುರ್ದೈವಿ. ನಿಂಗೇಗೌಡ ಜಾನುವಾರುಗಳಿಗೆ ತನ್ನ ಟಿವಿಎಸ್ ಮೊಪೆಡ್‌ನಲ್ಲಿ ಮೇವನ್ನು ತೆಗೆದುಕೊಂಡು ಹೋಗಿ ಮನೆ ಬಳಿ ಮೊಪೆಡ್ ನಿಲ್ಲಿಸಿ ಮೇವು ಇಳಿಸುವ ವೇಳೆ ರಸ್ತೆ ಕಾಮಗಾರಿಗೆ ಜಲ್ಲಿ ಸಾಗಿಸುತ್ತಿದ್ದ ಟಿಪ್ಪರ್ ಜಲ್ಲಿಯನ್ನು ಕೆಳಗೆ ಸುರಿಯಲು ಹಿಂಬದಿಗೆ ಚಲಿಸುವಾಗ ಚಾಲಕನ ನಿರ್ಲಕ್ಷ್ಯದಿಂದಾಗಿ ರೈತ ನಿಂಗೇಗೌಡನ ಮೇಲೆ ಹರಿದಿದೆ.

ಜಲ್ಲಿ ತುಂಬಿದ್ದ ಟಿಪ್ಪರ್ ಹರಿದ ತಕ್ಷಣ ಟಿವಿಎಸ್ ಮೊಪೆಡ್‌ ಸಂಪೂರ್ಣ ಜಖಂಗೊಂಡು ನಿಂಗೇಗೌಡ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮದ್ದೂರು ಠಾಣೆ ಪೊಲೀಸ್ ಅಧಿಕಾರಿಗಳಾದ ವೆಂಕಟೇಗೌಡ, ಶಶಿಕುಮಾರ್ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಪರಿಹಾರಕ್ಕಾಗಿ ಪ್ರತಿಭಟನೆ:

ಅಪಘಾತ ಚಾಲಕನ ನಿರ್ಲಕ್ಷ್ಯದಿಂದ ನಡೆದಿದೆ. ರಸ್ತೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಹಾಗೂ ಟಿಪ್ಪರ್ ಮಾಲೀಕ ಸ್ಥಳಕ್ಕೆ ಆಗಮಿಸಿ ರೈತ ನಿಂಗೇಗೌಡರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಮೃತ ದೇಹವನ್ನು ಸ್ಥಳದಿಂದ ತೆರವುಗೊಳಿಸದಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದರು.

ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಗುತ್ತಿಗೆದಾರರು ಹಾಗೂ ಟಿಪ್ಪರ್ ಮಾಲೀಕರಿಗೆ ದೂರವಾಣಿ ಮೂಲಕ ಸ್ಥಳಕ್ಕೆ ಆಗಮಿಸುವಂತೆ ತಿಳಿಸಿದರು. ನಂತರ ಸ್ಥಳಕ್ಕೆ ಆಗಮಿಸಿದ ಗುತ್ತಿಗೆ ಪಡೆದಿದ್ದ ಎಸ್‌ಸಿಸಿ ಕಂಪನಿ ಅಧಿಕಾರಿ ಮೃತನಿಗೆ ತಾತ್ಕಾಲಿಕವಾಗಿ 2.5 ಲಕ್ಷ ರು. ಪರಿಹಾರ ನೀಡುವುದಾಗಿ ಮತ್ತು ಉಳಿಕೆ ಹಣವನ್ನು ವಿಮೆ ಮೂಲಕ ಕೊಡಿಸಿಕೊಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆದರು.

ನಂತರ ಮೃತ ದೇಹವನ್ನು ಸ್ಥಳದಿಂದ ತೆರವುಗೊಳಿಸಿ ಭಾರತೀನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶವ ಪರೀಕ್ಷೆಗೆ ನೀಡಲಾಯಿತು. ಪಂಚನಾಮೆ ನಡೆಸಿದ ಬಳಿಕ ವಾರಸುದಾರರಿಗೆ ಒಪ್ಪಿಸಲಾಯಿತು. ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.

Share this article