ಕೂಡ್ಲಿಗಿ: ತಾಲೂಕಿನ ಹುಲಿಕೆರೆ ಗ್ರಾಮದ ಕೆರೆ ಐದು ದಶಕಗಳ ನಂತರ ಕೋಡಿ ಬಿದ್ದಿದ್ದು ಪರಿಣಾಮ ಹಿನ್ನೀರು ಆವರಿಸಿ 55ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಮಾಡಿದ್ದು ಜನಜೀವನ ಅಸ್ತವ್ಯಸ್ತವಾಗಿದ್ದರೂ ತಹಸೀಲ್ದಾರ್ ಭೇಟಿ ನೀಡಿ ಇಲ್ಲಿಯ ನೊಂದ ಕುಟುಂಬಗಳಿಗೆ ಆಸರೆ ನೀಡಿದ್ದಿಲ್ಲ. ಹೀಗಾಗಿ, ಅ. 30ರಂದು ಕನ್ನಡಪ್ರಭ 55 ವರ್ಷಗಳ ಬಳಿಕ ತುಂಬಿದ ಹುಲಿಕೆರೆ ಕೆರೆ, ಸಂಕಷ್ಟ ಸೃಷ್ಟಿ ಎನ್ನುವ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತು ಇತ್ತೀಚೆಗೆ ಹಾನಿಗೊಳಗಾದ ಪ್ರದೇಶಕ್ಕೆ ಕೂಡ್ಲಿಗಿ ತಹಸೀಲ್ದಾರ್ ರೇಣುಕಮ್ಮ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಇಲ್ಲಿಯ ಜನತೆಯ ಕಷ್ಟ ಆಲಿಸಿದರು.
ಕೆರೆ ನೀರು ತುಂಬಿದ್ದರಿಂದ 55ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮನೆಗಳು ಕುಸಿಯುವ ಭೀತಿ ಇದ್ದು ಕುಟುಂಬದವರಿಗೆ ವಾಸಿಸಲು ಸಮಸ್ಯೆ ಆಗಿದೆ. ಮಕ್ಕಳಿಗೆ ಶಾಲೆಗೆ ತೆರಳಲು ಹಿರೇಕುಂಬಳಗುಂಟೆ ಗ್ರಾಮ ಸೇರಿದಂತೆ ಇತರೆ ಗ್ರಾಮಕ್ಕೆ ಹೋಗುವ ರಸ್ತೆ ಸಂಪರ್ಕ ಬಂದ್ ಆಗಿದೆತಹಸೀಲ್ದಾರ್ ಭೇಟಿ ಪರಿಹಾರಕ್ಕೆ ಹರಸಾಹ
ಇಲ್ಲಿನ ಸಂತ್ರಸ್ತರಿಗೆ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಬೇರೆ ಜಾಗ ಗುರುತಿಸಿ ಅಲ್ಲಿ ನಿವೇಶನ ಕೊಡಬಹುದೇ ಅಥವಾ ನೀರು ಕಮ್ಮಿ ಆದಾಗ ತಡೆಗೋಡೆ ನಿರ್ಮಾಣ ಮಾಡಬಹುದೇ ಎಂಬುದರ ಕುರಿತು ಚರ್ಚೆ ನಡೆಸಿ ಸೂಕ್ತ ಪರಿಹಾರವನ್ನು ಆದಷ್ಟು ಬೇಗನೆ ತಾಲೂಕು ಆಡಳಿತ ಮಾಡಲಿದೆ ಎಂದು ನೊಂದ ಕುಟುಂಬಗಳಿಗೆ ತಹಸೀಲ್ದಾರ್ ರೇಣುಕಾ ಭರವಸೆ ನೀಡಿದ್ದಾರೆ.ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರಸಪ್ಪ ಮಾತನಾಡಿ, ಎಷ್ಟು ಮನೆಗಳಿಗೆ ಹಾನಿಯಾಗಿವೆ ಎಂದು ನಾಳೆಯೇ ಸಮೀಕ್ಷೆ ನಡೆಸಲಾಗುವುದು. ನಂತರ ಸಂಬಂಧಿಸಿದ ಎಂಜಿನಿಯರ್ ಕರೆಯಿಸಿ ಮುಂದೆ ಏನು ಮಾಡಬಹುದು ಎಂದು ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಸಂತ್ರಸ್ತರಾದ ತಿಪ್ಪೇಸ್ವಾಮಿ ಹಾಗೂ ಶಂಕರಣ್ಣ ಮಾತನಾಡಿ, ನಾವು ಈಗಾಗಲೇ 50 ವರ್ಷಗಳಿಂದ ಈ ಮನೆಗಳಲ್ಲಿ ವಾಸವಾಗಿದ್ದೇವೆ. ಈಗ ಬೇರೆ ಕಡೆ ನಿವೇಶನ ಕೊಟ್ಟರೆ ಇಲ್ಲಿ ಲಕ್ಷಾಂತರ ಖರ್ಚು ಮಾಡಿ ಕಟ್ಟಿಸಿರುವ ಮನೆಯ ಗತಿ ಹೇಗೆ ಎಂದು ಅಳಲು ತೋಡಿಕೊಂಡರು. ಹಿರೇಕುಂಬಳಗುಂಟೆ ಪಿಡಿಒ ನಿಂಗಪ್ಪ, ಕಂದಾಯ ನಿರೀಕ್ಷಕ ಸಿದ್ದಪ್ಪ, ಗ್ರಾಮ ಲೆಕ್ಕಾಧಿಕಾರಿ ಇಮ್ರಾನ್, ತಾಲೂಕು ಸರ್ವೇಯರ್ ಸಿ.ಎಂ. ಮಂಜುನಾಥ, ಬಿಲ್ ಕಲೆಕ್ಟರ್ ಚಿನ್ನಾಪ್ರಿ, ಗುಂಡುಮುಣುಗು ರುದ್ರೇಶ, ಗ್ರಾಮ ಸೇವಕ ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ದುರುಗೇಶ, ಮಾರಪ್ಪ, ಗ್ರಾಮದ ಗಾದ್ರೆಪ್ಪ, ಕರಿಬಸಪ್ಪ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.