ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ ನೀಡಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ದೆಹಲಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ನ್ಯಾಯಯುತ ಪ್ರತಿಭಟನೆ ಬೆಂಬಲಿಸಿ, ನೀಟ್ ಅಕ್ರಮ ವಿರೋಧಿಸಿ, ನೀಟ್ ಪರೀಕ್ಷೆ, ಎನ್ ಟಿಎ ರದ್ದತಿಗೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ನೇತೃತ್ವದಲ್ಲಿ ರೈತ, ಕಾರ್ಮಿಕ, ದಲಿತ, ಪ್ರಗತಿಪರ ಸಂಘಟನೆಯವರು ನಗರದ ಗಾಂಧಿ ಚೌಕದಲ್ಲಿ ಶುಕ್ರವಾರ ಸಂಜೆ ಪ್ರತಿಭಟಿಸಿದರು.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ ನೀಡಬೇಕು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು. ದೆಹಲಿಯಲ್ಲಿ ಹೋರಾಟ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಲಾಠಿಚಾರ್ಜ್ ಮಾಡಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಈ ವೇಳೆ ಹಿರಿಯ ರಂಗಕರ್ಮಿ ಎಚ್. ಜನಾರ್ಧನ್ ಮಾತನಾಡಿ, ಮಕ್ಕಳ ಆತ್ಮಹತ್ಯೆ ನಡೆದರೂ ಕೇಂದ್ರ ಸರ್ಕಾರಕ್ಕೆ ಸಣ್ಣ ಮರುಕವೂ ಇಲ್ಲ. ನ್ಯಾಯಯುತ ಬೇಡಿಕೆ ಇರಿಸಿ ಹೋರಾಟ ನಡೆಸುತ್ತಿದ್ದರೂ ಶಿಕ್ಷಣ ಮಂತ್ರಿ, ಪ್ರಧಾನ ಮಂತ್ರಿ ಕನಿಷ್ಟ ಸಂತಾಪವನ್ನೂ ಸೂಚಿಸದಿರುವುದು ಈ ಸರ್ಕಾರ ಸರ್ವಾಧಿಕಾರಿ ಧೋರಣೆ ತೋರಿಸುತ್ತದೆ ಎಂದು ಕಿಡಿಕಾರಿದರು.
ದೆಹಲಿಯಲ್ಲಿ ವಿದ್ಯಾರ್ಥಿಗಳು ಹೋರಾಟ ಮಾಡುವಾಗ ಹೆಣ್ಣು ಮಕ್ಕಳೂ ಎಂದು ಕಾಣದೆ ಲಾಠಿ ಚಾರ್ಜ್ ಮಾಡಿರುವು ಖಂಡನೀಯ. ಸರ್ಕಾರ ಕೂಡಲೇ ಶಿಕ್ಷಣ ಸಚಿವರ ರಾಜೀನಾಮೆ ಪಡಯಬೇಕು ಎಂದು ಅವರು ಆಗ್ರಹಿಸಿದರು.
ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಟಿ.ಎಸ್. ವಿಜಯ್ ಕುಮಾರ್, ರಾಜ್ಯ ರೈತ ಸಂಘದ ಹೊಸಕೋಟೆ ಬಸವರಾಜ್, ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಮುಖಂಡರಾದ ಪಿ. ಮರಂಕಯ್ಯ, ಮಂಡಕಳ್ಳಿ ಮಹೇಶ್, ನೆಲೆ ಹಿನ್ನೆಲೆ ಗೋಪಾಲಕೃಷ್ಣ, ಸವಿತಾ ಪ. ಮಲ್ಲೇಶ್, ಜಿ. ಜಯರಾಂ, ಅಣ್ಣಪ್ಪ, ಪ್ರೊ. ಕಾಳಚನ್ನೇಗೌಡ, ಡಾ. ಪೂರ್ಣಾನಂದ, ವಸಂತ್ ಕಲಾಲ್, ಅನಿಲ್ ಕುಮಾರ್, ಶ್ರೀಧರ್, ರಂಜಿತ, ಮೆಹಬೂಬ್, ಪ್ರವೀಣ, ಚನ್ನಕೇಶವ, ಚಂದ್ರಶೇಖರ್, ರಾಮು, ಇರ್ಷಾದ್, ಸಾಹಿದ್, ಆಕಾಶ್, ಖುಷಿ, ಶಿವಕುಮಾರ್, ಓಹಿಸ್ ಖಾನ್, ಆಬ್ಸಿಯಾನ್, ಸಂಜೀವ್, ಅಭಿ ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.