- ಜು.೪ರಂದು ಸಭೆ ನಡೆಸಿ ಸಮಸ್ಯೆಗಳ ಚರ್ಚೆ: ಡಿಸಿ ಭರವಸೆ
ಮಲೇಬೆನ್ನೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತ ಮುಖಂಡರು ಸೋಮವಾರ ಸಮೀಪದ ಹಾಲಿವಾಣ, ಮಲೇಬೆನ್ನೂರು ಮೂಲಕ ರಸ್ತೆ ತಡೆ ನಡೆಸಿ, ಜಿಲ್ಲಾಧಿಕಾರಿ ಕಚೇರಿವರೆಗೆ ಬೈಕ್ ರ್‍ಯಾಲಿ ನಡೆಸಿದರು.
ಬೆಳಗ್ಗೆ ಹಾಲಿವಾಣ ಗ್ರಾಮದ ಕರಿಯಮ್ಮ ದೇವಾಲಯ ಆವರಣದಲ್ಲಿ ಜಮಾವಣೆಗೊಂಡ ರೈತ ಮುಖಂಡರು, ಅತಿವೃಷ್ಠಿ ಆಲಿಕಲ್ಲು ಮಳೆಯಿಂದ ಕೊಮಾರನಹಳ್ಳಿ, ಕೊಪ್ಪ, ಹಾಲಿವಾಣ, ಮಲೇಬೆನ್ನೂರು, ಸಿರಿಗೆರೆ, ಕುಂಬಳೂರು ಗ್ರಾಮಗಳ ಅನೇಕ ರೈತರ ಭತ್ತ, ಬಾಳೆ, ಮತ್ತು ಅಡಕೆ ಬೆಳೆಗೆ ಹಾನಿಯಾಗಿದೆ. ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದರೂ ರೈತರಿಗೆ ಬೆಳೆ ಹಾನಿ ಪರಿಹಾರ ಬಂದಿಲ್ಲ. ಆವರ್ತ ನಿಧಿಯಲ್ಲಿ ಹಣ ಇದೆಯೋ ಇಲ್ಲವೋ ಅಧಿಕಾರಿಗಳು ತಿಳಿಸುತ್ತಿಲ್ಲ ಎಂದರು.ಬಕರ್‌ಹುಕುಂ ರೈತರಿಗೆ ಸಾಗುವಳಿ ಪತ್ರ ನೀಡದಿರುವ ಕಾರಣ ಬೈಕ್ ರ್‍ಯಾಲಿ ಮೂಲಕ ಮಲೇಬೆನ್ನೂರು ನೀರಾವರಿ ಇಲಾಖೆ ಆವರಣದಲ್ಲಿ ಸಭೆ ನಡೆಸಿ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿ ಡಿಸಿಗೆ ಮನವಿ ನೀಡಿದ್ದೇವೆ ಎಂದು ರೈತ ಸಂಘದ ರಾಜ್ಯ ಕಾರ್ಯಾದ್ಯಕ್ಷ ಹಾಳೂರು ನಾಗರಾಜ್ ಈ ಸಂದರ್ಭ ತಿಳಿಸಿದರು.
ನಂದಿತಾವರೆ ನಂದೀಶ್ ಮಾತನಾಡಿ, ವಿದ್ಯುತ್ ವಲಯ ಖಾಸಗೀಕರಣ ಮಾಡುವ ಸರ್ಕಾರದ ಹುನ್ನಾರಕ್ಕೆ ಲಕ್ಷಾಂತರ ರೈತರ ವಿರೋಧವಿದೆ. ಯಾವುದೋ ಖಾಸಗಿ ಕಂಪನಿ ಮನವಿಗೆ ಸೊಪ್ಪು ಹಾಕದೇ ಯಥಾಸ್ಥಿತಿಯಲ್ಲಿ ಬೆಸ್ಕಾಂ ಉಳಿಸಬೇಕು ಎಂದು ಒತ್ತಾಯಿಸಿದರು.
- - -