ಕಳೆದೆರಡು ವರ್ಷಗಳ ಹಿಂದೆ ನ್ಯಾಮತಿ ಎಸ್‌ಬಿಐ ಶಾಖೆಯಲ್ಲಿ ದರೋಡೆಯಾಗಿದ್ದ ಗ್ರಾಹಕರ ಅಡವಿಟ್ಟ ಆಭರಣಗಳು ಕೆಲ ತಿಂಗಳಗಳ ಹಿಂದೆ ಪಟ್ಟಣದ ಪೋಲಿಸರು ಪತ್ತೆ ಹಚ್ಚಿ ಬ್ಯಾಂಕಿಗೆ ಹಿಂದಿರುಗಿಸಿದ್ದಾರೆ. ಆದರೆ, ಆಭರಣ ಅಡವಿಟ್ಟು ಸಾಲ ತೆಗೆದುಕೊಂಡಿದ್ದ ಗ್ರಾಹಕರಿಗೆ ಆಭರಣಗಳನ್ನು ವಾಪಸ್ ನೀಡುತ್ತಿಲ್ಲ. ಈ ಹಿನ್ನೆಲೆ ಬ್ಯಾಂಕಿನ ಅಡಮಾನ ಸಾಲದ ಗ್ರಾಹಕರು ಪದೇಪದೇ ಪ್ರತಿಭಟನೆ ಮಾಡುತ್ತಿದ್ದು, ಮಂಗಳವಾರ ಮತ್ತೆ ಬ್ಯಾಂಕ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
- ಶಾಸಕ ಶಾಂತನಗೌಡ, ಮಾಜಿ ಶಾಸಕ ರೇಣುಕಾಚಾರ್ಯ ಭೇಟಿ: ಸಂಧಾನ
- - -
ಕನ್ನಡಪ್ರಭ ವಾರ್ತೆ ನ್ಯಾಮತಿ
ಕಳೆದೆರಡು ವರ್ಷಗಳ ಹಿಂದೆ ನ್ಯಾಮತಿ ಎಸ್‌ಬಿಐ ಶಾಖೆಯಲ್ಲಿ ದರೋಡೆಯಾಗಿದ್ದ ಗ್ರಾಹಕರ ಅಡವಿಟ್ಟ ಆಭರಣಗಳು ಕೆಲ ತಿಂಗಳಗಳ ಹಿಂದೆ ಪಟ್ಟಣದ ಪೋಲಿಸರು ಪತ್ತೆ ಹಚ್ಚಿ ಬ್ಯಾಂಕಿಗೆ ಹಿಂದಿರುಗಿಸಿದ್ದಾರೆ. ಆದರೆ, ಆಭರಣ ಅಡವಿಟ್ಟು ಸಾಲ ತೆಗೆದುಕೊಂಡಿದ್ದ ಗ್ರಾಹಕರಿಗೆ ಆಭರಣಗಳನ್ನು ವಾಪಸ್ ನೀಡುತ್ತಿಲ್ಲ. ಈ ಹಿನ್ನೆಲೆ ಬ್ಯಾಂಕಿನ ಅಡಮಾನ ಸಾಲದ ಗ್ರಾಹಕರು ಪದೇಪದೇ ಪ್ರತಿಭಟನೆ ಮಾಡುತ್ತಿದ್ದು, ಮಂಗಳವಾರ ಮತ್ತೆ ಬ್ಯಾಂಕ್ ವಿರುದ್ಧ ಪ್ರತಿಭಟನೆ ನಡೆಸಿದರು.
ಕಳೆದ ವಾರದ ಪ್ರತಿಭಟನೆಯಲ್ಲಿ ಬ್ಯಾಂಕಿನ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಒಮ್ಮತ ಮೂಡಲಿಲ್ಲ. ಆದಕಾರಣ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಬ್ಯಾಂಕಿನ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಪುನಃ ಗ್ರಾಹಕರೊಂದಿಗೆ ಚರ್ಚಿಸಿ ಗ್ರಾಹಕರು ಶನಿವಾರದವರೆಗೂ ಗಡುವು ನೀಡಿದ್ದರು. ಪ್ರತಿಭಟನಾಕಾರರು ಗಡುವು ಮುಗಿದ ಹಿನ್ನೆಲೆ ಮತ್ತೆ ಮಂಗಳವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು. ಬೇಕೇ ಬೇಕು ಆಭರಣಗಳು ಎಂದು ಕೂಗಿದರು.
ಅಡವಿಟ್ಟ ಆಭರಣಗಳ ಅಸಲು ಬಡ್ಡಿ ಕಟ್ಟುತ್ತೇವೆ, ಆಭರಣಗಳನ್ನು ಹಿಂತಿರುಗಿಸಿ. ಗ್ರಾಹಕರಿಗೆ ಸೇರಿದ 17.705 ಕೆಜಿ ಚಿನ್ನಾಭರಣ ದರೋಡೆಯಾಗಿದೆ. ಇದರಲ್ಲಿ 13.300 ಕೆಜಿ ಆಭರಣ ಸಿಕ್ಕಿದೆ. ಇನ್ನುಳಿದ 5 ಕೆಜಿ ಆಭರಣ ಎಲ್ಲಿ? ನಮ್ಮ ಆಭರಣ ನಮಗೆ ನೀಡಿ ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.
ಶಾಂತನಗೌಡ, ರೇಣು ಭೇಟಿ:
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಡಿ.ಜಿ.ಶಾಂತನಗೌಡ ಮತ್ತು ಮಾಜಿ ಶಾಸಕ ಎಂ.ರೇಣುಕಾಚಾರ್ಯ ಗ್ರಾಹಕರು ಹಾಗೂ ಬ್ಯಾಂಕಿನ ಅಧಿಕಾರಿಗಳೊಂದಿಗೆ ಚರ್ಚಿಸಿ ಸಂಧಾನ ನಡೆಸಿ, ಅಡವಿಟ್ಟ ಚಿನ್ನಾಭರಣ ಗ್ರಾಹಕರಿಗೆ ಸೂಕ್ತ ಮಾಹಿತಿ ನೀಡಿ ಹಣ ನೀಡಿದ ಮೇಲೆ ಅವರಿಗೆ ನಿಗದಿತ ದಿನದೊಳಗೆ ಚಿನ್ನಾಭರಣವನ್ನು ವಾಪಸ್ ನೀಡಬೇಕು ಹಾಗೂ ಗ್ರಾಹಕರ ಸಮಸ್ಯೆ ಇತ್ಯರ್ಥ ಆಗುವವರೆಗೂ ಇಲ್ಲಿಯ ಶಾಖೆಗೆ ಹೆಚ್ಚಿನ ಅಧಿಕಾರಿಗಳನ್ನು ನಿಯೋಜಿಸಬೇಕೆಂದು ಹೇಳಿದರು.
3 ದಿನದೊಳಗೆ ವಾಪಸ್:
ಬ್ಯಾಂಕ್‌ನ ಉಸ್ತುವಾರಿ ಆನಂದ್ ನಲ್ಕುದರೆ, ಪ್ರಾದೇಶಿಕ ವ್ಯವಸ್ಥಾಪಕ ಕೋಟಾ ಜನಾರ್ಧನ, ಮುಖ್ಯ ವ್ಯವಸ್ಥಾಪಕ ಸುರೇಶ್ ಕೆ., ಮಾತನಾಡಿ ಶಾಖೆಯಲ್ಲಿ ಚಿನ್ನಾಭರಣ ಕಳುವಿನ ವಿಷಯ ನ್ಯಾಯಾಲಯದಲ್ಲಿ ಈ ಹಿಂದೆ ಪೊಲೀಸ್ ಠಾಣೆಗೆ ದೂರು ನೀಡಿದ ವಿವರದೊಂದಿಗೆ ಗ್ರಾಹಕರಿಗೆ ಮಾಹಿತಿ ನೀಡಿದರು. ಹೆಚ್ಚಿನ ಬಡ್ಡಿ ಪಾವತಿ ಮಾಡಿರುವ ಗ್ರಾಹಕರು ಬ್ಯಾಂಕ್‌ನಲ್ಲಿ ಅಡವಿಟ್ಟ ಚಿನ್ನಾಭರಣದ ಮಾಹಿತಿಯೊಂದಿಗೆ ವ್ಯವಸ್ಥಾಪಕರಿಗೆ ನೀಡಿದರೆ 3 ದಿನಗಳೊಳಗೆ ಹಣ ವಾಪಸ್ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಚನ್ನಗಿರಿ ಡಿವೈಎಸ್‌ಪಿ ರುದ್ರಪ್ಪ ಉಜ್ಜನಕೊಪ್ಪ, ನ್ಯಾಮತಿ ಪಿಐ ಎಚ್.ಎಂ. ಸಿದ್ದೇಗೌಡ, ಹೊನ್ನಾಳಿ ಪಿಐ ಸುನೀಲ್‌ಕುಮಾರ್, ಪಿಎಸ್‌ಐಗಳಾದ ಹೊಳೆಬಸಪ್ಪ, ಶೋಭರಾಣಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತು ಕೈಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.