ಡಿಸಿಎಂ ರಾಜೀನಾಮೆಗೆ ರೈತ ಮುಖಂಡರ ಒತ್ತಾಯ

KannadaprabhaNewsNetwork | Published : Mar 27, 2025 1:02 AM

ಸಾರಾಂಶ

ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನವೊಂದರಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಂದು ಸಮುದಾಯದ ಓಲೈಕೆಗಾಗಿ ಬಾಬಾ ಸಾಹೇಬರ ಮೂಲ ಸಂವಿಧಾನ ಬದಲಾವಣೆ ಮಾಡಲು ಸಿದ್ಧ ಎಂಬ ಹೇಳಿಕೆ ನೀಡಿರುವುದು ನಮ್ಮ ಸಂವಿಧಾನ ಹಾಗು ಬಾಬಾ ಸಾಹೇಬರಿಗೆ ಮಾಡಿದ ಅಪಮಾನ ಎಂದು ಪ್ರಗತಿಪರ ಸಂಘಟನೆಗಳ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಕನಕಪುರ

ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನವೊಂದರಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಂದು ಸಮುದಾಯದ ಓಲೈಕೆಗಾಗಿ ಬಾಬಾ ಸಾಹೇಬರ ಮೂಲ ಸಂವಿಧಾನ ಬದಲಾವಣೆ ಮಾಡಲು ಸಿದ್ಧ ಎಂಬ ಹೇಳಿಕೆ ನೀಡಿರುವುದು ನಮ್ಮ ಸಂವಿಧಾನ ಹಾಗು ಬಾಬಾ ಸಾಹೇಬರಿಗೆ ಮಾಡಿದ ಅಪಮಾನ ಎಂದು ಪ್ರಗತಿಪರ ಸಂಘಟನೆಗಳ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ತಮ್ಮ ಹುದ್ದೆ ಹಾಗೂ ಜವಾಬ್ದಾರಿ ನಿರ್ವಹಣೆಯಲ್ಲಿ ವಿಫಲರಾಗಿದ್ದು ಪ್ರಾದೇಶಿಕವಾಗಿ ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ಅವರಿಗೆ ಶೋಭೆಯಲ್ಲ. ಮೊನ್ನೆಯಷ್ಟೇ ಮಂಡ್ಯ ಜಿಲ್ಲೆ ಜನರನ್ನು ಛತ್ರಿಗಳು ಎಂದು ಸಂಬೋಧಿಸಿದ್ದರು. ತಮ್ಮದೇ ಕ್ಷೇತ್ರದ ಉಯ್ಯಂಬಳ್ಳಿ ಹೋಬಳಿಯ ಹೊಂಗಾಣಿ ದೊಡ್ಡಿ ಜನರಿಗೆ ಸಂವಿಧಾನದಡಿ ನ್ಯಾಯ ಒದಗಿಸದ ಡಿಕೆಶಿ ಸಂವಿಧಾನ ಬದಲಾವಣೆಗೆ ಸಿದ್ದವೆಂದಿರುವುದು ಬೆಂಬಲಿಗ ಶಾಸಕರ ರಕ್ಷಣೆ ಹಾಗೂ ಹಿಂಬಾಲಕರ ಆರ್ಥಿಕ ಅಭಿವೃದ್ಧಿಗೆ ಹೊರಟಂತಿದೆ ಎಂದು ಆರೋಪಿಸಿದರು.

ದೇಶದ ಸಂವಿಧಾನ ಹಾಗೂ ಬಾಬಾ ಸಾಹೇಬರ ಮೂಲ ಸಿದ್ಧಾಂತದ ಬದಲಾವಣೆ ಧ್ವನಿ ಎತ್ತಿದ ಬಿಜೆಪಿ ಸಂಸದ ಅನಂತಕುಮಾರ ಹೆಗ್ಡೆ ಅವರ ಇಂದಿನ ಪರಿಸ್ಥಿತಿ ನೋಡಿಯೂ ನಮ್ಮ ಉಪಮುಖ್ಯಮಂತ್ರಿಗಳಿಗೆ ಬುದ್ಧಿ ಬರದಿರುವುದು ದುರದೃಷ್ಟಕರ. ಇಂತಹ ತುಘಲಕ್ ದರ್ಬಾರ್ ಆಲೋಚನೆ ಇರುವ ಉಪ ಮುಖ್ಯಮಂತ್ರಿಗಳು ರಾಜ್ಯದ ಹಿತದೃಷ್ಟಿ ಹಾಗೂ ನೈತಿಕತೆ ಇದ್ದರೆ ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.

ಈ ಹಿಂದೆ ಅನಂತಕುಮಾರ ಹೆಗ್ಡೆ ಅವರ ಹೇಳಿಕೆಗೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂವಿಧಾನದ ಬದಲಾವಣೆ ಸೊಲ್ಲು ಎತ್ತಿದರೆ ರಕ್ತಕ್ರಾಂತಿ ನಡೆಯುತ್ತದೆ ಎಂದು ಹೇಳಿದ್ದಾರೆ. ಆದರೆ ಇಂದು ಸರ್ಕಾರದ ಉಪಮುಖ್ಯಮಂತ್ರಿಗಳ ವಿರುದ್ಧ ರಾಜ್ಯದ ಜನತೆಗೆ ಯಾವ ಸಮಜಾಯಿಷಿ ನೀಡುವಿರಿ ಎಂದು ಪ್ರಶ್ನಿಸಿದರು.

ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ರಾಜ್ಯದ ಉನ್ನತ ಹುದ್ದೆಯಲ್ಲಿರುವ ಉಪಮುಖ್ಯಮಂತ್ರಿಗಳು ರಾಜ್ಯದ ಜನತೆಯ ಕಾನೂನಾತ್ಮಕ ಹಕ್ಕು ಸ್ವಾತಂತ್ರ್ಯದ ಬಗ್ಗೆ ಒಲವಿಲ್ಲದೆ, ಒಂದು ಸಮುದಾಯದ ಓಲೈಕೆಗಾಗಿ ಸಂವಿಧಾನದ ಬದಲಾವಣೆ ಕುರಿತು ಮಾತನಾಡಿರುವುದು ಖಂಡನೀಯ. ಇದು ರಾಜ್ಯದ ಅಸ್ಮಿತೆಯನ್ನು ಕದಡುವ ಮನೋಭಾವನೆ ಈ ರೀತಿಯ ಹೇಳಿಕೆ ಅವರ ಹುದ್ದೆಗೆ ಶೋಭೇತರುವಂತಹದಲ್ಲ ಈ ಕೂಡಲೇ ಮಾನ್ಯ ಉಪ ಮುಖ್ಯಮತ್ರಿಗಳು ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಸ್ಪಷ್ಟತೆ ನೀಡುವುದರ ಜೊತೆಗೆ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಮುನಿಸಿದ್ದೇಗೌಡ, ಯುವ ಘಟಕದ ಅಧ್ಯಕ್ಷ ಸಿದ್ದರಾಜು, ರೈತ ಮುಖಂಡ ನಾಗರಾಜು ಸಾಮಾಜಿಕ ಹೋರಾಟಗಾರ ಮರಳವಾಡಿ ಕಿಶೋರ್ ಇತರರು ಉಪಸ್ಥಿತರಿದ್ದರು.

Share this article